ಮೈಸೂರು, ಮಾರ್ಚ್ 22,2022 (www.justkannada.in): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದ ಸಹಯೋಗದಲ್ಲಿ ಇಂದು ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಲಾಮಂದಿರದಲ್ಲಿ ನಡೆಯಲಿರುವ ‘ಧರೆಗೆ ದೊಡ್ಡವರು ಉತ್ಸವದ’ ಅಹೋರಾತ್ರಿ ಕಾರ್ಯಕ್ರಮವು ವಾರ್ತಾ ಇಲಾಖೆಯ ಫೇಸ್ ಬುಕ್ ಪೇಜ್ನಲ್ಲಿ ನೇರಪ್ರಸಾರವಾಗಲಿದೆ.
ಮಂಟೇಸ್ವಾಮಿ ಕುರಿತು ಜನಪದ ಆಚರಣೆಗಳನ್ನು ಹಾಗೂ ಅವರ ಕಾವ್ಯ, ಸಾಹಿತ್ಯವನ್ನು ಜೀವಂತವಾಗಿ ಉಳಿಸುವ ನಿಟ್ಟಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ವೀಕ್ಷಕರು ಫೆಸ್ ಬುಕ್ ಪೇಜ್ ಲಿಂಕ್ https://www.facebook.com/mysorevarthe ಹಾಗೂ ಯೂಟ್ಯೂಬ್ ಲಿಂಕ್ https://youtu.be/cGlg69hWRNY ಮೂಲಕ ಕಣ್ತುಂಬಿಕೊಳ್ಳಬಹದು. ಕಾರ್ಯಕ್ರಮವನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ವೀಕ್ಷಿಸಬಹುದಾಗಿದೆ.
ಕಾರ್ಯಕ್ರಮ ವಿವರ ಇಂತಿದೆ:
ಮಂಟೆಸ್ವಾಮಿ ಕಥನದ ಅಹೋರಾತ್ರಿ ಜುಗಲ್ ಬಂದಿ ಕಾವ್ಯ ಗಾಯನವು ಸಂಜೆ 6 ರಿಂದ 7 ರವರೆಗೆ ಡಾ.ಮಳವಳ್ಳಿ ಮಹದೇವಸ್ವಾಮಿ ಅವರಿಂದ ಧರೆ ಸೃಷ್ಟಿ ಸಾಲು, ರಾತ್ರಿ 7 ರಿಂದ 8 ರವರೆಗೆ ಮೈಸೂರು ಗುರುರಾಜ್ ಅವರಿಂದ ಕಲ್ಯಾಣ ಪಟ್ಟಣ ಸಾಲು, ರಾತ್ರಿ 8 ರಿಂದ 9 ರವರೆಗೆ ಡಾ.ಮಳವಳ್ಳಿ ಮಹದೇವಸ್ವಾಮಿ ಅವರಿಂದ ವಿಜಯನಗರ ಗಾರುಡಿಗರು ಹಾಗೂ ಗೆದ್ದ ರಾಜಪ್ಪಾಜಿ ಗಾಯನ ಜರುಗಲಿದೆ.
ರಾತ್ರಿ 9 ರಿಂದ 10 ರವೆರೆಗೆ ಮೈಸೂರು ಗುರುರಾಜ್ ಅವರಿಂದ ಕಾಗಿನೆಲೆ ದೊಡ್ಡಮ್ಮತಾಯಿ, ದತ್ತು ಸ್ವೀಕಾರ ಸಾಲು, ರಾತ್ರಿ 10 ರಿಂದ 11 ರವರೆಗೆ ಡಾ.ಮಳವಳ್ಳಿ ಮಹದೇವಸ್ವಾಮಿ ಅವರಿಂದ ಚನ್ನಪಟ್ಟಣ ಚನ್ನಪ್ಪಾಜಿ ಸಾಲು ಗಾಯನ ನಡೆಯಲಿದೆ.
ರಾತ್ರಿ 11 ರಿಂದ 12 ರವರೆಗೆ ಮೈಸೂರು ಗುರುರಾಜ್ ಅವರಿಂದ ಮಾದಹಳ್ಳಿ ನಿಡುಗಟ್ಟ ಕೆಂಪಚಾರಿ ಸಾಲು, ರಾತ್ರಿ 12 ರಿಂದ 1 ರವರೆಗೆ ಡಾ. ಮಳವಳ್ಳಿ ಮಹದೇವಸ್ವಾಮಿ ಅವರಿಂದ ಸಿದ್ದಪಾಜಿಯ ಹಲಗೂರು ಸಾಲು, ರಾತ್ರಿ 1 ರಿಂದ 2 ರವರೆಗೆ ಮೈಸೂರು ಗುರುರಾಜ್ ಅವರಿಂದ ಪಾಂಚಾಳರ ಒಕ್ಕಲು ಪಡೆದ ಸಾಲು, ರಾತ್ರಿ 2 ರಿಂದ 3 ರವರೆಗೆ ಡಾ. ಮಳವಳ್ಳಿ ಮಹದೇವಸ್ವಾಮಿ ಅವರಿಂದ ರಾಚಪ್ಪಾಜಿಯ ಕಪ್ಪಡಿ ಪಯಣದ ಸಾಲು ಗಾಯನ ಇರಲಿದೆ.
ರಾತ್ರಿ 3 ರಿಂದ 4 ರವರೆಗೆ ಮೈಸೂರು ಗುರುರಾಜ್ ಅವರಿಂದ ಮೈಸೂರು ಅರಸರ ಹರಸಿ ಕಪ್ಪಡಿಯಲಿ ನೆಲೆಗೊಂಡ ಸಾಲು, ಮುಂಜಾನೆ 4 ರಿಂದ 5 ರವರೆಗೆ ಡಾ. ಮಳವಳ್ಳಿ ಮಹದೇವಸ್ವಾಮಿ ಅವರಿಂದ ಕಬ್ಬಿಣ ತಂದು ಮಠ ಕಟ್ಟುವ ಸಾಲು, ಬೆಳಗ್ಗೆ 5 ರಿಂದ 6 ರವರೆಗೆ ಮೈಸೂರು ಗುರುರಾಜ್ ಅವರಿಂದ ಸಿದ್ದಪ್ಪಾಜಿಯವರು ಚಿಕ್ಕಲೂರಿನಲ್ಲಿ ಐಕ್ಯರಾದ ಸಾಲು, ಮಂಗಳ ಪದವನ್ನು ಎಲ್ಲಾ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ.
ಮಾರ್ಚ್ 23ರಂದು ಬೆಳಿಗ್ಗೆ ರಾಮಕೃಷ್ಣನಗರದ ಸುಯೋಗ ಆಸ್ಪತ್ರೆಯ ಸಹಯೋಗದೊಂದಿಗೆ ಹೃದ್ರೋಗ ಸಕ್ಕರೆ ಕಾಯಿಲೆ, ನರರೋಗ, ಜೀರ್ಣಾಂಗ, ಸ್ತ್ರಿರೋಗಗಳು ಇತರೆ ಸಾಮಾನ್ಯ ಕಾಯಿಲೆ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಕರ್ನಾಟಕ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಲೆಯ ಮಹದೇಶ್ವರ ಮತ್ತು ಮಂಟೆಸ್ವಾಮಿ ಪರಂಪರೆಯ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಮಂಟೆಸ್ವಾಮಿ ಪರಂಪರೆಯ ಬಹುಮುಖ್ಯ ಭಾಗವಾಗಿರುವ ಕಂಡಾಯಗಳ ಮೆರವಣಿಗೆಯನ್ನು ಸಂಜೆ 4 ಗಂಟೆಗೆ ಚಾಮರಾಜ ಜೋಡಿ ರಸ್ತೆಯ (ಗಾಯತ್ರಿ ಟಾಕೀಸ್ ಸಮೀಪದ) ಮಂಟೆಸ್ವಾಮಿ ಗದ್ದಿಗೆಯಿಂದ ಬಸವೇಶ್ವರ ವೃತ್ತ, ಮಹಾನಗರ ಪಾಲಿಕೆ ಕಚೇರಿ ರಸ್ತೆಯ ಮುಖಾಂತರ ಕೆ.ಆರ್.ವೃತ್ತ ತಲುಪಿ ಅಲ್ಲಿಂದ ದೇವರಾಜ ಅರಸು ರಸ್ತೆಯ ಮೂಲಕ ಸಂಜೆ 5 ಗಂಟೆಗೆ ಕಲಾಮಂದಿರ ತಲುಪುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಚನ್ನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Tonight- festival-Live -YouTube -Facebook