ಮೈಸೂರು, 04, 04, 2022 (www.justkannada.in): ಈ ದೇಶ ಉಳಿಯಬೇಕಾದರೆ ಪ್ರತಿಭಾವಂತರಿಗೆ ಬೆಲೆ ಸಿಗಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಅಭಿನಂದನಾ ಸಮಿತಿಯು ಎಂಟೆಕ್ ಇನ್ ಮೇಟಿರಿಯಲ್ಸ್ ಸೈನ್ಸ್ ಅಧ್ಯಯನ ವಿಭಾಗ ಹಾಗೂ ಪರಿಸರ ಅಧ್ಯಯನ ವಿಭಾಗದ ಸಹಯೋಗದಲ್ಲಿ ಲಂಡನ್ ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಎಫ್ ಆರ್ ಎಸ್ ಸಿ) ಫೆಲೋಗೆ ಭಾಜನರಾಗಿರುವ ಪ್ರೊ. ಎಸ್.ಶ್ರೀಕಂಠಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಭಾವಂತ ಅಧ್ಯಾಪಕರು ಇಂದು ಮಾಯವಾಗುತ್ತಿದ್ದಾರೆ. ವಿಜ್ಞಾನ ತಂತ್ರಜ್ಞಾನ ಅಧೋಗತಿಗೆ ಹೋಗುತ್ತಿದೆ. ಸರಕಾರದ ಪ್ರೋತ್ಸಾಹ ಇಲ್ಲವಾಗಿದೆ. ಖಾಸಗಿಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಆದರೆ, ಸರಕಾರ ಮಟ್ಟದಲ್ಲಿ ಮೆರಿಟ್ ಇರುವವರೆಗೆ ಆದ್ಯತೆ ಸಿಗುತ್ತಿಲ್ಲ. ನಾನು ಕುಲಪತಿ ಅಸೋಸಿಯೇಷನ್ ಅಧ್ಯಕ್ಷನಾಗಿದ್ದೇನೆ. ನಮ್ಮಮಾತು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ 60 ಜನ ವಿದ್ಯಾರ್ಥಿಗಳು ವಿದೇಶದಲ್ಲಿ ಇದ್ದಾರೆ. ಕಾರಣ ಇಲ್ಲಿ ಅವರ ಪ್ರತಿಭೆಯನ್ನು ಗುರುತಿಸಲಿಲ್ಲ. ಹಾಗಾಗಿ ಈ ದೇಶ ಉಳಿಯಬೇಕಾದರೆ ಪ್ರತಿಭೆಗೆ ಬೆಲೆಕೊಡಬೇಕಿದೆ. ಭಾರತದಲ್ಲಿ ಬೆಸ್ಟ್ ಕಲ್ಜರ್ ಇದೆ. ಅತಿಹೆಚ್ಚು ಬುದ್ಧಿವಂತರು ಇಲ್ಲಿದ್ದಾರೆ. ನಿನ್ಮೆ ಎಂಎಸ್ಸಿ ಮಾಡಿದವರು ಇವತ್ತು ಪಾಠ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಪ್ರತಿಭಾವಂತರಿಗೆ ಮನ್ನಣೆ ಸಿಗಬೇಕು ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು. ಇದೇವೇಳೆ ಪ್ರೊ.ಶ್ರೀಕಂಠಸ್ವಾಮಿ ಹಾಗೂ ಅವರ ಪತ್ನಿ ಭಾರತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆದಿಚುಂಚನಗಿರಿ ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ ಇದ್ದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಸ್.ಆರ್.ನಿರಂಜನ, ಪ್ರೊ. ಎನ್.ಎಸ್.ರಾಮೇಗೌಡ, ಡಾ.ಅಪ್ಪಾಜಿಗೌಡ ಸೇರಿದಂತೆ ಇತರರು ಇದ್ದರು.