ಬೆಂಗಳೂರು, ಮೇ 23, 2022 (www.justkannada.in): ಕಳೆದ ವಾರ ಸುರಿದ ಸತತ ಮಳೆ ಹಾಗೂ ಗಾಳಿಯಿಂದಾಗಿ ಬೆಂಗಳೂರಿನ ಅತ್ಯಮೂಲ್ಯ ನೈಸರ್ಗಿಕ ಸಂಪತ್ತುಗಳ ಪೈಕಿ ಪ್ರಮುಖವಾಗಿರುವ ದೊಡ್ಡಾಲದ ಮರದ ಒಂದು ಸಣ್ಣ ಭಾಗ ನಾಶವಾಗಿದ್ದು, ತೋಟಗಾರಿಕೆ ಇಲಾಖೆ ಮುರಿದು ಬಿದ್ದಿರುವ ಕೊಂಬೆ ಹಾಗೂ ಬೀಳಲುಗಳಿಗೆ ಜೀವ ತುಂಬುವ ಪ್ರಯತ್ನ ಮಾಡುತ್ತಿದೆ.
ಅಂದಾಜು ೪೦೦ ವರ್ಷಕ್ಕೂ ಪುರಾತನವಾದ ಈ ಪಾರಂಪರಿಕ ಮರದ ಅಲ್ಪಾವಧಿ ಹಾಗೂ ದೀರ್ಘಾವಧಿ ರಕ್ಷಣೆಗಾಗಿ ತಜ್ಞರ ಸಮಿತಿಯ ಶಿಫಾರಸ್ಸಿನ ಪ್ರಕಾರ ನಾಶವಾಗಿರುವ ಮರದ ಕೊಂಬೆಗಳನ್ನು ೨೫ ಸಸಿಗಳನ್ನಾಗಿ ಪರಿವರ್ತಿಸಲಾಗುತ್ತಿದೆ.
ಇಲಾಖೆ ಕೈಗೊಂಡಿರುವ ಅಲ್ಪಾವಧಿ ಕ್ರಮಗಳ ಅನುಷ್ಠಾನದ ಪ್ರಕಾರ, ಕಳೆದ ಏಳು ದಿನಗಳಲ್ಲಿ ಈ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ನೆಲದ ಮೇಲೆ ಬಿದ್ದಿದ್ದಂತಹ ಎಲ್ಲಾ ಸಾವಯವ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಮುರಿದು ಬಿದ್ದಿರುವ ಮರದ ಕೊಂಬೆಗಳ ಪರಿವರ್ತನೆ ಹಾಗೂ ಬುಡಮೇಲಾಗಿರುವ ಕಾಂಡವನ್ನು ಸಸಿಯನ್ನಾಗಿ ಪರಿವರ್ತಿಸಿ ಖಾಲಿ ಸ್ಥಳಗಳಲ್ಲಿ ನೆಡಲಾಗಿದೆ.
ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಸರ್ಕಾರದ ಮಾಜಿ ಪರಿಸರ ಕಾರ್ಯದರ್ಶಿ ಎ.ಎನ್. ಯಲ್ಲಪ್ಪ ರೆಡ್ಡಿ ಅವರು, “ಸೂಚನೆಗಳ ಪ್ರಕಾರ ಇಲಾಖೆಯು ಮರದ ಮುರಿದು ಬಿದ್ದಿದ್ದಂತಹ ಕೊಂಬೆಗಳನ್ನು ೨೫ ಸಸಿಗಳಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ರೂಟ್ ಹಾರ್ಮೋನುಗಳೊಂದಿಗೆ ಚಿಕಿತ್ಸೆ ನೀಡಿ, ಖಾಲಿ ಇರುವ ಸ್ಥಳಗಳಲ್ಲಿ ನೆಡಲಾಗಿದೆ. ಇನ್ನೂ ೨೫ ಸಸಿಗಳನ್ನು (ಸ್ಟಂಪ್ ಗಳು) ಸಿದ್ಧಪಡಿಸುವ ನಿರೀಕ್ಷೆ ಇದೆ. ಇದರಿಂದಾಗಿ, ನಿಸರ್ಗದಲ್ಲಿ ಯಾವುದೇ ವಸ್ತು ವೇಸ್ಟ್ ಆಗುವುದಿಲ್ಲ ಎಂದು ಗೊತ್ತಾಗುತ್ತದೆ,” ಎಂದರು.
ಮರದ ಎರಡು ದೊಡ್ಡ ಬೀಳಲುಗಳಿಗೆ ಬುಡದಲ್ಲಿ ಮಣ್ಣಿನ ಪ್ಯಾಕಿಂಗ್ ಬೆಂಬಲವನ್ನು ಒದಗಿಸಲಾಗಿದೆ, ಜೊತೆಗೆ ಕಲ್ಲುಗಳ ಬೆಂಬಲವನ್ನೂ ಒದಗಿಸಲಾಗಿದೆ. ಕ್ರಮೇಣ ಇದು ಬೇರುಗಳನ್ನು ಬಿಡುತ್ತದೆ ಮತ್ತು ಉಪ ಕಾಂಡಗಳಾಗಿ ಬೆಳೆಯುತ್ತವೆ, ಇದು ಈ ಪಾರಂಪರಿಕ ಮರಕ್ಕೆ ಅತ್ಯುತ್ತಮ ಬೆಂಬಲವಾಗಬಲ್ಲವು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ರೆಡ್ಡಿ ಅವರು ಒಂದು ಕಡೆಗೆ ವಾಲಿರುವ ಕೊಂಬೆಗಳ ಆಸರೆ ಬೇರುಗಳನ್ನು ಎಳೆದು ಕಟ್ಟುವ ಹಾಗೂ ತೂಕವನ್ನು ಸರಿಹೊಂದಿಸಲು ಸೂಕ್ತ ದಿಕ್ಕಿಗೆ ಬದಲಾಯಿಸುವ ಕೆಲಸ ಪ್ರಸ್ತುತ ಜಾರಿಯಲ್ಲಿದೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ಅವರು ತಿಳಿಸಿರುವ ಪ್ರಕಾರ ಶೇ.೫೦ರಷ್ಟು ಕೊಂಬೆಗಳಾದರೂ ಬದುಕುಳಿಯಬಲ್ಲವು ಹಾಗೂ ಆರೋಗ್ಯಕರ ಸಸಿಗಳಾಗಿ ಬೆಳೆಯಬಲ್ಲವು ಎಂದು ವಿಶ್ವಾಸವಿದೆ. “ಹಾಲಿ ಉತ್ತಮ ತಾಪಮಾನವಿದ್ದು, ಬದುಕುಳಿಯುವ ಸಂಭವದ ಪ್ರಮಾಣ ಶೇ.೭೫ರಷ್ಟಿದೆ,” ಎಂದರು.
ದೀರ್ಘಾವಧಿ ಕ್ರಮಗಳು
ಪ್ರತಿರೋಧವನ್ನು ಕಡಿಮೆಗೊಳಿಸಲು ಮರದ ಕೆಲವು ಕೊಂಬೆಗಳನ್ನು ಕತ್ತರಿಸುವ ಪ್ರಕ್ರಿಯೆಯನ್ನು ಒಳಗೊಂಡಿರುವ ಗಾಳಿ ಕಾರಿಡಾರ್ ಅನ್ನು ಅನುಷ್ಠಾನಗೊಳಿಸಲು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರದೇಶದ ಗಾಳಿ ಪ್ರವೃತ್ತಿಯ ಅಧ್ಯಯನವನ್ನು ಆರಂಭಿಸಿದ್ದಾರೆ.
ಗಾಳಿಯ ದಿಕ್ಕುಗಳನ್ನು ಅರ್ಥ ಮಾಡಿಕೊಳ್ಳಲು ಒಂದು ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ ಹಾಗೂ ಆ ದಿಕ್ಕಿನಲ್ಲಾಗುವ ಕಾಲೋಚಿತ ವ್ಯತ್ಯಯಗಳು ಹಾಗೂ ಗಾಳಿಯ ರಭಸವನ್ನು ತಿಳಿದುಕೊಳ್ಳಲು ಭಾರತೀಯ ತಾಪಮಾನ ಇಲಾಖೆಯ ದತ್ತಾಂಶವನ್ನು ಅಧ್ಯಯನ ಮಾಡಲಾಗುತ್ತದೆ.
ಅಧಿಕಾರಿಗಳು ತಿಳಿಸಿರುವ ಪ್ರಕಾರ ಈಗಾಗಲೇ ನೈಸರ್ಗಿಕವಾಗಿ ಹರಿಯುವ ಗಾಳಿಯ ದಿಕ್ಕಿನ ಕಡೆಗೆ ಗಾಳಿ ಕಾರಿಡಾರ್ ಅನ್ನು ರಚಿಸಲಾಗಿದೆ, ಆದರೆ ಅಗತ್ಯವನ್ನು ಆಧರಿಸಿ ಇನ್ನೂ ಹೆಚ್ಚಿನ ಮಧ್ಯಸ್ಥಿಕೆಯ ಅಗತ್ಯವಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Heavy-rain-destroys-Bangalore- historic- big tree