ಮೈಸೂರು,ಮೇ,30,2022(www.justkannada.in): ತಮ್ಮ ಗ್ರಾಮದಲ್ಲಿ ಉಂಟಾಗಿರುವ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಮುಂದಿನ ಚುನಾವಣೆ ಬಹಿಷ್ಕರಿಸಲು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಬೆಂಕಿಪುರ ಗ್ರಾಮದ ಜನರು ನಿರ್ಧರಿಸಿದ್ದಾರೆ.
ಸುಮಾರು 5000 ಜನಸಂಖ್ಯೆಯಿರುವ ಬೆಂಕಿಪುರ ಗ್ರಾಮದಲ್ಲಿ ಜನರು ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ಶಾಸಕರು, ಸಂಸದರು, ತಾಲ್ಲೂಕು ಹಾಗೂ ಜಿಲ್ಲಾಡಳಿತಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್ ವ್ಯವಸ್ಥೆ ಇಲ್ಲದೇ ಶಾಲಾ ಮಕ್ಕಳು ಕಷ್ಟಪಡುತ್ತಿದ್ದು, ಸುಮಾರು 150 ಶಾಲಾ ಮಕ್ಕಳು ಪ್ರತಿನಿತ್ಯ 2 ಕಿ.ಮೀ ನಡೆದುಕೊಂಡೇ ಅಥವಾ ಇತರೆ ವಾಹನಗಳನ್ನು ಆಶ್ರಯಿಸಿಕೊಂಡು ಶಾಲೆಗೆ ಹೋಗುತ್ತಿದ್ದಾರೆ.
ಇನ್ನು ಉದ್ಯೋಗಸ್ಥ ಯುವಕ, ಯುವತಿಯರು ಸಹ ದೂರದ ಮೈಸೂರಿಗೆ ಹೋಗಿ ಬರಲು ಬಹಳ ಕಷ್ಟಪಡುತ್ತಿದ್ದಾರೆ. ಹೆಣ್ಣುಮಕ್ಕಳು 10 ನೇ ತರಗತಿ ತೇರ್ಗಡೆಯಾದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲದೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ . ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಸ್ಮಶಾನಕ್ಕಾಗಿ ಜಾಗ ಗುರುತಿಸಿಲ್ಲ.
ಈ ಜೊತೆಗೆ ಗ್ರಾಮದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಿದ್ದು, ಜನಪ್ರತಿನಿಧಿಗಳು ಮಾತ್ರ ಚುನಾವಣೆ ಬಂದಾಗಲಷ್ಟೇ ಇತ್ತ ಬರುತ್ತಾರೆ. ನಂತರ ಗ್ರಾಮದ ಸಮಸ್ಯೆಗಳ ಬಗ್ಗೆ ಗಮನವನ್ನೇ ಹರಿಸುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Key words: Infrastructure -decision –mysore- village -people – boycott – next election.