ಮೈಸೂರಲ್ಲಿ ತಲೆ ಎತ್ತಲಿದೆ ಪ್ರಾಣಿಗಳ ಮಾನಸಿಕ ಚಿಕಿತ್ಸಾ ಕೇಂದ್ರ

ಮೈಸೂರು:ಮೇ-10: ವಿಚಿತ್ರವಾಗಿ ವರ್ತಿಸುತ್ತಾ ಜನರಿಗೆ ತೊಂದರೆ ನೀಡುವ ಬೀದಿನಾಯಿ ಹಾಗೂ ಇತರ ಪ್ರಾಣಿಗಳಿಗೆ ಮಾನಸಿಕ ಚಿಕಿತ್ಸೆ ನೀಡಿ ಗುಣಪಡಿಸುವ ಯೋಜನೆಯೊಂದು ಮೈಸೂರಿನಲ್ಲಿ ಕಾರ್ಯರೂಪಕ್ಕೆ ಬರುತ್ತಿದ್ದು, ಇದು ರಾಜ್ಯದಲ್ಲಿ ಪ್ರಥಮ ಪ್ರಯತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾನಸಿಕ ಖಿನ್ನತೆ, ಸಿಟ್ಟು, ವಿಚಿತ್ರ ವರ್ತನೆ, ವಿನಾ ಕಾರಣ ದಾಳಿ, ಕಿರುಕುಳ ನೀಡುವುದು ಕೇವಲ ಮನುಷ್ಯರಲ್ಲಿ ಮಾತ್ರ ಕಂಡು ಬರದೆ ಪ್ರಾಣಿಗಳಲ್ಲಿಯೂ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಮಾನಸಿಕ ಖಿನ್ನತೆಯಿಂದ ನರಳುವ ಪ್ರಾಣಿಗಳು ನಂತರ ಅಪಾಯಕಾರಿಯಾಗುತ್ತವೆ. ವಿಶೇಷವಾಗಿ ಬೀದಿನಾಯಿಗಳು ಸಾಕಷ್ಟು ಕಾಟ ನೀಡುತ್ತಿದ್ದು, ಇವುಗಳಿಗೆ ಮಾನಸಿಕವಾಗಿಯೇ ಚಿಕಿತ್ಸೆ ನೀಡಲು ಕೇಂದ್ರವೊಂದನ್ನು ಆರಂಭಿಸಲಾಗುತ್ತಿದೆ.

ಮಹಾನಗರ ಪಾಲಿಕೆ ಯೋಜನೆ:

ಸಾಕು ಪ್ರಾಣಿಗಳ ಆರೈಕೆಗೆ ಖಾಸಗಿಯಾಗಿ ಸಾಕಷ್ಟು ಚಕಿತ್ಸಾ ಕೇಂದ್ರಗಳಿವೆ. ಆದರೆ, ಬೀದಿಯಲ್ಲಿರುವ ಹಾಗೂ ಅನಾಥ ಪ್ರಾಣಿಗಳಿಗೆ ಮಾನಸಿಕವಾಗಿ ಚಿಕಿತ್ಸೆ ನೀಡಿ ಅವುಗಳನ್ನು ಮೊದಲಿನ ಸ್ಥಿತಿಗೆ ತರುವ ಕೇಂದ್ರಗಳು ಅಪರೂಪ. ಚೆನ್ನೈ, ಹೈದರಾಬಾದ್‌, ಮುಂಬಯಿಯಲ್ಲಿ ಈ ಕೇಂದ್ರಗಳಿವೆ. ಇದೀಗ ಇಂತಹ ಕೇಂದ್ರವೊಂದನ್ನು ಸ್ಥಾಪಿಸುವ ಖ್ಯಾತಿಗೆ ಮೈಸೂರು ಪಾತ್ರವಾಗಲಿದೆ.

ಕಚ್ಚುವ ನಾಯಿಗಳು: ಬೀದಿ ನಾಯಿಗಳ ಕಾಟ ಬಹುತೇಕ ಎಲ್ಲ ನಗರಗಳಲ್ಲಿವೆ. ಕೇವಲ ಪಾದಚಾರಿಗಳಿಗೆ ಮಾತ್ರವಲ್ಲದೆ ವಾಹನ ಸವಾರರಿಗೂ ಕಂಟಕವಾಗಿವೆ. ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಹಾಗೂ ಬಡಾವಣೆಗಳಲ್ಲಿ ದಿಢೀರಾಗಿ ಅಡ್ಡ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಸಾಕಷ್ಟು ಅನಾಹುತಗಳಾಗಿವೆ. ಇನ್ನು ಕೆಲವು ನಾಯಿಗಳು ರಾತ್ರಿ ವೇಳೆ ಕರ್ಕಶವಾಗಿ ಬೊಗಳುತ್ತವೆ. ಇದು ಅಪಶಕುನ ಎಂಬ ನಂಬಿಕೆಯೂ ಜನರಲ್ಲಿದೆ. ಈ ರೀತಿ ವರ್ತನೆಗೆ ಅದರ ಮಾನಸಿಕ ಅಸಮತೋಲನ ಕಾರಣವಾಗಿರುತ್ತವೆ.

ದೂರು ನೀಡಿದಲ್ಲಿ ಚಿಕಿತ್ಸೆ:

ಪ್ರಾಣಿ ಸಂರಕ್ಷಣಾ ಕಾಯಿದೆ ಹಿನ್ನೆಲೆಯಲ್ಲಿ ಬೀದಿ ನಾಯಿಗಳು ಸೇರಿದಂತೆ ಯಾವುದೇ ಅನಾಥ ಪ್ರಾಣಿಗಳನ್ನು ಕೊಲ್ಲುವಂತಿಲ್ಲ. ಇದರಿಂದಾಗಿ ಬೀದಿ ನಾಯಿಗಳು ವಿಪರೀತವಾಗಿವೆ. ಮೈಸೂರು ನಗರವೊಂದರಲ್ಲಿಯೇ ಸುಮಾರು 41,860 ಬೀದಿ ನಾಯಿಗಳಿವೆ. ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸುತ್ತಿದ್ದರೂ ಪರಿಣಾಮಕಾರಿಯಾಗಿಲ್ಲ. ಇವುಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ನಗರಪಾಲಿಕೆ ಪರದಾಡುತ್ತಿದೆ. ಮಾನಸಿಕ ಚಿಕಿತ್ಸಾ ಕೇಂದ್ರ ಆರಂಭವಾದ ನಂತರ ದೂರು ನೀಡಿದಲ್ಲಿ ಇಂತಹ ಪ್ರಾಣಿಗಳಿಗೆ ಪುನರ್‌ ವಸತಿ ಕೇಂದ್ರದಲ್ಲಿ ಆಶ್ರಯ ನೀಡಲಾಗುತ್ತದೆ. ತಜ್ಞ ಮಾನಸಿಕ ವೈದ್ಯರು ಪ್ರಾಣಿಗಳ ವರ್ತನೆಗೆ ಕಾರಣ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡುತ್ತಾರೆ. ಕೆಲವು ದಿನಗಳಲ್ಲಿ ಅವುಗಳು ಸಹಜ ವರ್ತನೆ ತೋರುವಂತೆ ಪರಿವರ್ತಿಸುತ್ತಾರೆ. ನಂತರ ಇವುಗಳನ್ನು ದತ್ತು ನೀಡಲಾಗುವುದು.

5 ಎಕರೆ ಜಾಗ ಮೀಸಲು:

ಮೈಸೂರು ಮಹಾನಗರ ಪಾಲಿಕೆ ಅನಾಥ ಪ್ರಾಣಿಗಳ ಪುನರ್‌ ವಸತಿ ಕೇಂದ್ರ ಆರಂಭಿಸಲು ಸುಮಾರು 5 ಎಕರೆ ಜಾಗವನ್ನು ಮೀಸಲಿಟ್ಟಿದೆ. ಮೊದಲ ಹಂತದಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಇದಕ್ಕಾಗಿ ಟೆಂಡರ್‌ ಕರೆಯಲಾಗಿದೆ. ಬೀದಿಯಲ್ಲಿ ಅಲೆಯುವ ಪ್ರಾಣಿಗಳಿಗೆ ಆಶ್ರಯ ನೀಡುವುದರೊಂದಿಗೆ ಇದರಲ್ಲಿಯೇ ಮಾನಸಿಕ ಚಿಕಿತ್ಸಾ ವಿಭಾಗವನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಕಷ್ಟು ಸಮಯಗಳಿಂದ ಅಧಿಕಾರಿಗಳ ತಂಡ ಈ ಕೇಂದ್ರ ಆರಂಭಿಸುವ ಕುರಿತು ಅಧ್ಯಯನ ನಡೆಸಿದ್ದಾರೆ. ಇತರ ರಾಜ್ಯಗಳಿಂದ ಮಾಹಿತಿ ಪಡೆದು ಯೋಜನೆ ರೂಪಿಸಿದ್ದಾರೆ.

ಹಲವು ಪ್ರಾಣಿಗಳಿಗೂ ನೆಲೆ:

ಕೇವಲ ಬೀದಿ ನಾಯಿಗಳಲ್ಲದೆ ಹಲವು ಪ್ರಾಣಿಗಳಿಗೆ ಇಲ್ಲಿ ನೆಲೆ ಕಲ್ಪಿಸುವ ಚಿಂತನೆ ಇದೆ. ಸುಮಾರು 1000 ಬೀದಿ ನಾಯಿಗಳು, 100 ಹಸು ಹಾಗೂ ಕುದುರೆಗಳು, 50 ಕತ್ತೆಗಳಿಗೆ ಇಲ್ಲಿ ಏಕ ಕಾಲದಲ್ಲಿ ಚಿಕಿತ್ಸೆ ನೀಡುವ ತಯಾರಿ ನಡೆಯುತ್ತಿದೆ. ನೀತಿ ಸಂಹಿತೆ ಮುಗಿದ ನಂತರ ಯೋಜನೆ ಚುರುಕು ಪಡೆಯಲಿದೆ.

ಕೊಡಗಿನಲ್ಲಿ ಯಶಸ್ವಿ

ಕಳೆದ ವರ್ಷ ಮಳೆಗಾಲದಲ್ಲಿ ಕೊಡಗಿನಲ್ಲಿ ನಡೆದ ದುರಂತದ ಸಂದರ್ಭ ಹಲವು ಗ್ರಾಮಗಳಲ್ಲಿ ಭಾರಿ ನಷ್ಟವಾಗಿತ್ತು. ಮನೆಗಳೇ ಕೊಚ್ಚಿ ಹೋಗಿದ್ದವು. ಈ ಸಂದರ್ಭ ಸಾಕು ಪ್ರಾಣಿಗಳು ಅನಾಥವಾಗಿದ್ದವು. ಕೇಳುವವರಿಲ್ಲದೆ ಅವು ಮಾನಸಿಕವಾಗಿ ಜರ್ಝರಿತವಾಗಿದ್ದವು. ಖಿನ್ನತೆಗೆ ಒಳಗಾಗಿದ್ದವು. ಈ ಸಂದರ್ಭ ಮುಂಬಯಿ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ ಪ್ರಾಣಿಪ್ರಿಯರು ಹಾಗೂ ತಜ್ಞರು ಇವುಗಳನ್ನು ಪತ್ತೆ ಹಚ್ಚಿ ಮಾನಸಿಕ ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಇದೇ ರೀತಿಯಲ್ಲಿ ಪುನರ್‌ ವಸತಿ ಕೇಂದ್ರದಲ್ಲಿ ವಿಚಿತ್ರ ವರ್ತನೆ ತೋರುವ ಪ್ರಾಣಿಗಳಿಗೆ ಪ್ರೀತಿಯ ಆರೈಕೆ ಮಾಡಲಾಗುತ್ತದೆ. ಇದಕ್ಕೆ ಖಾಸಗಿ ಸಹಭಾಗಿತ್ವ ಪಡೆಯುವ ಚಿಂತನೆಯೂ ನಡೆಯುತ್ತದೆ.
ಕೃಪೆ:ವಿಜಯಕರ್ನಾಟಕ

ಮೈಸೂರಲ್ಲಿ ತಲೆ ಎತ್ತಲಿದೆ ಪ್ರಾಣಿಗಳ ಮಾನಸಿಕ ಚಿಕಿತ್ಸಾ ಕೇಂದ್ರ
animal-psychotherapy-center-will-start-in-mysore