ಮೈಸೂರು,ಜೂನ್,2,2022(www.justkannada.in): ಎಟಿಎಂನಲ್ಲಿ ಹಣ ತೆಗೆದುಕೊಡುವ ನೆಪದಲ್ಲಿ ಕಾರ್ಡ್ ಬದಲಾಯಿಸಿ ಹಣ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಮೈಸೂರು ಜಿಲ್ಲೆ ಕೆ.ಆರ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್.ಡಿ ಕೋಟೆ ಮೂಲದ ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಬಂಧಿತ ಆರೋಪಿ ಅಮಾಯಕರನ್ನೇ ಟಾರ್ಗೆಟ್ ಮಾಡಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ. ತನ್ನ ಬಳಿ ಹತ್ತಾರು ಬಳಕೆಯಾಗದ ಎಟಿಎಂ ಕಾರ್ಡ್ ಇಟ್ಟುಕೊಂಡಿದ್ದ ಆರೋಪಿ, ಅಮಾಯಕರು ಹಣ ಡ್ರಾ ಮಾಡಲು ಬಂದ ವೇಳೆ ಯಾಮಾರಿಸಿದ ಕಾರ್ಡ್ ಬದಲಾವಣೆ ಮಾಡುತ್ತಿದ್ದ.
ನಿಮ್ಮ ಕಾರ್ಡ್ ಸರಿ ಇಲ್ಲಾ ಅಂಥ ಹೇಳಿ ಅಸಲಿ ಕಾರ್ಡ್ ಮತ್ತು ಪಿನ್ ಪಡೆದು ಎರಡು ದಿನ ಬಿಟ್ಟು ಮತ್ತೊಂದು ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ. ಈ ಮಧ್ಯೆ ಹಣ ಕಳೆದಕೊಂಡವರು ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.
ಸಿಸಿಟಿವಿ ಪರಿಶೀಲನೆ ವೇಳೆ ಕಳ್ಳನ ಕೈಚಳಕ ಬೆಳಕಿಗೆ ಬಂದಿದ್ದು, ಬಳಿಕ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಲ್ಕು ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಆರೋಪಿ ಎಟಿಎಂನಲ್ಲಿ ಕದ್ದ ಹಣದಿಂದ ಹೆಂಡತಿಗೆ ಚಿನ್ನ ಕೊಡಿಸಿದ್ದನು ಎನ್ನಲಾಗಿದೆ. ಬಂಧಿತನಿಂದ 7 ಎಟಿಎಂ ಕಾರ್ಡ್, 3 ಗ್ರಾಂ ಚಿನ್ನ, ಒಂದು ಬೈಕ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಅಪರಿಚಿತರಿಗೆ ಎಟಿಎಂ ಕೊಡುವ ಮುನ್ನ ಎಚ್ಚರವಹಿಸಬೇಕಿದೆ.
Key words: ATM card –change- Theft-arrest-mysore