ಬೆಂಗಳೂರು,ಜೂನ್,2,2022(www.justkannada.in): ದೇಶದ ನಾಲ್ಕನೆಯ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಆದ ಬೆಳವಣಿಗೆಯ ಬಗ್ಗೆ ಮತ್ತು ಆರ್ಥಿಕ ಕೊರತೆ ನೀಗಿಸುವ ಬಗ್ಗೆ ಕೈಗೊಂಡ ಕ್ರಮಕ್ಕಾಗಿ ಕೇಂದ್ರ ಸರ್ಕಾರವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಡಾ. ಸಿ ಎ ಐ.ಎಸ್. ಪ್ರಸಾದ್ ಅಭಿನಂದಿಸಿದ್ದಾರೆ.
ಈ ಅವಧಿಯಲ್ಲಿ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಿ 2021-22ನೇ ಸಾಲಿನ ಪರಿಷ್ಕೃತ ಅಂದಾಜು ಆಯವ್ಯಯದ ಆರ್ಥಿಕ ಕೊರತೆಯನ್ನು ೬.೯೦ % ಗಿಂತ ೬.೭೧ % ಕ್ಕೆ ಕಡಿಮೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. ದೇಶದ ಕೈಗಾರಿಕೆಗಳು, ಸೇವಾ ಹಾಗೂ ವ್ಯಾಪಾರ ಘಟಕಗಳ ಕೊಡುಗೆ ಅತ್ಯಂತ ಮಹತ್ವಪೂರ್ಣ ಎಂದು ಅವರು ಹೇಳಿರುತ್ತಾರೆ. ಈ ಸಾಧನೆಗಾಗಿ ದೇಶದ ತೆರಿಗೆದಾರರು ಪ್ರಶಂಸೆಗೆ ಪಾತ್ರವಾಗಿರುತ್ತಾರೆ ಮತ್ತು ಸರ್ಕಾರದ ಪ್ರಯತ್ನವನ್ನೂ ಕೂಡ ಈ ಸಂದರ್ಭದಲ್ಲಿ ಅಭಿನಂದಿಸಬೇಕಾಗುತ್ತದೆ. ಈ ಸಾಧನೆಯಿಂದ ರಷ್ಯಾ ಮತ್ತು ಉಕ್ರೇನ್ ಮದ್ಯೆ ನಡೆಯುತ್ತಿರುವ ಯುದ್ಧದ ಮತ್ತು ಕರೋನಾ ಸಾಂಕ್ರಾಮಿಕದ ಪರಿಣಾಮದ ಹೊರತಾಗಿಯೂ ಕೂಡ ದೇಶದ ಆರ್ಥಿಕ ಅಭಿವೃದ್ಧಿಯು ಉನ್ನತಿಯತ್ತ ಸಾಗಿದೆ ಎಂಬುವುದು ಸಾಬೀತಾಗುತ್ತದೆ ಎಂದು ಡಾ. ಸಿ ಎ ಐ.ಎಸ್. ಪ್ರಸಾದ್ ರವರು ಅಭಿಪ್ರಾಯಪಟ್ಟಿದ್ದಾರೆ.
ದೇಶದ 2021-22ನೇ ಸಾಲಿನ ಆರ್ಥಿಕ ಬೆಳವಣಿಗೆ ಸಮೀಕ್ಷೆ ಬಹಳ ಆಶಾದಾಯಕವಾಗಿದ್ದರೂ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಉತ್ತಮ ಬೆಳವಣಿಗೆಯನ್ನು ಸಾಧಿಸಲು ಕೇಂದ್ರ ಸರ್ಕಾರವು ತೆರಿಗೆಯೇತರ ಆದಾಯದ ಕಡೆಗೆ ಹೆಚ್ಚಿನ ಗಮನ ಕೊಡುವುದು ತುಂಬಾ ಅವಶ್ಯವಿದೆ. ಹಾಗೂ ಬಂಡವಾಳವನ್ನು ಹಿಂತೆಗೆದುಕೊಳ್ಳುವ ಗುರಿಯನ್ನು ಸಾಧಿಸಲು ಹೆಚ್ಚಿನ ಪ್ರಯತ್ನ ಮಾಡುವ ಅವಶ್ಯಕತೆ ಇದೆ. ಕಳೆದ ವರ್ಷಗಳಲ್ಲಿ ಈ ದಿಶೆಯಲ್ಲಿ ಹೆಚ್ಚಿನ ಪ್ರಗತಿ ಆಗದೇ ಇರುವುದು ಕೂಡಾ ನಾವೆಲ್ಲರೂ ಗಮನಿಸಬೇಕಾಗಿದೆ.
ಬರುವ ದಿನಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಆಗುವ ಸಾಧ್ಯತೆ ಇದೆ. ಅಲ್ಲದೆಯೇ ಕರೋನಾ ಸಾಂಕ್ರಾಮಿಕ ನಿಯಂತ್ರಿಸಲು ಸರ್ಕಾರವು ಹೆಚ್ಚಿನ ಖರ್ಚು ಮಾಡುವ ಅವಶ್ಯಕತೆ ಬರಬಹುದು. 2021-22ನೇ ಸಾಲಿನಲ್ಲಿ ಕೇವಲ ೪.೧% ಪ್ರಗತಿ ಆಗಿರುವುದನ್ನು ಗಮನಿಸಬೇಕಾಗುತ್ತದೆ ಎಂದು ಕೂಡ ಡಾ. ಐ.ಎಸ್. ಪ್ರಸಾದ್ ಹೇಳಿದ್ದಾರೆ.
key words: FKCCI- President -Dr. C A I.S. Prasad- Congratulate- central government