ಬೆಂಗಳೂರು, ಜೂನ್ 05, 2022 (www.justkannada.in): ಕಿಡಿಗೇಡಿ ಅಧ್ಯಕ್ಷ ತಯಾರಿಸಿರುವ ಪರಿಷ್ಕೃತ ಪಠ್ಯದಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾತ್ರವಲ್ಲ, ರಾಜ್ಯದ ಆರುವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ. ಕೂಡಲೇ ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಬೇಕೆಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಹೇಳೀದ್ದಾರೆ.
ಕನ್ನಡಿಗರ ಸಹನೆಯನ್ನು ಪರೀಕ್ಷಿಸಲು ಹೋಗಬೇಡಿ, ಮೊದಲು ಈ ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ಆಗ್ರಹಿಸಿದ್ದಾರೆ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.
ವಿಸರ್ಜನೆ ಮಾಡಬೇಕಾಗಿರುವು ಪರಿಷ್ಕೃತ ಪಠ್ಯವನ್ನು, ಈಗಾಗಲೇ ಅವಧಿ ಮುಗಿದಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನಲ್ಲ. ಪೂರ್ವಗ್ರಹ ಪೀಡಿತ ಅಧ್ಯಕ್ಷನನ್ನು ಕಿತ್ತುಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ‍್ನಿಸಿದ್ದಾರೆ.
ಈಗಿನ ಗೊಂದಲಗಳಿಗೆ ಇರುವ ಏಕೈಕ ಪರಿಹಾರವೆಂದರೆ ನಾಡದ್ರೋಹಿ ಅಧ್ಯಕ್ಷನ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ರದ್ದುಮಾಡಿ, ನೂತನ ಪರಿಷ್ಕೃತ ಪಠ್ಯ ರಚನೆಯಾಗುವ ವರೆಗೆ ಹಳೆಯ ಪಠ್ಯವನ್ನೇ ಮುಂದುವರಿಸುವುದು. ಮುಖ್ಯಮಂತ್ರಿಗಳು ಜಿದ್ದಿಗೆ ಬೀಳದೆ ಈ ನಿರ್ಧಾರ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.