ಬೆಂಗಳೂರು, ಜೂನ್ 6, 2022 (www.justkannada.in): ಮಕ್ಕಳ ಸಂಪೂರ್ಣ ಶಾಲಾ ಶುಲ್ಕವನ್ನು ಒಟ್ಟಿಗೆ ಕಟ್ಟಲಾಗದೆ ಪರದಾಡುತ್ತಿರುವ ಬೆಂಗಳೂರು ನಗರದ ಅನೇಕ ಪೋಷಕರು ಇದೀಗ ಮೂರನೇ ಪಾರ್ಟಿ ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳಿಂದ (ಎನ್ ಬಿಎಫ್ ಸಿಗಳು) ಹಾಗೂ ಫಿನ್ ಟೆಕ್ ಗಳಿಗೆ ಕಂತುಗಳಲ್ಲಿ ಶಾಲಾ ಶುಲ್ಕವನ್ನು ಪಾವತಿಸುವ ಆಯ್ಕೆಗೆ ಮೊರೆ ಹೋಗಿದ್ದಾರೆ.
ಈ ಕಂಪನಿಗಳು 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಆರಂಭವಾದಾಗ ಶಾಲೆಗಳೊಂದಿಗೆ ಪಾಲುದಾರಿಕೆಯನ್ನು ಆರಂಭಿಸಿದವು. ಒಂದು ಫಿನ್ ಟೆಕ್ ಕಂಪನಿಯ ಕಾರ್ಯನಿರ್ವಾಹಕರು ತಿಳಿಸಿದ ಪ್ರಕಾರ, ಬಹುಪಾಲು ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಗಳು ವಿಧಿಸುವ ಹೆಚ್ಚಿನ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸುವುದು ಸಾಧ್ಯವಾಗುತ್ತಿರಲಿಲ್ಲ. ಇಂತಹವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಂತುಗಳಲ್ಲಿ ಶಾಲಾ ಶುಲ್ಕವನ್ನು ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಲಾಯಿತು.
ದೀಪಾ ವಿ. (ಹೆಸರು ಬದಲಾಯಿಸಿದೆ) ಎಂಬ ಓರ್ವ ವಿದ್ಯಾರ್ಥಿನಿಯ ಪೋಷಕರೊಬ್ಬರಿಗೆ ಅವರ ಮಗಳು ಕಲಿಯುತ್ತಿರುವ ಶಾಲೆ ಇವರಿಗೆ ಯಾವುದೇ ಮಾಹಿತಿ ನೀಡದೆಯೇ ಅಥವಾ ಅವರ ಅನುಮತಿ ಪಡೆಯದೆಯೇ ಮಗಳ ವಿವರಗಳನ್ನು ಎನ್ಬಿಎಫ್ ಸಿಗೆ ನೀಡಿರುವುದನ್ನು ನೋಡಿ ಗಾಬರಿಯಾಯಿತು. “ನನಗೆ ಇದ್ದಕ್ಕಿದ್ದಂತೆ ಒಂದು ದಿನ ದೂರವಾಣಿ ಕರೆ ಬಂತು. ಶಾಲಾ ಶುಲ್ಕವನ್ನು ಸಂಪೂರ್ಣವಾಗಿ ಒಂದೇ ಬಾರಿ ಪಾವತಿಸಲು ಸಾಧ್ಯವಾಗದೇ ಇದ್ದರೆ ಕಂತುಗಳಲ್ಲಿ ಪಾವತಿಸಬಹುದು ಎಂದು ತಿಳಿಸಿದರು,” ಎಂದರು.
ದೀಪಾ ಕಲಿಯುತ್ತಿರುವ ಶಾಲೆ, ಸಾಂಕ್ರಾಮಿದಿಂದಾಗಿ ಉದ್ಭವಿಸಿದಂತಹ ಹಣಕಾಸಿನ ತೀವ್ರ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಶೇ.೭೦ ಶುಲ್ಕವನ್ನು ಮಾತ್ರ ಪಡೆಯಬೇಕು ಎಂಬ ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಲಿಲ್ಲ. ಹಾಗಾಗಿ ಪೋಷಕರು ಶುಲ್ಕ ಪಾವತಿಸಲು ವಿಳಂಬ ಮಾಡಿದರು.
ಮೇಲಾಗಿ ಉದ್ಯೋಗ ನಷ್ಟ ಹಾಗೂ ಏರುತ್ತಿರುವ ದಿನನಿತ್ಯ ಅಗತ್ಯ ವಸ್ತುಗಳ ಬೆಲೆಗಳಿಂದಾಗಿ ದೀಪಾಳ ಕುಟುಂಬ ಇನ್ನೂ ಹಣಕಾಸಿನ ತೊಂದರೆಗಳಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. “ನೀವು ಶಾಲಾ ಶುಲ್ಕವನ್ನು ಮೂರು ಕಂತುಗಳಲ್ಲಿ ಪಾವತಿಸಿದರೆ ಯಾವುದೇ ಹೆಚ್ಚುವರಿ ಹಣ ಪಾವತಿಸಬೇಕಾಗುವುದಿಲ್ಲ. ಇಲ್ಲದಿದ್ದರೆ ಶೇ.೨.೫ ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು,” ಎಂದರು.
ಕೆಲವು ಕಂಪನಿಗಳು ಶೂನ್ಯ ಬಡ್ಡಿ ದರವನ್ನು ವಿಧಿಸುತ್ತವೆ. ಇನ್ನೂ ಕೆಲವು ಕೆಲವೇ ಕಂತುಗಳನ್ನು ಪಾವತಿಸುವಂತಹ ಪೋಷಕರು ಅಥವಾ ಉತ್ತಮ ಸಾಲದ ಚರಿತ್ರೆ ಇರುವಂತಹವರಿಗೆ ಶೂನ್ಯ ಬಡ್ಡಿ ದರ ವಿಧಿಸುತ್ತವೆ.
ಕರ್ನಾಟಕ ಖಾಸಗಿ ಶಾಲಾ-ಕಾಲೇಜು ಪೋಷಕರ ಸಂಘಗಳ ಸಮಿತಿ ಸದಸ್ಯ ಬಿ.ಎನ್. ಯೋಗಾನಂದ ಅವರು ಹೇಳುವ ಪ್ರಕಾರ, ಫಿನ್ ಟೆಕ್ ಗಳೊಂದಿಗೆ ಶಾಲೆಗಳು ಮಾಡಿಕೊಂಡಿರುವ ಪಾಲುದಾರಿಕೆಯಿಂದಾಗಿ ಪೋಷಕರು ಮಕ್ಕಳಿಗೆ ಶಾಲಾ ಶಿಕ್ಷಣ ಒದಗಿಸುವ ಭರದಲ್ಲಿ ಸಾಲದ ಸುಳಿಯಲ್ಲಿ ಸಿಲುಕುವ ಹಾಗೆ ಮಾಡುತ್ತದೆ ಎಂದರು.
“ಪೋಷಕರಿಗೆ ಶಾಲೆಗಳು ವಿಧಿಸುವ ದುಬಾರಿ ಶುಲ್ಕವನ್ನು ಭರಿಸಲಾಗುವುದಿಲ್ಲ. ಸಾಂಕ್ರಾಮಿದಿಂದ ಉದ್ಭವಿಸಿರುವ ಸಂಕಷ್ಟದಲ್ಲಿ ಅವರು ಈಗಾಗಲೇ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ರೀತಿ ದುಬಾರಿ ಶುಲ್ಕಗಳನ್ನು ವಿಧಿಸುತ್ತಿರುವ ಶಾಲೆಗಳು ಪಾರದರ್ಶಕವಾಗಿರುವ ಬದಲಿಗೆ ಮೂರನೇ ಪಾರ್ಟಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿವೆ,” ಎಂದರು.
೨೦೨೧ರಲ್ಲಿ ಸ್ಥಳೀಯ ವೃತ್ತಗಳು ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಬೆಂಗಳೂರು ನಗರದ ಶೇ.೬೩ರಷ್ಟು ಪೋಷಕರು ಅವರ ಮಕ್ಕಳು ಕಲಿಯುತ್ತಿರುವ ಶಾಲೆಗಳು ಶುಲ್ಕಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ. ಶೇ.೩೩ರಷ್ಟು ಪೋಷಕರು ತಿಳಿಸಿದಂತೆ ಆನ್ ಲೈನ್ ತರಗತಿಗಳ ಹೊರತಾಗಿಯೂ ಶೇ.೨೦ರಷ್ಟು ಶುಲ್ಕ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಭಾಗದ ಒಂದು ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬರ ಪೋಷಕರು ಹೇಳಿದಂತೆ, ಅವರ ಮೇಲೆ ಶುಲ್ಕವನ್ನು ಕಂತುಗಳಲ್ಲಿ ಪಾವತಿಸುವಂತೆ ಒತ್ತಡ ಹೇರಲಾಯಿತು.
ಶೂನ್ಯ ಬಡ್ಡ ದರದೊಂದಿಗೆ ಕಂತುಗಳ ಆಯ್ಕೆಯನ್ನು ಒದಗಿಸುವ ಆ್ಯಪ್ ಗಳು ಸಾಮಾನ್ಯವಾಗಿ ಅವರು ಒದಗಿಸುವ ಸೇವೆಗಳಿಗೆ ಶಾಲೆಗಳ ಮೇಲೆ ಸೇವಾ ಶುಲ್ಕವನ್ನು ವಿಧಿಸುತ್ತವೆ. ‘ವಾಯ್ಸ್ ಆಫ್ ಪೇರೆಂಟ್ಸ್’ನ ಅಧ್ಯಕ್ಷ ಮೊಹಮ್ಮದ್ ಶಕೀಲ್ ಅವರು ಹೇಳುವಂತೆ ಇದಕ್ಕೆ ಬದಲಾಗಿ ಶಾಲೆಗಳು ಒಂದೇ ಬಾರಿಗೆ ಸಂಪೂರ್ಣ ಶುಲ್ಕವನ್ನು ಪಾವತಿಸುವುದು ಸಾಧ್ಯವಾಗದೇ ಇರುವಂತಹ ಪೋಷಕರಿಗೆ ಸಣ್ಣ ಪ್ರಮಾಣದ ನೇರ ವಿನಾಯಿತಿಯನ್ನು ನೀಡಬಹುದು. “ಆದರೆ ಇದಕ್ಕೆ ಬದಲಾಗಿ ಶಾಲೆಗಳು ವಾಣಿಜ್ಯ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳುತ್ತಿವೆ,” ಎಂದು ಆರೋಪಿಸಿದ್ದಾರೆ. ಈ ಶುಲ್ಕದ ಕುರಿತು ಪ್ರತಿಕ್ರಿಯಿಸಿರುವ ಅಸೋಸಿಯೇಟೆಡ್ ಮ್ಯಾನೇಜ್ ಮೆಂಟ್ಸ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು, “ಸರ್ಕಾರ ವಾಣಿಜ್ಯ ಸಂಸ್ಥೆಯಂತಹ ಪ್ರತಿಯೊಂದು ಅಂಶಕ್ಕೂ ತೆರಿಗೆ ರೂಪದಲ್ಲಿ ಹಣ ಪಡೆಯುತ್ತಿರಬೇಕಾದರೆ ಫಿನ್ ಟೆಕ್ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡರೇ ತಪ್ಪೇನು? ಆದರೆ ಇದು ಪೋಷಕರ ವಿವೇಚನೆಗೆ ಬಿಟ್ಟಿದೆ,” ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್ ಅವರು ಇಂತಹ ಪಾಲುದಾರಿಕೆಗಳು ತಮ್ಮ ಗಮನಕ್ಕೆ ಬಂದಿಲ್ಲ ಎಂದರು. “ಭಾರತೀಯ ರಿಸರ್ವ್ ಬ್ಯಾಂಕ್ ಇಂತಹ ಕಂಪನಿಗಳ ನಿಯಂತ್ರಣ ಅಂಗವಾಗಿದೆ. ಶಾಲಾ ಶುಲ್ಕದ ಹಣಕಾಸಿನ ಮೂಲ ಯಾವುದು ಎಂಬ ವಿಷಯ ಇಲಾಖೆಯ ಅಧಿಕಾರ ವ್ಯಾಪ್ತಿಯಡಿ ಬರುವುದಿಲ್ಲ,” ಎಂದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Schools -contract – NBFCs – school fees -EMIs.