ಮೈಸೂರು:ಮೇ-10: ಪ್ರಸಕ್ತ ಶೈಕ್ಷಣಿಕ ಸಾಲಿನ ಪದವಿ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದರೂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ‘ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ’ಯೋಜನೆ ಜಾರಿಗೆ ಹಿಡಿದಿರುವ ಗ್ರಹಣ ಸರಿಯುವ ಲಕ್ಷಣ ಕಾಣುತ್ತಿಲ್ಲ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಕಾಲೇಜು ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದ್ದು, ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲೂ ಅರ್ಜಿ ವಿತರಣೆ ಆರಂಭವಾಗಿದೆ. ಆದರೆ ಉನ್ನತ ಶಿಕ್ಷಣ ಇಲಾಖೆ ಇದುವರೆಗೂ ಪ್ರಸಕ್ತ ಶೈಕ್ಷಣಿಕ ಸಾಲಿನ ಶುಲ್ಕ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಿಲ್ಲ. ಹಾಗಾಗಿ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ ಸೇರಿ ಯಾವೊಂದು ಪದವಿ ತರಗತಿಗಳಿಗೂ ಅಡ್ಮಿಷನ್ ನಡೆಯುತ್ತಿಲ್ಲ.
‘ಕಳೆದ ವರ್ಷ ಎಸ್ಸಿ, ಎಸ್ಟಿ ವಿದ್ಯಾರ್ಥಿನಿಯರಿಂದ 1,400 ರೂ. ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರಿಂದ ರೂ. 4000ಕ್ಕೂ ಹೆಚ್ಚು ಶುಲ್ಕ ಪಡೆದುಕೊಳ್ಳಲಾಗಿತ್ತು. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಲ್ಲ ಸಮುದಾಯದ ವಿದ್ಯಾರ್ಥಿನಿಯರಿಗೂ ಉಚಿತ ಶಿಕ್ಷಣ ಜಾರಿಗೆ ಬರಲಿದೆ ಎಂದು ಇಲಾಖೆ ಹೇಳಿತ್ತು.
ಆದರೆ ಇದುವರೆಗೂ ಫೀಸ್ ಸ್ಟ್ರಕ್ಚರ್ ಬಗ್ಗೆ ಸ್ಪಷ್ಟ ಆದೇಶ ಬಂದಿಲ್ಲ. ಒಂದು ವೇಳೆ, ಶುಲ್ಕ ಪಡೆದು ಪ್ರವೇಶ ನೀಡಿದ ಮೇಲೆ ಉಚಿತ ಶಿಕ್ಷಣ ಜಾರಿಗೆ ಬಂದರೆ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ಚೆಕ್ ಅಥವಾ ಅಕೌಂಟ್ಗೆ ಹಣ ಹಿಂದಿರುಗಿಸಬೇಕಾಗುತ್ತದೆ. ಹಾಗಾಗಿ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ಹೆಸರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.
ಮಾನದಂಡವೇನು?: ಪಾಲಕರ ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಕಡಿಮೆ ಇರುವ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ಲಭ್ಯ. ಪಂಜಾಬ್, ಮಧ್ಯಪ್ರದೇಶ, ತೆಲಂಗಾಣದಲ್ಲಿ ಉಚಿತ ಶಿಕ್ಷಣ ಜಾರಿಯಲ್ಲಿದೆ.
ನಾನು ಮೈಸೂರಿನ ಮೂರು ಸರ್ಕಾರಿ ಪದವಿ ಕಾಲೇಜುಗಳಿಂದ ಅರ್ಜಿ ಪಡೆದುಕೊಂಡಿದ್ದೇನೆ. ಯಾವ ಕಾಲೇಜಿನಲ್ಲೂ ಪ್ರವೇಶಾತಿ ನೀಡುತ್ತಿಲ್ಲ. ಪ್ರವೇಶ ಶುಲ್ಕದ ಬಗ್ಗೆ ಸರ್ಕಾರದಿಂದ ಆದೇಶ ಬಂದಿಲ್ಲ. ಆದೇಶ ಬಂದ ಮೇಲೆ ಅಡ್ಮಿಷನ್ ನೀಡುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ. ‘ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಯೋಜನೆ’ ಈ ಬಾರಿಯೇ ಜಾರಿಯಾದರೆ ಸಂತೋಷ.
ಕ್ರೆಡಿಟ್ಗಾಗಿ ಫೈಟ್?
ಉನ್ನತ ಶಿಕ್ಷಣ ಇಲಾಖೆ ಈವರೆಗೂ ಶುಲ್ಕ ನಿಗದಿ ಅಧಿಸೂಚನೆ ಹೊರಡಿಸದೇ ಇರಲು ರಾಜಕೀಯ ಲೆಕ್ಕಾಚಾರಗಳು ಕಾರಣ ವಾಗಿದ್ದಂತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ‘ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ’ ಯೋಜನೆಯ ಕನಸು ಕಂಡಿದ್ದರು. ಈಗ ಯೋಜನೆ ಜಾರಿಯಾದರೂ ಅದರ ಸಂಪೂರ್ಣ ಕ್ರೆಡಿಟ್ ಸಿದ್ದರಾಮಯ್ಯಗೆ ಸೇರಲಿದೆ. ಆದ್ದರಿಂದಲೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿ.ಟಿ.ದೇವೇಗೌಡ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆಯೇ ಎನ್ನುವ ಮಾತು ಗಳು ಶಿಕ್ಷಣ ವಲಯದಲ್ಲೇ ಕೇಳಿಬರುತ್ತಿವೆ.
ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಯೋಜನೆಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುತ್ತೇವೆ. ಈ ಸಂಬಂಧ ಶೀಘ್ರದಲ್ಲೇ ಆದೇಶ ಪ್ರತಿ ಹೊರಬೀಳಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ರಾಜಕೀಯ ಕಿತ್ತಾಟಗಳಿಗೆ ಅವಕಾಶ ಇಲ್ಲ.
| ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಸಚಿವ
ಕೃಪೆ:ವಿಜಯವಾಣಿ