ರಾಜ್ಯದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು: ನಿಮಗೆ ನಾಚಿಕೆ ಆಗಲ್ವಾ: ಆರ್ ಎಸ್ ಎಸ್ ಮುಖಂಡರ ವಿರುದ್ಧ ಹೆಚ್.ವಿಶ್ವನಾಥ್ ಕಿಡಿ.

 

ಮೈಸೂರು,ಜೂನ್,7,2022(www.justkannada.in): ಕರ್ನಾಟಕದ ಶಾಂತಿಯನ್ನು ಮಸೀದಿಯಲ್ಲಿ ಶಿವಲಿಂಗ ಹುಡುಕುವ ಮೂಲಕ ಕದಡಲಾಗುತ್ತಿದೆ. ರಾಜ್ಯದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕ್ತೀದ್ದೀರಾ. ನಿಮಗೆ ನಾಚಿಕೆ ಅಗೋದಿಲ್ವಾ..? ಎಂದು ಆರ್ ಎಸ್ ಎಸ್ ಮುಖಂಡರ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಎಲ್ಲಾ ಮಸೀದಿಗಳಲ್ಲೂ ಶಿವಲಿಂಗಗಳಿರುವುದಿಲ್ಲ ಎಂಬ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಸ್ವಾಗತಿಸಿದರು.  ಮಸೀದಿಗಳಿಗೆ ಸಂಬಂಧಿಸಿದಂತೆ ಇರುವ ವಿವಾದಗಳನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಅವರ ಹೇಳಿಕೆಯ ಹಿಂದೆ ಒಳ್ಳೆಯ ಉದ್ದೇಶವಿದೆ. ಮೋಹನ್ ಭಾಗವತ್ ಹೇಳಿಕೆಯನ್ನು ಕಟ್ಟರ್ ಆರ್ ಎಸ್ ಎಸ್ ವಾದಿಗಳು ಏಕೆ ಸ್ವಾಗತಿಸುತ್ತಿಲ್ಲ. ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಏಕೆ ತುಟಿ ಬಿಚ್ಚುತ್ತಿಲ್ಲ. ಹಾಗಾದರೆ ನೀವು ಮೋಹನ್ ಭಾಗವತ್ ಹೇಳಿಕೆಯನ್ನು ವಿರೋಧಿಸುತ್ತೀರಾ? ಏಕೆ ನೀವು ಭಾಗವತ್ ಹೇಳಿಕೆಯನ್ನು ಸ್ವಾಗತಿಸುತ್ತಿಲ್ಲ. ಭಾಗವತ್  ಅವರು ಕುಣಿಯೋದನ್ನು ನಿಲ್ಲಿಸಿ ಎಂದರೂ ನೀವು ಏಕೆ ಕುಣಿಯುತ್ತಿದೀರಾ?

ಬೆಂಕಿ ಹಚ್ಚುವುದನ್ನು ನಿಲ್ಲಿಸಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆದರೂ ನೀವು ಬೆಂಕಿ ಹಚ್ಚುವುದನ್ನು ನಿಲ್ಲಿಸುತ್ತಿಲ್ಲ. ಸದ್ಯಕ್ಕೆ ರಾಜ್ಯದ ಪರಿಸ್ಥಿತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಬಗ್ಗೆ ಜಾಗತೀಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಲ್ಲಿ ಆಡಳಿತದಲ್ಲಿರುವುದು ಬಿಜೆಪಿ ಸರ್ಕಾರವೇ ಹೊರತು, ಆರ್ ಎಸ್ ಎಸ್ ಸರ್ಕಾರವಲ್ಲ. ನಾವು 17 ಮಂದಿ ಬಿಜೆಪಿ ಸರ್ಕಾರ ಬೆಂಬಲಿಸಿ ಬಂದವರು. ನಾವು ಆರ್ ಎಸ್ ಎಸ್ ಬೆಂಬಲಿಸಿ ಬಂದವರಲ್ಲ ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಆರ್ ಎಸ್ ಎಸ್ ಮುಖಂಡರ ವಿರುದ್ಧ ಆಕ್ರೋಶ ಹೊರ ಹಾಕಿದ ಹೆಚ್ ವಿಶ್ವನಾಥ್,  ರಾಜ್ಯದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕ್ತೀದ್ದೀರಾ.  ನಿಮಗೆ ನಾಚಿಕೆ ಅಗೋದಿಲ್ವಾ..? ಕರ್ನಾಟಕದ ಶಾಂತಿಯನ್ನು ಮಸೀದಿಯಲ್ಲಿ ಶಿವಲಿಂಗ ಹುಡುಕುವ ಮೂಲಕ ಕದಡಲಾಗುತ್ತಿದೆ. ಬಿಜೆಪಿ ವಕ್ತಾರರು ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ನಾಯಕರು ಇದಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಆರ್ ಎಸ್ ಎಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಬೇಕು. ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದನ್ನು ನಿಲ್ಲಿಸಿ ಅಂತಾ ಹೇಳಬೇಕು. ಸಿ.ಟಿ ರವಿ ಹೇಳಪ್ಪಾ, ಭಾಗವತರು ಹೇಳಿರೊದನ್ನಾ ಎಂದು ಚಾಟಿ ಬೀಸಿದರು.

ಇಲ್ಲಿ 25 ಲಕ್ಷ ಮುಸ್ಲಿಂ ಕುಟುಂಬಗಳು ಬದುಕುತ್ತಿವೆ. ಹೆಚ್ಚು ಕಡಿಮೆ ಆದ್ರೆ ಅವರು ಬದುಕೋದಕ್ಕೆ ಆಗುತ್ತಾ ಎಂದು ಹೆಚ್ ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.

Key words: BJP-MLC-H.Vishwanath-against –RSS- leaders-mysore