ಬೆಂಗಳೂರು,ಜೂನ್,7,2022(www.justkannada.in): ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜ್ಯ ಬಿಜೆಪಿ ಸರಕಾರವು ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದ್ದು, ಪರಿಸ್ಕೃತ ಪುಸ್ತಕಗಳನ್ನು ಕಸದ ಬುಟ್ಟಿಗೆ ಎಸೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿರುವುದನ್ನು, ಇತಿಹಾಸ ತಿರುಚಿರುವುದರ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು ಅವರು ಪ್ರಪಂಚಕ್ಕೆ ವಿಶ್ವಮಾನವ ಸಂದೇಶವನ್ನು ಸಾರಿ, ಈ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಕ್ಕಳ ಪಠ್ಯಪುಸ್ತಕದಲ್ಲಿ ಕುವೆಂಪು ಅವರು ಸೇರಿದಂತೆ ಅನೇಕ ಮಹಾನುಭಾವರ ವಿಚಾರಗಳನ್ನು ತಿರುಚಿ ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದೆ.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ನಾಯಕರನ್ನು ಹೊರತುಪಡಿಸಿ ಎಲ್ಲ ಮಠಗಳ ಪೀಠಾಧ್ಯಕ್ಷರು, ಸಾಹಿತಿಗಳು, ಸಂಘಟನೆಗಳು ಒಟ್ಟಾಗಿ ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರದ ಮನಸ್ಥಿತಿ ಹಾಗೂ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಸರ್ಕಾರದ ನಿಲುವಿನ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದ್ದಾರೆ. ನಮ್ಮ ಸಮಾಜವನ್ನು ಶಾಂತಿಯ ತೋಟವಾಗಿ ಕಾಪಾಡಲು ಪ್ರತಿಭಟನೆ ಮಾಡುತ್ತಿರುವ ಸಿದ್ದಗಂಗಾ ಶ್ರೀಗಳು, ಮುರುಘಾ ಮಠದ ಶ್ರೀಗಳು, ಆದಿಚುಂಚನಗಿರಿ ಶ್ರೀಗಳಿಗೆ, ಪಂಚಮಸಾಲಿ ಪೀಠದ ಶ್ರೀಗಳಿಗೆ, ಸಾಣೆ ಮಠದ ಶ್ರೀಗಳು ಸೇರಿದಂತೆ ಎಲ್ಲರ ಪಾದಗಳಿಗೆ ನಮಸ್ಕರಿಸುತ್ತಾ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಸಮಾಜದ ಹಿರಿಯರು, ಸಾಹಿತಿಗಳಿಗೆ ಯಾವುದೇ ರಾಜಕೀಯ ಅಗತ್ಯವಿಲ್ಲ. ಸರ್ಕಾರ ಚಿಕ್ಕ ಮಕ್ಕಳ ತಲೆಗೆ ಇತಿಹಾಸ ಬದಲಾವಣೆ ಮಾಡಿ ತಮ್ಮ ಅಜೆಂಡಾ ತುಂಬುವ ಪ್ರಯತ್ನ ಮಾಡುತ್ತಿದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂಬುದು,, ಅವರ ತಂದೆ, ಹುಟ್ಟಿದ ಸ್ಥಳ ಸೇರಿದಂತೆ ಅವರ ಅನೇಕ ವಿಚಾರಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ. ಇಂತಹ ಮಹಾನ್ ಚೇತನಕ್ಕೆ ಇದಕ್ಕಿಂತ ದೊಡ್ಡ ಅಪಮಾನ ಬೇರೆ ಇದೆಯೇ? ನಾವೆಲ್ಲರೂ ಅವರು ಕೊಟ್ಟಿರುವ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರಾಜ್ಯ ಹಾಗೂ ದೇಶವನ್ನು ನಡೆಸುತ್ತಿದ್ದೇವೆ. ಇದು ಕೇವಲ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಅಲ್ಲ. ಇಡೀ ಭಾರತ ದೇಶಕ್ಕೆ ಮಾಡಿರುವ ದೊಡ್ಡ ಅಪಮಾನ. ಅಂಬೇಡ್ಕರ್ ಕೇವಲ ಒಂದು ಸಮುದಾಯದ ಆಸ್ತಿಯಲ್ಲ ಅವರು ಇಡೀ ದೇಶದ ಆಸ್ತಿ. ಅವರು ಕೊಟ್ಟ ಸಂವಿಧಾನವನ್ನು ವಿಶ್ವದ ಅನೇಕ ರಾಷ್ಟ್ರಗಳು ಒಪ್ಪಿ ಗೌರವಿಸಿವೆ. ಗಾಂಧೀಜಿಯವರಿಗೆ ರಾಷ್ಟ್ರಪಿತ ಎಂಬ ಗೌರವವನ್ನು ಹೇಗೆ ತಪ್ಪಿಸಲು ಸಾಧ್ಯವಿಲ್ಲವೋ ಅದೇ ರೀತಿ ಅಂಬೇಡ್ಕರ್ ಅವರಿಗೆ ಸಂವಿಧಾನ ಶಿಲ್ಪಿ ಎಂಬ ಗೌರವವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಬಸವಣ್ಣನವರ ವಚನಗಳನ್ನು ನಾವು ತಿರುಚಲು ಸಾಧ್ಯವೇ? ಈ ಸರ್ಕಾರ ಈ ಎಲ್ಲ ಮಹನೀಯರಿಗೆ ಅಪಮಾನ ಮಾಡಲು ಮುಂದಾಗಿದೆ. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರ ಜನಿವಾರ ವಿಚಾರವನ್ನು ಪ್ರಸ್ತಾಪಿಸಿದೆ. ಅದು ಪವಿತ್ರವಾಗಿದ್ದು ಅದರ ಮೂಲಕ ನೀವು ಮಕ್ಕಳಲ್ಲಿ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿರುವುದು ಖಂಡನೀಯ.
ಬಸವಣ್ಣನವರು ಕಾಯಕವೇ ಕೈಲಾಸ, ನುಡಿದಂತೆ ನಡೆಯಬೇಕು ಎಂಬ ಸಂದೇಶವನ್ನು ತಮ್ಮ ವಚನಗಳಲ್ಲಿ ಸಾರಿದ್ದು, ನಾವೆಲ್ಲರೂ ಅದನ್ನು ಗೌರವಿಸುತ್ತಾ ಪಾಲಿಸಿಕೊಂಡು ಬಂದಿದ್ದೇವೆ.ಮುಖ್ಯಮಂತ್ರಿಗಳು ಕಷ್ಟಪಟ್ಟು ಬಸವಣ್ಣನವರ ವಿಚಾರವನ್ನು ಮಾತ್ರ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಕೇವಲ ಒಂದು ಪಕ್ಷದ ಮುಖ್ಯಮಂತ್ರಿಯಾಗಿಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ.
ಶಿಕ್ಷಣ ನೀತಿ ಎಂಬುದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಆರ್ ಎಸ್ ಎಸ್ ಚಿಂತನೆಗಳನ್ನು ನೀವೇ ಇಟ್ಟುಕೊಳ್ಳಿ, ನಾವು ಬೇಡ ಎನ್ನುವುದಿಲ್ಲ. ಆದರೆ ಅದು ರಾಷ್ಟ್ರೀಯ ಶಿಕ್ಷಣ ನೀತಿ ಆಗಲು ಸಾಧ್ಯವಿಲ್ಲ. ಇಷ್ಟು ದಿನಗಳ ಕಾಲ ಶಿಕ್ಷಣ ನೀತಿಯಲ್ಲಿ ಓದಿದ ನಮ್ಮ ಇಂಜಿನಿಯರ್ ಗಳು, ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಸಾಧನೆ ಮಾಡಿಲ್ಲವೇ? ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
ಈ ಸರ್ಕಾರ ಲಿಂಗಾಯತ ಧರ್ಮದ ವಿಚಾರವನ್ನೇ ತಿರುಚಲು ಮುಂದಾಗಿದೆ. ಕುವೆಂಪು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೊದಲ ಕವಿ. ಅವರ ಬಗ್ಗೆ ಲಘುವಾಗಿ ಮಾತನಾಡುವುದು, ಪಠ್ಯದಲ್ಲಿ ಅವರನ್ನು ಲಘುವಾಗಿ ಕಾಣುವುದು, ಅವರ ಭಾವಚಿತ್ರವನ್ನು ಪಠ್ಯಪುಸ್ತಕದಿಂದ ತೆಗೆದು ಅವರಿಗೆ ಈ ಸರ್ಕಾರ ಅಪಮಾನ ಮಾಡಿದೆ. ಬಿಜೆಪಿಯವರ ಕೆಟ್ಟ ಮನಸ್ಥಿತಿ ಸರಿಯಲ್ಲ.
ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಭಗತ್ ಸಿಂಗ್ ಅವರು ಇಡೀ ಯುವ ಸಮುದಾಯಕ್ಕೆ ಒಂದು ದೊಡ್ಡ ಸ್ಪೂರ್ತಿ. ದೇಶಕ್ಕೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ಹೋರಾಟಗಾರ. ಇಂತಹ ಮಹಾನ್ ದೇಶಭಕ್ತನ ವಿಚಾರವನ್ನು ಈ ಸರ್ಕಾರ ಪಠ್ಯಪುಸ್ತಕದಿಂದ ಕೈಬಿಟ್ಟಿದೆ.
ಸಮಾಜ ಸುಧಾರಕ ನಾರಾಯಣ ಗುರುಗಳ ವಿಚಾರವನ್ನು ಸರ್ಕಾರ ಪಠ್ಯಪುಸ್ತಕದಿಂದ ಬಿಟ್ಟಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸಿದ್ದ ಬಿಜೆಪಿ ಸರ್ಕಾರ, ಈಗ ಅವರ ವಿಚಾರವನ್ನು ಪಠ್ಯಪುಸ್ತಕದಿಂದ ಹೊರಗಿಟ್ಟು ಅಪಮಾನ ಮಾಡಿದೆ. ಧರ್ಮ ಯಾವುದಾದರೂ ತತ್ವ ಒಂದೇ ನಾಮ ನೂರಾದರು ದೈವ ಒಂದೇ ಎಂಬ ತತ್ವವನ್ನು ಪಾಲಿಸುತ್ತಿವೆ. ಈ ಎಲ್ಲ ಮಹನೀಯರ ವಿಚಾರಗಳು ಪಠ್ಯದಲ್ಲಿ ಇರುವುದರಿಂದ ಈ ಸರ್ಕಾರಕ್ಕೆ ಏನು ತೊಂದರೆ ಆಗುತ್ತಿದೆ?
ಧಾರ್ಮಿಕ ಚಳುವಳಿ ಮಾಡಿದ ನಾರಾಯಣ ಗುರುಗಳು, ಕಾರಂತರು ಹಾಗೂ ಪೆರಿಯಾರ್ ಅವರ ವಿಚಾರಗಳಿಗೆ ಈ ಸರ್ಕಾರ ಕತ್ತರಿ ಹಾಕಿದೆ. ಸಾವಿತ್ರಿಬಾಯಿ ಫುಲೆ, ಭಕ್ತಿ ಪಂಥ ಹಾಗೂ ಸೂಫಿ ಪಂಥ ಗಳ ಪಠ್ಯ ಕೈಬಿಟ್ಟಿದ್ದು, ಗೌತಮ ಬುದ್ಧ ಹಾಗೂ ಮಹಾವೀರ ಜೈನರ ಬಗ್ಗೆ ಏಕವಚನದಲ್ಲಿ ಪ್ರಸ್ತಾಪ ಮಾಡಲಾಗಿದೆ. ಹೀಗೆ ಅನೇಕ ವಿಚಾರವಾಗಿ ಈ ಸರ್ಕಾರ ಎಲ್ಲಾ ವರ್ಗದವರಿಗೆ ಅಪಮಾನ ಮಾಡಿದೆ. ಸರ್ಕಾರದ ಈ ನಿಲುವಿನ ವಿರುದ್ಧ ಯಾರೆಲ್ಲಾ ಧ್ವನಿ ಎತ್ತುತ್ತಿದ್ದಾರೆ ಅವರಿಗೆ ಬೆಂಬಲ ಸೂಚಿಸುವುದು ನಮ್ಮ ಕರ್ತವ್ಯ.
ರೈತರಿಗೆ ಆಗುತ್ತಿರುವ ಅನ್ಯಾಯ:
ಈ ಸರ್ಕಾರ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಬಿಟ್ಟಿದೆ. ಅಲ್ಲದೆ ರೈತರಿಗೆ ಕಲಬೆರಿಕೆ ಗೊಬ್ಬರವನ್ನು ನೀಡಲಾಗುತ್ತಿದೆ. ಈ ವಿಚಾರವಾಗಿ ನಮ್ಮ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಹಾಗೂ ಇತರೆ ಜಿಲ್ಲೆಗಳಿಂದ ಅನೇಕರು ನನಗೆ ಕರೆ ಮಾಡಿ ಹೇಳುತ್ತಿದ್ದಾರೆ. ಈ ಸರ್ಕಾರ ದೊಡ್ಡ ಮಾಫಿಯಾ ಜೊತೆ ಶಾಮಿಲಾಗಿದೆ. ಬಿತ್ತನೆ ಬೀಜದಿಂದ ರಸಗೊಬ್ಬರದವರೆಗೂ ರೈತರಿಗೆ ಪ್ರತಿ ಹಂತದಲ್ಲಿ ಮೋಸ ಮಾಡಲಾಗುತ್ತಿದೆ. 40% ಕಮಿಷನ್ ಜೊತೆಗೆ ಶೇಕಡಾ 50ರಷ್ಟು ಹೆಚ್ಚಿನ ಬೆಲೆಗೆ ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ. ಬೇರೆ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ ಎಂಬ ನೆಪ ಹೇಳಿ, ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮೂಲಕ ಜನರನ್ನು ದಿನನಿತ್ಯ ಮಾಡಲಾಗುತ್ತಿದೆಯೋ ಅದೇ ರೀತಿ ರಸಗೊಬ್ಬರದಲ್ಲಿ ರೈತರಿಂದ ಲೂಟಿ ಮಾಡಲಾಗುತ್ತಿದೆ. ಖಾಸಗಿ ಸಂಸ್ಥೆಗಳು ಹಾಗೂ ಬೇರೆ ಸಂಸ್ಥೆಗಳ ಮೂಲಕ ಈ ಸರ್ಕಾರ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ. ಈ ವಿಚಾರವಾಗಿ ಇದುವರೆಗೂ ಸರ್ಕಾರ ಯಾರೊಬ್ಬರನ್ನು ವಿಚಾರಣೆ ನಡೆಸಿ ಬಂಧಿಸಿಲ್ಲ.
ಬಿಜೆಪಿ ಸರ್ಕಾರಕ್ಕೆ ರೈತರ ಮೇಲೆ ಇಷ್ಟೊಂದು ದ್ವೇಷ ಏಕೆ?
ನಾನು ಹಲವು ರೈತರ ಜೊತೆ ಮಾತನಾಡಿ, ನನ್ನದೇ ಆದ ತನಿಖೆ ಮಾಡಿದ ನಂತರ, ಇಲ್ಲಿಗೆ ಬಂದು ಈ ವಿಚಾರವಾಗಿ ಮಾತನಾಡುತ್ತಿದ್ದೇನೆ. ಐದು ಕೆ.ಜಿ ರಸಗೊಬ್ಬರಕ್ಕೆ 1100ರೂ. ಬೆಲೆ ಇದ್ದರೆ, ಅದನ್ನು 1700 ರೊ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಗಾರು ಪ್ರಾರಂಭವಾಗುತ್ತಿದ್ದು ಈ ಸಮಯದಲ್ಲಿ ಸರ್ಕಾರದ ಈ ನಿರ್ಧಾರ ರೈತರಿಗೆ ಮಾರಕವಾಗಿದೆ. ಬಿಜೆಪಿ ಸರ್ಕಾರಕ್ಕೆ ರೈತರ ಮೇಲೆ ಇಷ್ಟೊಂದು ದ್ವೇಷ ಏಕೆ?
ಕೇವಲ ಬಾಯಿ ಮಾತಲ್ಲಿ ರೈತರನ್ನು ಅನ್ನದಾತ ಎಂದು ಕರೆದರೆ ಸಾಲದು. ಈ ಸರ್ಕಾರ ರೈತ ಸಂಘಟನೆಗಳ ಬಾಯಿಮುಚ್ಚಿಸುವ ಪ್ರಯತ್ನ ಮಾಡುತ್ತಿದೆ. ರೈತ ಹೋರಾಟಗಾರ, ರೈತ ಮುಖಂಡರು ಬೆಂಗಳೂರಿಗೆ ಬಂದರೆ ನಿಮ್ಮ ಕಾರ್ಯಕರ್ತರ ಮೂಲಕ ಅವರ ಮೇಲೆ ಹಲ್ಲೆ ಮಾಡಿಸುತ್ತೀರಿ.
ರಾಜ್ಯದ ಎಲ್ಲಾ ರೈತ ಮುಖಂಡರು ರೈತರ ಸಮಸ್ಯೆಗಳ ಬಗ್ಗೆ ಪಕ್ಷಾತೀತವಾಗಿ ಹೋರಾಟ ಮಾಡಲು ಸಜ್ಜಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ನೋವು ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ನಿಮ್ಮ ಜೊತೆ ಇರಲಿದೆ ಎಂದು ನಾನು ಈ ಸಂದರ್ಭದಲ್ಲಿ ಮಾತು ಕೊಡುತ್ತೇನೆ ಎಂದರು.
ದೆಹಲಿಯಲ್ಲಿ ನಡೆದ ರೈತರ ಹೋರಾಟಕ್ಕೆ ಬೆಂಬಲಿಸಿ ನಾವು ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದೆವು. ಅದಕ್ಕೆ ಬಿಜೆಪಿ ಸರ್ಕಾರ ನಮ್ಮ ಮೇಲೆ ಪ್ರಕರಣಗಳನ್ನು ದಾಖಲಿಸಿದೆ. ಸರ್ಕಾರ ಎಷ್ಟೇ ಪ್ರಕರಣ ದಾಖಲಿಸಿದ್ದರು, ನಮ್ಮನ್ನು ಜೈಲಿಗೆ ಹಾಕಿದ್ದರು ನಾವು ಅದನ್ನು ಎದುರಿಸಲು ಸಿದ್ಧವಿದ್ದೇವೆ. ಜನರಿಗಾಗಿ ಎಲ್ಲ ತ್ಯಾಗಕ್ಕೂ ನಾವು ತಯಾರಿದ್ದೇವೆ. ರೈತರು ಈ ಸಮಯದಲ್ಲಿ ಸುಮ್ಮನೆ ಕೂರದೆ ಧ್ವನಿಯೆತ್ತಬೇಕು. ಹೋರಾಟ ಮಾಡಬೇಕು. ಆ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರದ ಕಣ್ಣು ತೆರೆಸಬೇಕು.
ಈ ಸರ್ಕಾರ ಗುತ್ತಿಗೆದಾರರಿಂದ ಕಮಿಷನ್ ಪಡೆಯಿತು ನೇಮಕಾತಿ ಅಕ್ರಮ ನಡೆಸಿದ್ದು ಈಗ ರಸಗೊಬ್ಬರ ಕಂಪನಿಗಳ ಜೊತೆ ಸೇರಿ ರೈತರಿಗೆ ಮೋಸ ಮಾಡಲು ಮುಂದಾಗಿದೆ. ಹೀಗಾಗಿ ರೈತರು ಕೂಡಲೇ ಎಚ್ಚೆತ್ತು ಹೋರಾಟ ಮಾಡಬೇಕು ಎಂದು ನಾನು ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ನವ ಸಂಕಲ್ಪ ಶಿಬಿರ:
ಪಕ್ಷದ ರಾಜ್ಯಮಟ್ಟದ ಸಂಕಲ್ಪ ಶಿಬಿರವನ್ನು ಈಗಾಗಲೇ ಮಾಡಿದ್ದು ಇದೇ ತಿಂಗಳು ಹನ್ನೊಂದರಿಂದ 14 ತಾರೀಖಿನವರೆಗೂ ಜಿಲ್ಲಾಮಟ್ಟದಲ್ಲಿ ಸಂಕಲ್ಪ ಶಿಬಿರವನ್ನು ನಡೆಸಲು ಸೂಚಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ವಾರಗಳ ನಂತರ ಈ ಸಭೆಯನ್ನು ನಡೆಸಲು ತಿಳಿಸಲಾಗಿದೆ. ಆಯಾ ಜಿಲ್ಲೆಯ ನಾಯಕರು ಕೂಡ ಈ ಸಭೆಗೆ ಹೋಗಿ ಅಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ಅವರ ಸಲಹೆಗಳನ್ನು ಕೆಪಿಸಿಸಿ ನೀಡಬೇಕು ಎಂದು ಸೂಚಿಸಲಾಗಿದೆ.
ಕೆಪಿಸಿಸಿ ಕಡೆಯಿಂದ ನೀಡಲಾಗಿರುವ ಮಾರ್ಗಸೂಚಿಯಂತೆ ಎಲ್ಲಾ ಜಿಲ್ಲೆಗಳಲ್ಲಿ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಪಠ್ಯಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಶಿಕ್ಷಣ ಸಚಿವ ನಾಗೇಶ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ ಬಸವಣ್ಣ ಅಂಬೇಡ್ಕರ್ ಕುವೆಂಪು ಅವರ ವಿಚಾರಗಳು ರಾಜಕೀಯ ಮಾಡುವ ವಿಚಾರಗಳೇ? ಸಿದ್ದಗಂಗಾ ಶ್ರೀಗಳು ರಾಜಕಾರಣಿಗಳೇ? ನಿರ್ಮಲಾನಂದ ಸ್ವಾಮೀಜಿಗಳು ರಾಜಕಾರಣಿಗಳೇ? ಮುರುಘಾ ಶರಣರು ರಾಜಕಾರಣಿಗಳೇ? ಇತರೆ ಸ್ವಾಮೀಜಿಗಳು ರಾಜಕಾರಣಿಗಳೇ? ಅವರಿಗೆ ತಿಳುವಳಿಕೆ ಇಲ್ಲವೇ? ಬಸವಣ್ಣನವರನ್ನು ರಾಜಕಾರಣಿ ಎನ್ನಲು ಸಾಧ್ಯವೇ? ಅವರ ವಿಚಾರದಲ್ಲಿ ರಾಜಕಾರಣ ಮಾಡಲು ಸಾಧ್ಯವೇ? ನಾಗೇಶ್ ಅವರು ಕೇವಲ ಸಚಿವರು. ಅವರು ಉತ್ತರ ಹೇಳಲಿ. ಇಲ್ಲಿ ನಾವು ಬಿಜೆಪಿಯ ನಿಜವಾದ ಮುಖ ಹಾಗೂ ಮನಸ್ಥಿತಿ ವಿರುದ್ಧ ಹೊರಾಡುತ್ತೇವೆ. ಸಚಿವರು ರಾಜೀನಾಮೆ ನೀಡುತ್ತಾರೋ, ಬಿಡುತ್ತಾರೋ ನಮಗೆ ಬೇಡ. ಅವರು ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕವನ್ನು ಕಸದ ಬುಟ್ಟಿಗೆ ಎಸೆದು ಹಳೆ ಪಠ್ಯವನ್ನು ಮಕ್ಕಳಿಗೆ ನೀಡಿ ಬೋಧಿಸಬೇಕು’ ಎಂದು ತಿಳಿಸಿದರು.
ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಅನೇಕ ವಿಚಾರಗಳನ್ನು ಕೈಬಿಟ್ಟಿತ್ತು ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಯಾವುದಾದರು ವಿಚಾರವನ್ನು ಕೈಬಿಟ್ಟಿದ್ದರೆ ಸೇರಿಸಲಿ. ಆದರೆ ಕುವೆಂಪು ಸೇರಿದಂತೆ ಹಲವು ಮಹನೀಯರ ವಿಚಾರವನ್ನು ಕೈಬಿಟ್ಟು, ತಿರುಚಿ ಅವರಿಗೆ ಅಪಮಾನ ಮಾಡುತ್ತಿರುವುದೇಕೆ?’ ಎಂದು ಪ್ರಶ್ನಿಸಿದರು.
ಸಚಿವ ನಾಗೇಶ್ ಅರೆಸ್ಸೆಸ್ ಕಚೇರಿಗೆ ಭೇಟಿ ನೀಡಿ ಪಠ್ಯಪುಸ್ತಕ ವಿಚಾರವಾಗಿ ವರದಿ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಆರೆಸ್ಸೆಸ್ ಕಚೇರಿಗಾದರೂ ಭೇಟಿ ನೀಡಲಿ, ದೆಹಲಿಗಾದರೂ ಭೇಟಿ ನೀಡಲಿ. ಅವರು ರಾಜ್ಯವನ್ನು ಯಾವ ರೀತಿ ನಡೆಸುತ್ತಿದ್ದಾರೆ, ಮಕ್ಕಳ ಭವಿಷ್ಯ ಮುಖ್ಯವಾಗುತ್ತದೆ. ನಾವೆಲ್ಲರೂ ವಿದ್ಯಾಭ್ಯಾಸ ಮಾಡಿದ ವ್ಯವಸ್ಥೆ ಸರಿ ಇರಲಿಲ್ಲವೇ? ಈ ಸರ್ಕಾರ ಅಂಬೇಡ್ಕರ್ ಅವರು ಕೊಟ್ಟ ಧ್ವನಿ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೇ. ಈ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ?’ ಎಂದು ಕೇಳಿದರು.
ರೋಹಿತ್ ಚಕ್ರತೀರ್ಥ ಅವರಿಗೆ ಪೊಲೀಸ್ ಭದ್ರತೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರಿಗೆ ಪೊಲೀಸ್ ಭದ್ರತೆಯನ್ನಾದರೂ ನೀಡಲಿ, ಪ್ಯಾರಾ ಮಿಲಿಟರಿ ಭದ್ರತೆಯನ್ನಾದರೂ ನೀಡಲಿ. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಹೋರಾಟ ಸರ್ಕಾರದ ಮನಸ್ಥಿತಿಯ ಬಗ್ಗೆ. ಅವರು ಮಾಡಿದ್ದೆಲ್ಲ ಸರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಅಧಿಕೃತ ಮುದ್ರೆ ಒತ್ತಿದ್ದಾರೆ. ನಾವು ಯಾರ ಬಗ್ಗೆಯೂ ವೈಯಕ್ತಿಕ ವಿಚಾರವಾಗಿ ಮಾತನಾಡುತ್ತಿಲ್ಲ. ಯಾರ ಸಲಹೆಯನ್ನಾದರೂ ತೆಗೆದುಕೊಳ್ಳಲಿ. ಅದ್ಯಾವುದನ್ನು ಪ್ರಶ್ನಿಸುತ್ತಿಲ್ಲ. ಆದರೆ ಅವರು ಜನರಿಗೆ ಏನು ನೀಡುತ್ತಾರೆ ಎಂಬುದು ಮುಖ್ಯವಾಗುತ್ತದೆ’ ಎಂದರು.
ಪ್ರವಾದಿ ಮೊಹಮ್ಮದ್ ಅವರಿಗೆ ಅಪಮಾನ ಹಾಗೂ ಇಸ್ಲಾಂ ರಾಷ್ಟ್ರಗಳಲ್ಲಿ ಭಾರತದ ವಿರುದ್ಧದ ಅಭಿಯಾನದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ವಿಚಾರವಾಗಿ ನಾನು ಈ ಹಿಂದೆಯೇ ಹಲವು ಬಾರಿ ಎಚ್ಚರಿಕೆ ನೀಡಿದ್ದೆ. ಬಿಜೆಪಿಯ ಧರ್ಮ ದ್ವೇಷ ಮನಸ್ಥಿತಿಯಿಂದ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಮಾನವಾಗುತ್ತಿದೆ. ಈ ದೇಶದ ಪ್ರತಿಭಾವಂತ ಯುವ ಸಮುದಾಯ ಬೇರೆ ದೇಶಗಳತ್ತ ಮುಖ ಮಾಡಿದೆ. ನಮಗೆ ಜಾಗತಿಕ ಕರ್ನಾಟಕ, ಬಸವಣ್ಣನವರ ಕರ್ನಾಟಕ, ಶಿಶುನಾಳ ಶರೀಫರ ಕರ್ನಾಟಕ, ಕನಕದಾಸರ ಕರ್ನಾಟಕ ನಮಗೆ ಬೇಕು. ಮಹನೀಯರು ಕನಸು ಕಂಡಿದ್ದ ಕರ್ನಾಟಕ ರೂಪಿಸಬೇಕು.ಇಡೀ ವಿಶ್ವ ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಬಿಜೆಪಿಯ ಈ ನಿಲುವುಗಳಿಂದ ವ್ಯಾಪಾರ ಕ್ಷೇತ್ರ ಸೇರಿದಂತೆ ಎಲ್ಲ ವರ್ಗಕ್ಕೆ ನಷ್ಟವಾಗಿದೆ. ಬೆಂಗಳೂರಿನ ಘನತೆ ಉಳಿಸುವ ವಿಚಾರವಾಗಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆ ರಾಷ್ಟ್ರಗಳಲ್ಲಿ ಹಲವು ಭಾರತೀಯರು ಕೆಲಸ ಮಾಡುತ್ತಿದ್ದು, ಅವರಿಗೆ ಇಲ್ಲೇ ಕೆಲಸ ನೀಡಲಿ’ ಎಂದರು.
ಕಾಂಗ್ರೆಸ್ ನಾಯಕರಿಗೆ ಕೆಲಸ ಇಲ್ಲ ಎಂಬ ಸಿಎಂ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ‘ ಅವರಿಗೆ ಕೆಲಸ ಇಲ್ಲದೆ ಇಂತಹ ವಿಚಾರಗಳಿಗೆ ಕೈ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ತಂದು ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಭಾವನಾತ್ಮಕ ವಿಚಾರ ತೆಗೆದು ಜನರ ಗಮನ ಬೇರೆಡೆ ಸೆಳೆಯಲಾಗುತ್ತಿದೆ’ ಎಂದು ಉತ್ತರಿಸಿದರು.
ರಾಜ್ಯಸಭೆ ಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಎಲ್ಲಾ ಪಕ್ಷದ ನಾಯಕರುಗಳು ತಮ್ಮ ಆತ್ಮಸಾಕ್ಷಿ ಮತವನ್ನು ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಗೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಅವರಿಗೆ ಬೇರೆ ಸಂದರ್ಭಗಳಲ್ಲಿ ಸಾಕಷ್ಟು ಸಹಾಯ ಮಾಡಿದ್ದೇವೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡಿ. ಯಾರೆಲ್ಲ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದೀರಾ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ’ ಎಂದರು.
Key words: Cultural rape – BJP -government – Karnataka –DK Shivakumar