ಬೆಳಗಾವಿ,ಆ,8,2019(www.justkannada.in): ನಿನ್ನೆ ಸಂಜೆಯಿಂದ ಅತೀವೃಷ್ಠಿ ಹಾಗೂ ಪ್ರವಾಹ ಪೀಡಿದ ಪ್ರದೇಶಗಳಿಗೆಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಮುಂಜಾನೆ ಬಿಡುವಿಲ್ಲದ ಮಳೆಯಲ್ಲಿ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹುಕ್ಕೇರಿ, ಸಂಕೇಶ್ವರ, ಚಿಕ್ಕೋಡಿ ತಾಲೂಕಿನ ಪ್ರದೇಶಗಳ ನೇರೆಹಾವಳಿಯನ್ನು ಪರಿಶೀಲಿಸಿದರು.
ಇಂದು ಬೆಳಿಗ್ಗೆ ಬೆಳಗಾವಿ ನಗರದಲ್ಲಿ ಉಂಟಾಗಿರುವ ಅತಿವೃಷ್ಠಿ ಪರಿಣಾಮವನ್ನು ಅವಲೋಕಿಸಿ, ನಗರದ ಪರಿಹರ ಕೇಂದ್ರಗಳಿಗೆ ಭೇಟಿ ನೀಡಿದರು. ನಂತರ ಹುಕ್ಕೇರಿ ತಾಲೂಕಿನ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸಂತ್ರಸ್ತರಿಗೆ ಸಾತ್ವಾನ ಹೇಳಿ ಸಮಾಧಾನ ಪಡೆಸಿದರು. ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ ಅವರು, ಅನಾನುಕೂಲತೆಗಳು ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ತಾಲ್ಲೂಕಿನ ಹುಕ್ಕೆರಿಯ ಸಂಕೇಶ್ವರದಲ್ಲಿರುವ ಶಂಕರಲಿಂಗ ಸಮುದಾಯ ಭವನದಲ್ಲಿ ಹಲವು ನೆರೆ ಸಂತ್ರಸ್ಥರು ಆಶ್ರಯ ಪಡೆದಿದ್ದು ಅಲ್ಲಿಗೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸಂತ್ರಸ್ತರ ಸಮಸ್ಯೆಗಳನ್ನ ಆಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ನಿಮ್ಮ ಜತೆ ನಮ್ಮ ಸರ್ಕಾರವಿದೆ. ಭಯಪಡಬೇಡಿ. ಮನೆ ಕುಸಿದಿದ್ದರೇ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ. ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಈ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ತಲಾ ಐದು ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟರೆ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಕುರಿತು ಬಾಗಲಕೋಟೆ ಶಾಸಕರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪರಿಹಾರ ಕೇಂದ್ರಗಳಲ್ಲಿ ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಪರಿಹಾರ ಕಾರ್ಯ ಮುಂದುವರೆದಿದೆ. ಎರಡು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದ್ದು, ನಡುನೀರಿನಲ್ಲಿ ಸಿಕ್ಕಿಹಾಕಿಕೊಂಡಿರುವ ಬೆಳಗಾವಿ ತಾಲೂಕಿನ ಕೆಬಲಾಪೂರ ಗ್ರಾಮದ ಸಂದಪತಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Key words: inspection – flood – areas-Relief Center- CM BS Yeddyurappa