ಮೈಸೂರು,ಜೂನ್,18,2022(www.justkannada.in): ಜೂನ್ 21 ರಂದು ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಧಾನ ಸಮಾರಂಭ ಆಯೋಜನೆ ಮಾಡಲಾಗಿದ್ದು ಅಂದು ಇಡೀ ವಿಶ್ವದ ಚಿತ್ತ ಮೈಸೂರು ಅರಮನೆಯತ್ತ ಬೀಳಲಿದೆ.
ಹೌದು ಅಂದು ಯೋಗ ಕಾರ್ಯಕ್ರಮದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇನ್ನಿತರ ಗಣ್ಯರು ಭಾಗಿಯಾಗಲಿದ್ದು, ಇದಕ್ಕಾಗಿ ಐತಿಹಾಸಿಕ ಅರಮನೆಯ ಆವರಣದಲ್ಲಿ ಭರದ ಸಿದ್ದತೆ ನಡೆಸಲಾಗುತ್ತಿದೆ.
ಅರಮನೆಯ ಪೂರ್ವ ದಿಕ್ಕಿನಲ್ಲಿರುವ ಜಯ ಮಾರ್ತಾಂಡ ದ್ವಾರದ ಬಳಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದ್ದು ಇದೇ ವೇದಿಕೆ ಮೇಲೆ ವಿಶ್ವ ಯೋಗ ದಿನಾಚರಣೆ ಸಮಾರಂಭ ನಡೆಯಲಿದೆ. ಇದೇ ವೇದಿಕೆಯಲ್ಲಿ ಗಣ್ಯರು ಯೋಗ ಪ್ರದರ್ಶಿಸಲಿದ್ದು ಸಾವಿರಾರು ಮಂದಿ ಯೋಗಾಸನ ಮಾಡಲು ಅನುಕೂಲವಾಗುವಂತೆ ಮ್ಯಾಟ್ ವ್ಯವಸ್ಥೆ ಮಾಡಲಾಗಿದೆ.
ಅರಮನೆ ಆವರಣದ ಬಹುತೇಕ ಕಡೆ ಎಲ್ ಇ ಡಿ ಪರದೆಗಳನ್ನ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಅರಮನೆ ಆವರಣದಲ್ಲಿ ಹೆಚ್ಚಿನ ಬಿಗಿ ಭದ್ರತೆ ವಹಿಸಲಾಗಿದೆ.
ಇನ್ನು ಅರಮನೆ ಆವರಣದಲ್ಲಿ ಅಂತಿಮ ಹಂತದ ಸಿದ್ಧತೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಪರಿಶೀಲನೆ ಮಾಡಿದರು. ಪ್ರಧಾನ ವೇದಿಕೆಯನ್ನೇರಿ ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಿದ್ಧತೆಯನ್ನ ಎಸ್. ಟಿ ಸೋಮಶೇಖರ್ ವೀಕ್ಷಿಸಿದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಮುಡಾ ಆಯುಕ್ತ ಹೆಚ್. ವಿ ರಾಜೀವ್ ಉಪಸ್ಥಿತರಿದ್ದರು.
Key words: International -Yoga Day-Minister -ST Somashekhar – preparation – final stage – palace