ಬೆಂಗಳೂರು, ಜೂನ್ 20, 2022 (www.justkannada.in): ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಡೆಸುತ್ತಿರುವ ವಸತಿಶಾಲೆಗಳು, ಮಕ್ಕಳಲ್ಲಿ ಪೌಷ್ಟಿಕಾಂಶ ಮಟ್ಟವನ್ನು ಸುಧಾರಿಸಲು ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಸೇರ್ಪಡೆಗೊಳಿಸಲಿದೆ.
ಪ್ರಾಯೋಗಿಕವಾಗಿ ಈ ಶೈಕ್ಷಣಿಕ ವರ್ಷದಿಂದ ಹಾವೇರಿಯ ಎರಡು ವಸತಿಶಾಲೆಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡಲಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮದಿಂದ 600 ಮಕ್ಕಳಿಗೆ ಲಾಭವಾಗಲಿದೆ.
ಅಧಿಕಾರಿಗಳ ಪ್ರಕಾರ, ಹಿಂದುಳಿದ ತಾಲ್ಲೂಕುಗಳಲ್ಲಿರುವ ಶಾಲೆಗಳನ್ನು ಆರಂಭದಲ್ಲಿ ಆಯ್ಕೆ ಮಾಡಲಾಗಿದೆ. “ಹಾವೇರಿ ಜಿಲ್ಲೆಯಲ್ಲಿ ನಮ್ಮ ಇಲಾಖೆಯಡಿ ಐದು ಶಾಲೆಗಳು ಹಾಗೂ ಒಂದು ಪಿಯು ಕಾಲೇಜು ನಡೆಯುತ್ತಿದೆ. ಊಟದಲ್ಲಿ ಸಿರಿಧಾನ್ಯಗಳನ್ನು ಪರಿಚಯಿಸುತ್ತಿರುವ ನಾವು ಆಯ್ಕೆ ಮಾಡಿಕೊಂಡಿರುವ ಎರಡು ಶಾಲೆಗಳು ಹಿಂದುಳಿದ ತಾಲ್ಲೂಕುಗಳಲ್ಲಿವೆ,” ಎಂದು ವಿವರಿಸಿದರು.
ಒಟ್ಟು 10 ತಿಂಗಳ ಕಾಲ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ನೀಡಿ, ಮಕ್ಕಳಲ್ಲಾಗುವ ಪೌಷ್ಟಿಕತೆ ಸುಧಾರಣೆಯನ್ನು ಗಮನಿಸಲಾಗುವುದು. “ಸಿರಿಧಾನ್ಯಗಳ ಆಹಾರ ಸೇವನೆಯಿಂದ ಮಕ್ಕಳಲ್ಲಾಗುವ ಪೌಷ್ಟಿಕ ಸುಧಾರಣೆಯ ಕುರಿತು ಮ್ಯಾಸಾಚ್ಯೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಚಿತವಾಗಿ ಅಧ್ಯಯನ ನಡೆಸಲಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಇಲಾಖೆಯು ಹಾವೇರಿಯಲ್ಲಿರುವ ಈ ಎರಡೂ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಿದ್ದು, ಸುಧಾರಣಾ ನಂತರದ ಅಧ್ಯಯನದಲ್ಲಿ ಈ ತಪಾಸಣೆಯ ಫಲಿತಾಂಶವನ್ನು ದಾಖಲಿಸಲಿದೆ. “ಯಾವ ಸಿರಿಧಾನ್ಯವನ್ನು ಪರಿಚಯಿಸಬೇಕು ಎಂಬ ವಿಷಯವನ್ನು, ಮಕ್ಕಳ ಅಪೇಕ್ಷೆ ಹಾಗೂ ಸ್ಥಳೀಯ ಮಟ್ಟದಲ್ಲಿ ಲಭ್ಯತೆಯನ್ನು ಆಧರಿಸಿ ಆಯಾ ಶಾಲೆಗಳ ಆಯ್ಕೆಗೆ ಬಿಡಲಾಗಿದೆ,” ಎಂದರು.
ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಸಿರಿಧಾನ್ಯಗಳನ್ನು ಸೇರ್ಪಡೆಗೊಳಿಸುತ್ತಿರುವುದರಿಂದ ಪ್ರತಿ ತಿಂಗಳು ಪ್ರತಿ ಮಗುವಿಗೆ ರೂ.೨೦೦ ಹೆಚ್ಚುವರಿ ಖರ್ಚು ತಗುಲಲಿದೆ. ಪ್ರಸ್ತುತ ಪ್ರತಿ ತಿಂಗಳು ಪ್ರತಿ ಮಗುವಿಗೂ ತಗಲುತ್ತಿರುವ ಖರ್ಚು ರೂ.೧,೭೫೦. ಕೇಂದ್ರ ಶಿಕ್ಷಣ ಸಚಿವಾಲಯವು, ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಪರಿಚಯಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆಗಳನ್ನು ನೀಡಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Meal – Children – Minority -Residential -Schools.