ಮೈಸೂರು,ಜೂನ್,23,2022(www.justkannada.in): ನಗರದ ಕ್ರಾರ್ಡ್ ಹಾಲ್ ನಲ್ಲಿ ಬೆಂಗಳೂರಿನ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ನಡುವೆ ಗುರುವಾರ ನಡೆದ ಒಡಂಬಡಿಕೆಗೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಹಿ ಮಾಡಿದರು.
ನಂತರ ಮಾತನಾಡಿದ ಪ್ರೊ.ಜಿ.ಹೇಮಂತ್ ಕುಮಾರ್ ಅವರು, ಮೈಸೂರು ವಿವಿ 105 ವರ್ಷಗಳನ್ನು ದಾಟಿದೆ. ಅನೇಕ ಸಂಶೋಧನೆಗಳನ್ನು ವಿವಿ ಅಧ್ಯಾಪಕರು ಮಾಡಿದ್ದಾರೆ. ಮೊದಲು ರಿಸರ್ಚ್ ಪೇಪರ್ ಗಷ್ಟೇ ಸಂಶೋಧನೆ ಸೀಮಿತವಾಗಿತ್ತು. ಆದರೆ, ಈಗ 10-15 ವರ್ಷದಿಂದ ಸಂಶೋಧನೆಗಳ ಪೇಟೆಂಟ್ ಕೂಡ ನಡೆಯುತ್ತಿದೆ. 2013ರಿಂದ ಇದು ಶುರುವಾಗಿದ್ದು, 20 ಪೇಟೆಂಟ್ ಗಳು ಆಗಿದೆ. ಎಲ್ಲಾ ವಿಷಯಗಳನ್ನು ಸೇರಿದರೆ ಮೈಸೂರು ವಿವಿಯಲ್ಲಿ 1200 ಅಧ್ಯಾಪಕರಿದ್ದಾರೆ. ಪೇಟೆಂಟ್ ಸಂಶೋಧನೆಗೆ ಐಪಿಆರ್ ವಿಭಾಗವೂ ಕೆಲಸ ಮಾಡುತ್ತಿದೆ. ಸದ್ಯ 7-8 ಪೇಟೆಂಟ್ ಗೂ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರ ಗ್ರ್ಯಾಂಟ್ ಸಿಗುತ್ತದೆ ಎಂದರು.
ಜನಸಾಮಾನ್ಯರಿಗೆ ಉಪಯೋಗವಾಗುವ ಸಂಶೋಧನೆ ಆಗಬೇಕಿದೆ. ಇಂದಿನ ಒಡಂಬಡಿಕೆಯಿಂದ ಬೆಂಗಳೂರು ಸೈನ್ಸ್ ಅಂಡ್ ಟೆಕ್ನಾಲಜಿ ತಂಡ ತರಬೇತಿ ನೀಡುತ್ತದೆ. ಅನುದಾನ ಕೂಡ ನೀಡಲಿದ್ದಾರೆ. ವಿಜ್ಞಾನ ಸೇರಿದಂತೆ ಬೇರೆ ವಿಷಯಗಳ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದರು.
ಬೆಂಗಳೂರಿನ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಹೇಮಂತ್ ಕುಮಾರ್ ಮಾತನಾಡಿ, ಈ ಒಡಂಬಡಿಕೆ ಪ್ರಕಾರ ಬೌದ್ಧಿಕ ಹಕ್ಕಿನ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ವಿಭಿನ್ನ ಆಲೋಚನೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೆ, ಸಂಶೋಧಕರ ಪೇಟೆಂಟ್ ಗೂ ಸಹಕಾರ ನೀಡಲಾಗುವುದು. ಕೇಂದ್ರ ಸರಕಾರದ ಕಾರ್ಯಕ್ರಮಗಳಾದ ಆತ್ಮ ನಿರ್ಭರ್ ಭಾರತ, ಸ್ಕಿಲ್ ಇಂಡಿಯಾ, ಮೇಕಿಂಗ್ ಇಂಡಿಯಾವನ್ನು ಪ್ರೋತ್ಸಾಹಿಸುವ ಉದ್ದೇಶವೂ ಇದೆ. ಆರೋಗ್ಯಕರ ಮುಂದಿನ ಪೀಳಿಗೆಯನ್ನು ಸ್ಥಾಪಿಸುವ ಗುರಿಯೂ ಇದೆ. ಜೊತೆಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲು ಈ ಒಡಂಬಡಿಕೆ ನೆರವು ನೀಡುತ್ತದೆ ಎಂದರು.
ಮೈಸೂರು ವಿವಿ ಐಪಿಆರ್ ಸೆಲ್ ಸಂಯೋಜನಾಧಿಕಾರಿ ಡಾ.ಅಸ್ನಾ ಉಜ್ರೋ ಮಾತನಾಡಿ, ಬೌದ್ಧಿಕ ಹಕ್ಕು ಹಾಗೂ ವಿವಿಯ ಆವಿಷ್ಕಾರಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ಒಡಂಬಡಿಕೆ ಮುಖ್ಯ ಉದ್ದೇಶ. ಅಲ್ಲದೆ, ಯುವ ಸಂಶೋಧಕರ ಸಂಶೋಧನೆಗಳು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಮಾಡುವ ಉದ್ದೇಶವೂ ಇದೆ. ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬಹುದು ಎಂದರು.
ಪ್ರೊ.ಮೇವಾ ಸಿಂಗ್, ಪಿಎಂಇಬಿ ನಿರ್ದೇಶಕ ಡಾ.ಲೋಕನಾಥ್, ವಿಜ್ಞಾನ ಭವನ ಸಂಯೋಜನಾಧಿಕಾರಿ ಡಾ.ಚಂದ್ರ ನಾಯಕ್, ಸಹಾಯಕ ಪ್ರಾಧ್ಯಾಪಕ ಡಾ.ಸಿ.ಟಿ.ಮೋಹನ್ ಸೇರಿದಂತೆ ಇತರರು ಇದ್ದರು.
Key words: Agreement- between -Bangalore Science and Technology – Mysore university