ಪುರಿ, ಒರಿಸ್ಸಾ, ಜೂನ್ 28, 2022 (www.justkannada.in): ಅವರ ಬಳಿ ಯಾವುದೇ ಜೋಡಿಸುವ ವಿವರಗಳಿರುವ ಕೈಪಿಡಿಗಳಿಲ್ಲ, ರಚನೆಯ ಚಿತ್ರಗಳಾಗಲೀ ಆಧುನಿಕ ಯಂತ್ರಗಳಾಗಲೀ ಇಲ್ಲ. ಆದರೂ ಸಹ ಈ ಕುಶಲಕರ್ಮಿಗಳ ತಂಡ ಜಗನ್ನಾಥ ಹಾಗೂ ಆತನ ಇಬ್ಬರು ಒಡಹುಟ್ಟಿದವರ ಒಂದೇ ರೀತಿ ಹೋಲುವ ಬೃಹತ್ ರಥಗಳನ್ನು ನಿರ್ಮಾಣ ಮಾಡುತ್ತಾರೆ.
ಒರಿಸ್ಸಾದ ಪುರಿಯಲ್ಲಿ ನಡೆಯುವ ವಾರ್ಷಿಕ ರಥ ಯಾತ್ರೆಯಲ್ಲಿ ಅತ್ಯಂತ ಆಕರ್ಷಕವಾಗಿ ಹಾಗೂ ಬೃಹತ್ ಆಕಾರದಲ್ಲಿ ಕಾಣುವ ಹಾಗೂ ಅದ್ಭುತ ಕರಕುಶಲತೆಯಿಂದ ಕೂಡಿರುವ ಈ ಮೂರು ರಥಗಳು 12ನೇ ಶತಮಾನದ ಜಗನ್ನಾಥ ದೇವಾಲಯದ ಆವರಣದಿಂದ ಆರಂಭಗೊಂಡು ಮೆರವಣಿಗೆಯ ಮೂಲಕ ಗುಂಡಿಚ ದೇವಾಲಯವನ್ನು ತಲುಪುತ್ತವೆ.
“ಈ ರಥಗಳನ್ನು ಪ್ರತಿ ವರ್ಷವೂ ನಿರ್ಮಾಣ ಮಾಡಲಾಗುತ್ತದೆ. ಆದರೆ ಯಾವ ವರ್ಷವೂ ಸಹ ಅವುಗಳ ಎತ್ತರ, ಅಗಲ ಹಾಗೂ ಇನ್ನಿತರೆ ಯಾವುದೇ ಮಾನದಂಡಗಳಾಗಲೀ ಶತಶತಮಾನಗಳಿಂದಲೂ ಯಾವುದೇ ರೀತಿಯ ಲೋಪ ಅಥವಾ ಬದಲಾವಣೆಗಳು ಸಂಭವಿಸಿಲ್ಲ. ಆದರೆ ಕಾಲಕ್ರಮೇಣ ಈ ರಥಗಳಿಗೆ ಇನ್ನೂ ಕೆಲವು ವೈಶಿಷ್ಠತೆಗಳನ್ನು ಸೇರ್ಪಡೆಗೊಳಿಸಿ ಮತ್ತಷ್ಟು ವರ್ಣರಂಜಿತ ಹಾಗೂ ಆಕರ್ಷಕಗೊಳಿಸಲಾಗಿವೆ,” ಎನ್ನುತ್ತಾರೆ ಜಗನ್ನಾಥ ಪರಂಪರೆಯ ಸಂಶೋಧಕ ಅಸಿತ್ ಮೊಹಾಂತಿ.
ಈ ರಥಗಳನ್ನು ನಿರ್ಮಾಣ ಮಾಡುವ ಮರಗೆಲಸಗಾರರು ಯಾವುದೇ ರೀತಿಯ ಔಪಚಾರಿಕ ತರಬೇತಿಯನ್ನು ಪಡೆದುಕೊಂಡಿರುವವರಲ್ಲ. ಆದರೆ ಅವರ ತಾತ, ಮುತ್ತಾತಂದಿರು ಒಳಗೊಂಡಂತೆ ತಲತಲಾಂತರಗಳಿಂದ ರಥಗಳನ್ನು ತಯಾರಿಸುವ ಬುದ್ಧಿವಂತಿಕೆ ಹಾಗೂ ಜ್ಞಾನವನ್ನು ಪಡೆದುಕೊಂಡಿದ್ದಾರೆ.
ಈ ರಥಗಳನ್ನು ನಿರ್ಮಾಣ ಮಾಡಲು ಸುಮಾರು 4,000ಕ್ಕೂ ಹೆಚ್ಚಿನ ಸಂಖ್ಯೆಯ ಮರದ ತುಂಡಗಳನ್ನು ಬಳಸಲಾಗುತ್ತದಂತೆ. ಈ ರಥಗಳನ್ನು ನಿರ್ಮಾಣ ಮಾಡಲು ಕೆಲವು ಕುಟುಂಬಗಳು ಅನುವಂಶಿಕ ಹಕ್ಕುಗಳನ್ನು ಹೊಂದಿವೆ.
“ನಾನು ಕಳೆದ ನಾಲ್ಕು ದಶಕಗಳಿಂದ ಈ ರಥಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ನನ್ನ ತಂದೆ ಲಿಂಗರಾಜ ಮೊಹಾಪಾತ್ರ ಅವರಿಂದ ಈ ಕಲೆಯನ್ನು ಕರಗತ ಮಾಡಿಕೊಂಡೆ. ಅವರು ನಮ್ಮ ತಾತ ಅನಂತ ಮೊಹಾಪಾತ್ರ ಅವರಿಂದ ಈ ಕಲೆಯನ್ನು ಕಲಿತುಕೊಂಡಿದ್ದರು. ಇದೊಂದು ಪರಂಪರೆ. ಭಗವಂತನ ಸೇವೆ ಮಾಡಲು ಅವಕಾಶ ಲಭಿಸಿರುವುದಕ್ಕೆ ನಾವು ಧನ್ಯರು,” ಎನ್ನುತ್ತಾರೆ ಭಗವಾನ್ ಜಗನ್ನಾಥನ ೧೬ ಚಕ್ರಗಳನ್ನು ಹೊಂದಿರುವ ಬೃಹತ್ ರಥ ‘ನಂದಿಘೋಷ್’ ರಥವನ್ನು ನಿರ್ಮಾಣ ಮಾಡುವ ತಂಡದ ಮುಖ್ಯ ‘ಬಿಸ್ವಕರ್ಮ’ (ಮರಗೆಲಸಗಾರ/ಕಾರ್ಪೆಂಟರ್) ಬಿಜಯ್ ಮೊಹಾಪಾತ್ರ.
ಈ ರಥಗಳನ್ನು ನಿರ್ಮಾಣ ಮಾಡಲು ನಾವು ಕೇವಲ ‘ಉಳಿ’ಯಂತಹ ಪಾರಂಪರಿಕ ಉಪಕರಣಗಳನ್ನು ಮಾತ್ರ ಬಳಸುತ್ತೇವೆ. “ನಮ್ಮ ಅಳತೆ ‘ಹಾತ್’ (ಕೈ ಗಾತ್ರ) ಮತ್ತು ‘ಅಂಗುಲಿ (ಬೆರಳ ಅಳತೆ) ದಲ್ಲಿರುತ್ತದೆ. ಅಡಿಗಳು ಅಥವಾ ಇಂಚುಗಳ ಅಳತೆ ಇಲ್ಲ,” ಎನ್ನುತ್ತಾರೆ. ಮೊಹಾಪಾತ್ರ.
ಇದು ತಲತಲಾಂತರದಿಂದ ನಡೆದುಕೊಂಡು ಬಂದಿರುವ ಒಬ್ಬರಿಂದ ಒಬ್ಬರಿಗೆ ಅನುವಂಶಿಕವಾಗಿ ಬಂದಿರುವ ಕಲೆ. ಒಬ್ಬರ ಕೈಯಂತೆ ಇನ್ನೊಬ್ಬರ ಕೈ ಇರುವುದಿಲ್ಲ. ಅಳತೆ, ಗಾತ್ರದಲ್ಲಿ ವ್ಯತ್ಯಾಸವಾಗುತ್ತದೆ. ಹೀಗಿರುವಾಗ ಶತಶತಮಾನಗಳಿಂದ ‘ಹಾತ್’ ಅಳತೆ ಹೇಗೆ ಬಳಸುತ್ತಿರುವಿರಿ ಎಂಬ ಪ್ರಶ್ನೆಗೆ ಮೊಹಾಪಾತ್ರ ಉತ್ತರಿಸುತ್ತಾ, “ನನ್ನ ತಂದೆ ನನಗೊಂದು ಕೋಲನ್ನು ಕೊಟ್ಟಿದ್ದಾರೆ. ಆ ಕೋಲೇ ನನ್ನ ಒಂದು ಅಳತೆ (ಹಾತ್). ಅದು ೨೦ ಇಂಚುಗಳಿಗೆ ಸಮ. ಇಪ್ಪತ್ರೈದು ‘ಅಂಗುಲಿ’ಗಳು ಒಂದು ‘ಹಾತ್’ ಆಗುತ್ತದೆ. ನಾವು ಈ ರಥಗಳ ಎತ್ತರ ಮತ್ತು ಅಗಲವನ್ನು ಅಳೆಯಲು ಇವುಗಳನ್ನೇ ಅಳತೆಗೋಲುಗಳನ್ನಾಗಿ ಬಳಸುತ್ತೇವೆ,” ಎನ್ನುತ್ತಾರೆ ಈ ಕಾರ್ಪೆಂಟರ್ ಗಳು. ಇವರು ಈ ರಥಗಳ ನಿರ್ಮಾಣವನ್ನು ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ಆರಂಭಿಸುತ್ತಾರೆ ಮತ್ತು ಇದರ ನಿರ್ಮಾಣ ಪೂರ್ಣಗೊಳ್ಳಲು ೫೭ ದಿನಗಳ ಬೇಕಾಗುತ್ತವೆ.
ಈ ಮರಗೆಲಸಗಾರರ ಮಕ್ಕಳೂ ಸಹ ಇವರಿಗೆ, ಭಗವಾನ್ ಜಗನ್ನಾಥ್, ದೇವಿ ಸುಭದ್ರ ಮತ್ತು ಬಲಭದ್ರರ ರಥಗಳನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಈ ಮೂಲಕ ಇವರ ಕಲೆ ಅವರಿಗೆ ಕರಗತವಾಗುತ್ತದೆ. “ನಮ್ಮ ಮಕ್ಕಳು ಜೀವನೋಪಾಯಕ್ಕಾಗಿ ಬೇರೆ ಊರುಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ರಥ ನಿರ್ಮಾಣದ ಕೆಲಸಗಳು ಆರಂಭದಾಗ ಎರಡು ತಿಂಗಳ ಕಾಲ ನಮ್ಮೊಟ್ಟಿಗೆ ಇರುತ್ತಾರೆ. ನಮಗೆ ಇದು ಅತ್ಯಂತ ಧರ್ಮನಿಷ್ಠವಾದ ಕೆಲಸ,” ಎನ್ನುತ್ತಾರೆ. ಬರೀ ಮರಗೆಲಸಗಾರರಷ್ಟೇ ಅಲ್ಲ, ಬದಲಿಗೆ ಹಲವು ಕರಕುಶಲಕರ್ಮಿಗಳು ಮತ್ತು ಕಮ್ಮಾರರೂ ಸಹ ತಲತಲಾಂತರಗಳಿಂದ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
‘ಬಿಶ್ವಕರ್ಮ ಸೇವಕ್’ರು ರಥಗಳನ್ನು ನಿರ್ಮಾಣ ಮಾಡುವ ಮುಖ್ಯ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಂಡರೆ, ‘ಪಹಿ ಮಹಾರಾಣ’ರು ಈ ರಥಗಳ ಚಕ್ರಗಳನ್ನು ಅಳವಡಿಸುತ್ತಾರೆ. ಈ ರಥಗಳಿಗೆ ಮೊಳೆಗಳು, ಪಿನ್ನುಗಳು, ಕ್ಲ್ಯಾಂಪ್ ಗಳು ಮತ್ತು ಕಬ್ಬಿಣದ ರಿಂಗ್ ಗಳನ್ನು ಅಳವಡಿಸುವ ‘ಓಝಾ ಮಹಾರಾಣ’ (ಕಮ್ಮಾರರು)ರಂತಹ ಇನ್ನಿತರರೂ ಈ ತಂಡದಲ್ಲಿದ್ದಾರೆ.
ಈ ರಥಗಳಿಗೆ ‘ಅಷ್ಟ ಮಂಜರಿ’ (ಎಂಟು ಮಹಿಳೆಯರು) ಯಂತಹ ಹಲವು ಮರದ ಕಲಾಕೃತಿಗಳನ್ನೂ ಸಹ ಅಳವಡಿಸಲಾಗುತ್ತದೆ. ಈ ರಥಗಳನ್ನು ಅಲಂಕರಿಸುವ ಹೊದಿಕೆಗಳು, ಮೇಲಾವರಣಗಳು ಮತ್ತು ಬಾವುಟಗಳನ್ನು ಟೈಲರ್‌ಗಳು ಸಿದ್ಧಪಡಿಸುತ್ತಾರೆ. “ಒಟ್ಟಾರೆಯಾಗಿ ಅಂದಾಜು ೧೫೦ ಪಾರಂಪರಿಕ ಕರಕುಶಲಕರ್ಮಿಗಳು ೫೭ ದಿನಗಳ ಕಾಲ ಈ ರಥಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುತ್ತಾರೆ,” ಎನ್ನುತ್ತಾರೆ ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿ.
ಕೆಂಪು ಹಾಗೂ ಹಳದಿ ಬಣ್ಣಗಳಿಂದ ಸಿದ್ಧಪಡಿಸಿರುವ ಮೇಲು ಹೊದಿಕೆಯಿರುವ ಜಗನ್ನಾಥನ ರಥ ೮೩೨ ಮರದ ತುಂಡುಗಳಿಂದ ನಿರ್ಮಾಣಗೊಂಡರೆ, “ತಜಡವಜ” ಎಂಬ ಹೆಸರಿನ ೧೪ ಚಕ್ರಗಳಿರುವ ಬಲಭದ್ರನ ರಥಕ್ಕೆ ಕೆಂಪು ಮತ್ತು ಹಸಿರು ಬಟ್ಟೆಯನ್ನು ಬಳಸಲಾಗುತ್ತದೆ ಎಂದು ಭಾಸ್ಕರ್ ಮಿಶ್ರ ಎಂಬ ಹೆಸರಿನ ಮತ್ತೋರ್ವ ಸಂಶೋಧಕರು ವಿವರಿಸಿದರು.
ಅದೇ ರೀತಿ ‘ದರಪದಲನ್’ ಎಂಬ ಹೆಸರಿನ ಸುಭದ್ರಾ ದೇವಿಯ ರಥ ೧೨ ಚಕ್ರಗಳನ್ನು ಹೊಂದಿದ್ದು, ಕೆಂಪು ಮತ್ತು ಕಪ್ಪು ಹೊದಿಕೆಗಳನ್ನು ಹೊಂದಿರುತ್ತದೆ. ಒರಿಸ್ಸಾ ಸರ್ಕಾರದ ಕಾಮಗಾರಿ ಇಲಾಖೆಯು ಹಬ್ಬದ ದಿನದಂದು ಎಳೆಯುವುದಕ್ಕೆ ಮುಂಚೆ ಈ ರಥಗಳನ್ನು ಪರಿಶೀಲಿಸಿ ಫಿಟ್ನೆಸ್ ಪ್ರಮಾಣಪತ್ರಗಳನ್ನು ನೀಡುತ್ತದೆ. ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಈ ರಥೋತ್ಸವದಲ್ಲಿ ಪ್ರತಿ ವರ್ಷ ಭಾಗವಹಿಸುತ್ತಾರೆ. ಕಾಮಗಾರಿ ಇಲಾಖೆ ಹಾಗೂ ರೈಲ್ವೆ ಇಲಾಖೆಯ ಇಂಜಿನಿಯರುಗಳ ತಂಡ ರಥೋತ್ಸವ ನಡೆಯುವಾಗ ಅಗತ್ಯ ಬಿದ್ದರೆ ದುರಸ್ತಿಪಡಿಸಲು ಸಿದ್ಧವಿರುತ್ತದೆ.
ಹಬ್ಬ ಮುಗಿದ ನಂತರ ಈ ರಥಗಳನ್ನು ಕಳಚಿ, ಮುಖ್ಯವಾದ ಭಾಗಗಳನ್ನು ಹರಾಜು ಮಾಡಲಾಗುತ್ತದೆ. ಉಳಿದ ಮರವನ್ನು ದೇವಾಲಯದ ಅಡುಗೆ ಮನೆಗೆ ಕಳುಹಿಸಿಕೊಡಲಾಗುತ್ತದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: craftsmen- identical-jagannath-chariots- without-manuals- modern-machines