ಬೆಂಗಳೂರು, ಜೂನ್ 30, 2022 (www.justkannada.in): ಜುಲೈ 1 ರಿಂದ ಬೆಂಗಳೂರಿನಿಂದ ಹೊರವಲಯದ ರಸ್ತೆಗಳು ಹಾಗೂ ಸಂಪರ್ಕ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ನೈಸ್ ರಸ್ತೆ (NICE Road)ಯ ಟೋಲ್ ದರಗಳು ಹೆಚ್ಚಾಗಲಿವೆ ಎಂದು ನಂದಿ ಎಕನಾಮಿಕ್ ಕಾರಿಡಾರ್ ಎಂಟರ್ ಪ್ರೈಸೆಸ್ ಲಿಮಿಟೆಡ್ ಬುಧವಾರದಂದು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.
ಇದು ಕಳೆದ ಐದು ವರ್ಷಗಳಲ್ಲಿನ ಮೊದಲ ದರ ಪರಿಷ್ಕರಣೆಯಾಗಿದ್ದು, ಹೆಚ್ಚುತ್ತಿರುವ ವೆಚ್ಚಗಳ ಹಿನ್ನೆಲೆಯಲ್ಲಿ ಅನಿವಾರ್ಯವಾಗಿದೆ ಎಂದು ಕಂಪನಿ ತಿಳಿಸಿದೆ. ಟೋಲ್ ದರ ೧೦% ರಿಂದ ೨೦%ರಷ್ಟು ಹೆಚ್ಚಳವಾಗಲಿದೆ.
ದರ ವಿನಾಯಿತಿ ಒಪ್ಪಂದದ ಪ್ರಕಾರ ಟೋಲ್ ದರವನ್ನು ಪ್ರತಿ ವರ್ಷ ಪರಿಷ್ಕರಣೆಗೊಳಿಸಬಹುದಾಗಿದ್ದರೂ ಸಹ ಕಳೆದ ಐದು ವರ್ಷಗಳಿಂದ ಏರುತ್ತಿರುವ ಹಣದುಬ್ಬರದ ಕಾರಣ ಹಾಗೂ ಕೋವಿಡ್ ಸಾಂಕ್ರಾಮಿಕದಿಂದಾಗಿ ಹೆಚ್ಚಿಸಿರಲಿಲ್ಲ. ಆದರೂ ಸಹ ನಮ್ಮ ಚೌಕಟ್ಟು ಒಪ್ಪಂದ ಹಾಗೂ ಟೋಲ್ ವಿನಾಯಿತಿ ಒಪ್ಪಂದಗಳ ಪ್ರಕಾರ ಸಂಗ್ರಹಿಸಬಹುದಾಗಿರುವ ದರಕ್ಕಿಂತಲೂ ಈಗ ಪರಿಷ್ಕರಿಸುತ್ತಿರುವ ದರಗಳು ಕಡಿಮೆ ಇರಲಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ನೈಸ್ ರಸ್ತೆಯಲ್ಲಿ ಒಂದು ಕಿ.ಮೀ. ಟೋಲ್ ದರ ಎಲೆಕ್ಟ್ರಾನಿಕ್ಸ್ ಸಿಟಿ ಎತ್ತರಿಸಿದ ಎಕ್ಸ್ ಪ್ರೆಸ್ ವೇ ಟೋಲ್ ದರಕ್ಕಿಂತಲೂ ಕಡಿಮೆ ಇರಲಿದೆ.
ನೈಸ್ ರಸ್ತೆ ಬೆಂಗಳೂರು ಹಾಗೂ ಮೈಸೂರ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ೧೧೧ ಕಿ.ಮೀ. ಉದ್ದದ ರಸ್ತೆಯಾಗಿದೆ. ಬೆಂಗಳೂರು ನಗರದ ಒಳಗೆ, ೮.೧ ಕಿ.ಮೀ. ಉದ್ದದ ಸಂಪರ್ಕ ರಸ್ತೆಯೊಂದಿಗೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಗಳ ಮೂಲಕ ಹೊಸೂರು ಹಾಗೂ ತುಮಕೂರು ನಗರಗಳ ನಡುವೆ ಸಂಪರ್ಕ ಕಲ್ಪಿಸುವ ೪೧ ಕಿ.ಮೀ. ಉದ್ದದ ಉಪ-ಹೊವರ್ತುಲ ರಸ್ತೆಯನ್ನು ಹೊಂದಿದೆ. ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಎತ್ತರಿಸಿದ ಎಕ್ಸ್ ಪ್ರೆಸ್‌ವೇ ಹಾಗೂ ವಿಮಾನ ನಿಲ್ದಾಣದ ರಸ್ತೆ ಈ ಮೂರು ಬೆಂಗಳೂರಿನಲ್ಲಿರುವ ಟೋಲ್ ದರ ಹೊಂದಿರುವ ರಸ್ತೆಗಳಾಗಿವೆ.
ಇ-ಸಿಟಿ ಪ್ಲೈ ಓವರ್ ಅನ್ನು ನಿರ್ವಹಿಸುತ್ತಿರುವ ಬೆಂಗಳೂರು ಎಲಿವೇಟೆಡ್ ಟೋಲ್ ವೇ ಪ್ರೈ. ಲಿ. ಕೂಡ ಜುಲೈ 1 ರಿಂದ ಬಳಕೆದಾರರ ಶುಲ್ಕವನ್ನು ಹೆಚ್ಚಿಸುತ್ತಿದೆ. ನೈಸ್ ರಸ್ತೆ ಅಧಿಕಾರಿಗಳ ಪ್ರಕಾರ, ನಗರದ ಮೂರು ಟೋಲ್ ರಸ್ತೆಗಳಲ್ಲಿ ಹಗುರ ವಾಣಿಜ್ಯ ವಾಹನಗಳು ಹಾಗೂ ಟ್ರಕ್ ಗಳಿಗೆ ಅತೀ ಕಡಿಮೆ ಶುಲ್ಕವನ್ನು ಹೊಂದಲಿದ್ದು, ಕಾರು, ಜೀಪುಗಳು ಹಾಗೂ ವ್ಯಾನ್ ಗಳಿಗೆ ಎರಡನೆ ಅತೀ ಕಡಿಮೆ ದರವನ್ನು ಹೊಂದಿರಲಿದೆ. ಇ-ಸಿಟಿ ಫ್ಲೈ ಓವರ್ ಅತೀ ಹೆಚ್ಚು ಟೋಲ್ ದರವನ್ನು ವಿಧಿಸುತ್ತಿದೆ ಎಂದು ನೈಸ್ ರಸ್ತೆ ಅಧಿಕಾರಿಗಳು ತಿಳಿಸಿದ್ದಾರೆ.
ನಂದಿ ಎಕನಾಮಿಕ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್, ಕರ್ನಾಟಕ ಮಕ್ಕಳ ಪಕ್ಷ ಎಂಬ ಹೆಸರಿನಲ್ಲಿ ಸ್ವಂತ ರಾಜಕೀಯ ಪಕ್ಷವನ್ನು ರಚಿಸಿದ ಹಾಗೂ ೨೦೧೩ ರಿಂದ ೨೦೧೮ರವರೆಗೆ ಬೀದರ್ ದಕ್ಷಿಣ ಮತಕ್ಷೇತ್ರದ ಎಂಎಲ್ ಎಯೂ ಆಗಿರುವ ವಿವಾದಿತ ಉದ್ಯಮಿ ಅಶೋಕ್ ಖೇಣಿ ಅವರ ನಿಯಂತ್ರಣದಲ್ಲಿರುವ ಕಂಪನಿಯಾಗಿದೆ.
ನೈಸ್ ರಸ್ತೆ ಟೋಲ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಳಕೆದಾರರು ಅಸಹನೆಯನ್ನು ವ್ಯಕ್ತಪಡಿಸಿದ್ದು, ರಸ್ತೆಯ ಹಲವು ಭಾಗಗಳು ಗುಂಡಿಗಳಿಂದ ತುಂಬಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Nice -hiked -toll rates -after -five years.