ಬೆಂಗಳೂರು,ಜುಲೈ,4,2022(www.justkannada.in): ಹಾವಿನ ವಿಷ ಹಾಗೂ ಮತ್ತಿತರ ಜಂತುಗಳ ವಿಷಗಳಿಗೆ ಪ್ರತಿವಿಷ ಉತ್ಪಾದಿಸಲು ನೆರವಾಗುವ `ಪ್ರತಿವಿಷ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಐಟಿ/ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಸೋಮವಾರ `ಬೆಂಗಳೂರು ಹೆಲಿಕ್ಸ್ ಬಯೋಟೆಕ್ ಪಾರ್ಕ್’ನ ಐಬಿಎಬಿ ಸಂಸ್ಥೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಒಟ್ಟು 7 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಕೇಂದ್ರವು ದೇಶದಲ್ಲಿ ಪ್ರಮುಖವಾಗಿ ಹಾವಿನ ಕಡಿತದಿಂದ ಸಂಭವಿಸುತ್ತಿರುವ ರೈತರ ಸಾವಿನ ಪ್ರಮಾಣವನ್ನು ತಗ್ಗಿಸಲು ನೆರವಾಗಲಿದೆ ಎಂದರು.
ರಾಜ್ಯ ಸರಕಾರದ ಐಟಿ/ಬಿಟಿ ಇಲಾಖೆಯ ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್), ಐಬಿಎಬಿ (ಇನ್ಸ್ ಟಿಟ್ಯೂಟ್ ಆಫ್ ಬಯೋಇನ್ ಫರ್ಮ್ಯಾಟಿಕ್ಸ್ ಅಂಡ್ ಅಪ್ಲೈಡ್ ಬಯೊಟೆಕ್ನಾಲಜಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಸಹಭಾಗಿತ್ವದಡಿ ಈ ನೂತನ ಸಂಶೋಧನಾ ಕೇಂದ್ರವು ಅಸ್ತಿತ್ವಕ್ಕೆ ಬರುತ್ತಿದೆ. ಇಂತಹ ಒಂದು ಕೇಂದ್ರವು ಭಾರತದಲ್ಲೇ ಮೊತ್ತಮೊದಲನೆಯದಾಗಿದೆ’ ಎಂದರು.
ವೈವಿಧ್ಯಮಯ ಜೀವಪರಿಸರವನ್ನು ಹೊಂದಿರುವ ಭಾರತದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಸಂದರ್ಭಗಳಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿರುವ ಪ್ರಕರಣಗಳು ಕೂಡ ಕಳವಳಕಾರಿ ಎನ್ನುವಷ್ಟಿವೆ. ಉದ್ದೇಶಿತ ಸಂಶೋಧನಾ ಕೇಂದ್ರದಲ್ಲಿ ಸರ್ಪಾಗಾರ, ಸಂಶೋಧನಾ ಪ್ರಯೋಗಾಲಯ, ವಿಷ ಸಂಗ್ರಹಣಾ ವ್ಯವಸ್ಥೆ, ಇನ್ಕ್ಯುಬೇಷನ್ ಸೌಲಭ್ಯ ಮತ್ತು ಡಿಜಿಟಲ್ ಲೈಬ್ರರಿ ಇರಲಿದೆ ಎಂದು ಅವರು ತಿಳಿಸಿದರು.
16 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಈ ಕೇಂದ್ರವು ಕಾರ್ಯಾರಂಭ ಮಾಡಲಿದೆ. ಇಲ್ಲಿನ ಸರ್ಪಾಗಾರದಲ್ಲಿ 23 ಪ್ರಭೇದಗಳಿಗೆ ಸೇರಿದ 500ಕ್ಕೂ ಹೆಚ್ಚು ಬಗೆಯ ವಿಷಯುಕ್ತ ಜಂತುಗಳನ್ನು ಅಧ್ಯಯನದ ಸಲುವಾಗಿ ಇಡಲಾಗುವುದು. ಜತೆಗೆ, ಭಾರತೀಯ ಉಪಖಂಡದಲ್ಲಿರುವ ವಿಷಪೂರಿತ ಚೇಳುಗಳು ಮತ್ತು ಜೇಡರ ಹುಳುಗಳು ಕೂಡ ಇಲ್ಲಿನ ಸರ್ಪಾಗಾರದಲ್ಲಿ ಇರಲಿವೆ. ಪ್ರತಿವಿಷ ಚಿಕಿತ್ಸೆಯಲ್ಲಿ ಸಂಶೋಧನೆ ನಡೆಸುವ ಆಸಕ್ತಿ ಇರುವ ನವೋದ್ಯಮಗಳಿಗೆ ಇಲ್ಲಿನ ಇನ್ಕ್ಯುಬೇಷನ್ ಕೇಂದ್ರದಿಂದ (ಪರಿಪೋಷಣಾ ಕೇಂದ್ರ) ಪ್ರೋತ್ಸಾಹ ಒದಗಿಸಲಾಗುವುದು ಎಂದು ಅವರು ನುಡಿದರು.
ದೇಶದಲ್ಲಿ ಪ್ರತೀ ವರ್ಷ ಸರಾಸರಿ 58 ಸಾವಿರ ಸಾವು ಹಾವುಗಳ ಕಡಿತದಿಂದ ಸಂಭವಿಸುತ್ತಿದ್ದು, 1.37 ಲಕ್ಷದಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಈ ಕೇಂದ್ರವು ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನಗಳ ಮೂಲಕ ಪ್ರತಿವಿಷ ಥೆರಪಿಗಳನ್ನು ಅಭಿವೃದ್ಧಿ ಪಡಿಸಲಿದೆ. ಜತೆಗೆ, ಹಾವು ಕಡಿತಕ್ಕೆ ಇರುವ ಸಾಂಪ್ರದಾಯಿಕ ಚಿಕಿತ್ಸೆಗಳ ಪರಿಣಾಮಕಾರತೆತನ್ನೂ ಸುಧಾರಿಸಲಿದೆ ಎಂದು ಅವರು ವಿವರಿಸಿದರು.
ನೂತನ ಕೇಂದ್ರವು ವನ್ಯಜೀವಿ ವಿಧಿವಿಜ್ಞಾನ ಸಂಶೋಧನೆ, ಜೈವಿಕ ತಂತ್ರಜ್ಞಾನ ನಾವೀನ್ಯತೆ, ಹಾವು ಕಡಿತ ಕುರಿತು ಅರಿವು ಮತ್ತು ಜನಸಂಪರ್ಕ, ಜತೆಗೆ ಈ ವಲಯದಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಅರಣ್ಯ ಇಲಾಖೆಗೂ ನೆರವು ನೀಡಲಿದೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು.
ಸಂಶೋಧನಾ ಕೇಂದ್ರವು ಕಂಡುಹಿಡಿಯಲಿರುವ ಸಂಶೋಧನಾ ಫಲಿತಗಳನ್ನು ತ್ವರಿತ ಗತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಇದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಜತೆಗೆ ರಾಜ್ಯದ ಜೈವಿಕ ಆರ್ಥಿಕತೆಯೂ ಬಲಗೊಳ್ಳಲಿದೆ. ಇದಕ್ಕೆ ಪೂರಕವಾಗಿ, ಅಗ್ರಶ್ರೇಣಿಯ ಪ್ರತಿವಿಷ ಉತ್ಪಾದನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ್ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಐಎಸ್ಸಿಯ ಡಾ.ಕಾರ್ತೀಕ್ ಸುಣಗಾರ್, `ಪರಿಸರದಲ್ಲಿ ಹಾವಿನಂತಹ ಸರೀಸೃಪಗಳಿಗೂ ಪ್ರಮುಖ ಸ್ಥಾನವಿದೆ. ಆದರೆ, ಅವುಗಳ ಕಡಿತದಿಂದ ಉಂಟಾಗುವ ಸಾವುನೋವುಗಳನ್ನು ಆದಷ್ಟೂ ಕಡಿಮೆ ಮಾಡುವಂತಹ ಜೀವರಕ್ಷಕ ಪ್ರತಿವಿಷಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಈಗ ಇರುವ ತೀವ್ರ ಕೊರತೆಯನ್ನು ಹೋಗಲಾಡಿಸುವುದು ನೂತನ ಕೇಂದ್ರದ ಗುರಿಯಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಐಬಿಎಬಿ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಎಸ್.ಸುಬ್ರಹ್ಮಣ್ಯ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ, ಪ್ರೊ.ಶರತ್ ಚಂದ್ರ, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ನೃಪತುಂಗ ವಿವಿ ಕುಲಪತಿ ಡಾ.ಶ್ರೀನಿವಾಸ ಬಳ್ಳಿ, ಮಹಾರಾಣಿ ವಿ.ವಿ.ಯ ಪ್ರೊ.ಗೋಮತಿದೇವಿ ಹಾಜರಿದ್ದರು.
ಯುನೈಟೆಡ್ ಕಿಂಗ್ಡಮ್ ನ ಲಿವರ್ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯ ಪ್ರೊ.ನಿಕೊಲಸ್ ಕೇಸ್ವೆಲ್ ಹಾಗೂ ಐಟಿಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಅವರು ವರ್ಚುವಲ್ ಮೂಲಕ ಭಾಗವಹಿಸಿದ್ದರು.
Key words: Minister -Aswath Narayan – construction -Antidote -Research – Development -Centre.