ಮೈಸೂರು, ಜು.04, 2022 :(www.justkannada.in news) ಮೈಸೂರು ಸೈಬರ್ ಸೆಕ್ಯೂರಿಟಿ ಹಬ್ ಆಗಲು ಇದು ಸಕಾಲ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ಸ್ಟಾರ್ಟ್ ಅಪ್ ಪೆವೆಲಿಯನ್ ಹಾಗೂ ಮೈಸೂರು ಇಕೋಸಿಸ್ಟಮ್ ಪಾಲುದಾರರ ಸಹಯೋಗದಲ್ಲಿ ನಡೆದ ಮೈಸೂರು ಸ್ಟಾರ್ಟ್ ಅಪ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಯದುವೀರ್ ಒಡೆಯರ್ ಹೇಳಿದಿಷ್ಟು..
ಸ್ಟಾರ್ಟ್ ಅಪ್ ಮಾಡಲು ಸಕಲ ಸೌಲಭ್ಯಗಳು ಮೈಸೂರಿನಲ್ಲಿದೆ. ಬೆಂಗಳೂರಿನ ನಂತರ ಈ ನಗರ ವೇಗವಾಗಿ ಬೆಳೆಯುತ್ತಿದ್ದು ಸಾಫ್ಟ್ ವೇರ್ ಉದ್ಯಮದಲ್ಲಿ ಮೈಲಿಗಲ್ಲು ಸಾಧಿಸಿದೆ. ಮೈಸೂರು ಸಾಫ್ಟ್ ವೇರ್ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಮೈಸೂರನ್ನು ಸೈಬರ್ ಸೆಕ್ಯುರಿಟಿ ಹಬ್ ಮಾಡಲು ಉತ್ತಮ ಅವಕಾಶಗಳಿದ್ದು, ಇದಕ್ಕೆ ಈಗಾಗಲೇ ಚಾಲನೆ ಸಿಕ್ಕಿರುವುದು ಖುಷಿಯ ವಿಚಾರ.
ಮೈಸೂರೇ ಒಂದು ಬ್ರ್ಯಾಂಡ್. ಇಲ್ಲಿ ಮೈಸೂರು ಮಲ್ಲಿಗೆ, ಮೈಸೂರು ಸಿಲ್ಕ್, ಮೈಸೂರು ಸಿಮೆಂಟ್, ಮೈಸೂರು ಸ್ಯಾಂಡಲ್‌ನಂತಹ ಸಾಕಷ್ಟು ಬ್ರ್ಯಾಂಡ್‌ಗಳಿವೆ. ಇವುಗಳನ್ನು ಹೆಚ್ಚು ಪ್ರಚುರಪಡಿಸಬೇಕಿದೆ. ಇಲ್ಲಿನ ಮಹಾರಾಜರು 100 ವರ್ಷದ ಹಿಂದೆಯೇ ಆತ್ಮನಿರ್ಭರ ಅಡಿ ಮೈಸೂರನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಸಾಂಸ್ಕೃತಿಕ ನಗರಿಯಲ್ಲಿ ನವೋದ್ಯಮದ ಕನಸು ಬಿತ್ತಬೇಕು. ಅದು ಹತ್ತಾರು ಅವಕಾಶಗಳಿಗೆ ದಾರಿಮಾಡಬೇಕು. ಸಾಂಸ್ಕೃತಿಕ, ಪರಂಪರಿಕಾ ನಗರಿ ಮೈಸೂರು ನವೋದ್ಯಮ ನಗರಿಯಾಗಿಯೂ ಬೆಳೆಯಬೇಕು ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಮೈಸೂರು ವಿವಿಗೆ ಮೈಸೂರು ಮಹಾರಾಜರ ಕೊಡುಗೆಯನ್ನು ಸ್ಮರಿಸಿದರು. ಸದ್ಯ ವಿವಿ ಶತಮನೋತ್ಸವವನ್ನು ಪೂರೈಸಿದೆ. ವಿವಿಯಲ್ಲಿ ಕೆರಿಯರ್ ಹಬ್ ಸ್ಥಾಪನೆ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಹೊಸ ಐಡಿಯಾಗಳನ್ನು ಹಂಚಿಕೊಳ್ಳಬಹುದು. ಸ್ಟಾರ್ಟ್ ಅಪ್ ಬಗ್ಗೆ ವಿಷಯ ಇದ್ದರೆ ತಿಳಿಸಬಹುದು. ಇಂದು ಕೆರಿಯರ್ ಹಬ್‌ನಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿದೆ ಎಂದರು.
ಬ್ರಿಡ್ಜ್ ಅಧ್ಯಕ್ಷ ಮದನ್ ಪದಕಿ ಮಾತನಾಡಿ, ಇಂದು 10ರಲ್ಲಿ 9 ಯುವಕರು ನನಗೆ ಸರಕಾರಿ ಕೆಲಸ ಬೇಕು ಎನ್ನುತ್ತಾರೆ. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಎಲ್ಲರಿಗೂ ಸರಕಾರಿ ಕೆಲಸ ನೀಡಲಾಗುವುದಿಲ್ಲ. ಖಾಸಗಿ ವಲಯದಲ್ಲಿ ಹೆಚ್ಚಿನ ಅವಕಾಶ ಇದೆ. ಸ್ಟಾರ್ಟ್ ಅಪ್ ಬರಬೇಕು. ಯುವ ಉದ್ಯಮಿಗಳು ಹೆಚ್ಚಾಗಬೇಕು. ಬೆಂಗಳೂರು, ಮುಂಬಯಿನಂತೆ ಮೈಸೂರು ಬೆಳವಣಿಗೆ ಆಗಬೇಕು. ಇನ್ನು 10 ವರ್ಷದಲ್ಲಿ ಮೈಸೂರು ಬೆಳೆಯಲು ಸಾಕಷ್ಟು ಅವಕಾಶ ಇದೆ. ಗ್ರಾಮೀಣ ಭಾಗದ ಮಕ್ಕಳು ಹೊಸ ಉದ್ಯಮದ ಕನಸು ಕಾಣಬೇಕು. ತಂತ್ರಜ್ಞಾನ ನಗರದಿಂದ ಗ್ರಾಮೀಣ ಭಾಗಕ್ಕೆ ಬರುವಂತೆ ಗ್ರಾಮೀಣ ಭಾಗದ ಆವಿಷ್ಕಾರಗಳು ನಗರ ಪ್ರದೇಶಕ್ಕೂ ತಲುಪಬೇಕು ಎಂದರು.
ಇಐಎಂ ಸಿಇಒ, ಅಂಕಣಕಾರ ರವಿಶಂಕರ್ ಮಾತನಾಡಿದರು. ಸ್ಕ್ಯಾನ್ ರೇ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್ ಆಳ್ವಾ, ಎಕ್ಸೆಲ್ ಸ್‌ಟಾ ಸಿಇಒ ಡಿ. ಸುಧನ್ಯ, ಪ್ರೊಟೀನ್ ಇಗೋವ್ ಟೆಕ್ನಾಲಜೀಸ್ ಉಪಾಧ್ಯಕ್ಷ ಅನೀಶ್ ಉಪಾಧ್ಯಾಯ ಹಾಗೂ ಸೇರಿದಂತೆ ಇತರರು ಇದ್ದರು.
Key words : MYSORE CYBER SECURITY HUB -yaduveer-wodeyar