ಮೀರತ್, ಜುಲೈ,8, 2022(www.justkannada.in): ಸಮೋಸ ಬಹುತೇಕ ಎಲ್ಲರಿಗೂ, ಅದರಲ್ಲಿಯೂ ಭಾರತೀಯರಿಗೆ ಬಹಳ ಮೆಚ್ಚಿನ ಲಘು ಉಪಹಾರವಾಗಿದೆ. ಮೀರತ್ ನಲ್ಲಿ ಸಮೋಸಪ್ರಿಯರಿಗಾಗಿಯೇ ಒಂದು ದೊಡ್ಡ ಸವಾಲನ್ನು ಸೃಷ್ಟಿಸಿದ್ದು ಈ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ.
ಉತ್ತರ ಪ್ರದೇಶದ ಮೀರತ್ ನ ಕುರ್ತಿ ಬಜಾರ್ ನ ಒಂದು ಮಿಠಾಯಿ ಅಂಗಡಿ ಮಾಲೀಕರು ಎಂಟು ಕೆಜಿ ತೂಕದ ಬೃಹತ್ ಸಮೋಸವನ್ನು ತಯಾರಿಸಿದ್ದು, ಇದನ್ನು ಕೇವಲ 30 ನಿಮಿಷಗಳಲ್ಲಿ ತಿಂದು ಮುಗಿಸುವ ಸವಾಲನ್ನು ಹಾಕಿದ್ದಾರೆ. ಈ ಸವಾಲಿನಲ್ಲಿ ಗೆಲ್ಲುವವರಿಗೆ ರೂ.51 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಂಗಡಿಯ ಮಾಲೀಕ ಶುಭಂ ಅವರು, “ಸಮೋಸ ಕುರಿತಂತೆ ದೊಡ್ಡ ಸುದ್ದಿಯೊಂದನ್ನು ಸೃಷ್ಟಿಸಲು ವಿಭಿನ್ನವಾಗಿ ಆಲೋಚಿಸುತ್ತಿದ್ದೆ. ಆಗ ‘ಬಾಹುಬಲಿ’ ಸಮೋಸವನ್ನು ತಯಾರಿಸಲು ನಿರ್ಧರಿಸಿದೆ. ಮೊದಲು ನಾಲ್ಕು ಕೆಜಿಗಳ ಸಮೋಸ ತಯಾರಿಸಿದೆವು, ನಂತರ ಎಂಟು ಕೆಜಿ ಸಮೋಸವನ್ನು ತಯಾರಿಸಿದೆವು,” ಎಂದರು.
ಈ ಎಂಟು ಕೆಜಿ ತೂಕದ ಸಮೋಸದ ಬೆಲೆ ರೂ.೧,೧೦೦ ಆಗಿದ್ದು, ಇದರಲ್ಲಿ ಆಲೂಗಡ್ಡೆ, ಬಟಾಣಿ, ದೇಶಿ ಚೀಸ್ ಮತ್ತು ಡ್ರೈಫ್ರೂಟ್ಸ್ ಇದೆಯಂತೆ. “ಈವರೆಗೂ ನನ್ನ ಈ ಸಮೋಸ ತಿನ್ನುವ ಸವಾಲನ್ನು ಯಾರೂ ಯಶಸ್ವಿಯಾಗಿ ಪೂರ್ಣಗೊಳಿಸಿಲ್ಲ. ಅನೇಕರು ಇದನ್ನು ಪ್ರಯತ್ನಿಸಿದ್ದಾರೆ, ಆದರೆ ಯಶಸ್ವಿಯಾಗಿಲ್ಲ. ಮುಂದೆ ೧೦ ಕೆಜಿ ತೂಕದ ಸಮೋಸ ಸವಾಲನ್ನು ತಯಾರಿಸಬೇಕೆಂದು ಆಲೋಚಿಸಿದ್ದೇನೆ,” ಎನ್ನುತ್ತಾರೆ ಶುಭಂ.
ಆದರೆ ಈ ಬಾಹುಬಲಿ ಸಮೋಸದಿಂದ ಈತನ ಅಂಗಡಿಗೆ ಬರಲು ಮರೆತ್ತಿದ್ದಂತಹ ಗ್ರಾಹಕರು ಪುನಃ ಹಿಂದಿರುಗುತ್ತಿದ್ದು, ಈಗ ಹಿಂದಿಗಿಂತಲೂ ಈತನ ಅಂಗಡಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.
“ದೇಶದ ವಿವಿಧ ಭಾಗಗಳ ಆಹಾರ ಬ್ಲಾಗ್ಗರ್ ಗಳು ಈ ಬಾಹುಬಲಿ ಸಮೋಸ ನೋಡಲು ಆಗಮಿಸುತ್ತಿದ್ದು, ಈ ಕುರಿತು ಚಿತ್ರಗಳು ಹಾಗೂ ವೀಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ,” ಎಂದು ಶುಭಂ ವಿವರಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Baahubali-Samosa-Challenge-30 minutes -51 thousand -win.