ಬೆಂಗಳೂರು, ಜುಲೈ 27, 2022 (www.justkannada.in): ಒಂದು ಕಾಲದಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಬಿಬಿಎಂಪಿ ಸ್ವಾಮ್ಯದ ಯುಟಿಲಿಟಿ ಕಟ್ಟಡ, ಬೆಂಗಳೂರು ಮಹಾನಗರದ ಅತ್ಯಂತ ಎತ್ತರದ ಕಟ್ಟಡ ಎನಿಸಿಕೊಂಡಿತ್ತು. ಈ ಕಟ್ಟಡಕ್ಕೆ ಅಪಾರ ಬೇಡಿಕೆಯ ಜೊತೆಗೆ ರಾಜ್ಯಾದ್ಯಂತ ಜನಪ್ರಿಯತೆಯನ್ನು ಗಳಿಸಿತ್ತು. ಆದರೆ ಅದರ ಈಗಿನ ಸ್ಥಿತಿ ಹೇಗಿದೆ ಗೊತ್ತಾ? ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಯುಟಿಲಿಟಿ ಬಿಲ್ಡಿಂಗ್ ನ ದುಸ್ಥಿತಿಯ ಕುರಿತು ಒಂದು ವರದಿ ಮಾಡಲಾಗಿತ್ತು.
ಬೆಂಗಳೂರಿನ ಜನಪ್ರಿಯ ಎಂ.ಜಿ. ರಸ್ತೆಯಲ್ಲಿರುವ ೨೫-ಅಂತಸ್ತುಗಳಿರುವ ಈ ಬೃಹತ್ ಕಟ್ಟಡದ ದುಸ್ಥಿತಿ ಅಲ್ಲಿ ಪ್ರಸ್ತುತ ಇರುವ ಮಳಿಗೆಗಳ ಮಾಲೀಕರಲ್ಲಿ ಕಾಳಜಿಯನ್ನು ಸೃಷ್ಟಿಸಿದೆ. ನಗರದಾದ್ಯಂತ ದೊಡ್ಡ, ದೊಡ್ಡ ಮಾಲ್ ಗಳು, ಷಾಪ್ಪಿಂಗ್ ಸೆಂಟರ್ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಹಾವಳಿ ಹೆಚ್ಚಾಗಿರುವುದರ ಜೊತೆಗೆ, ಕಟ್ಟಡದ ಕಳಪೆ ನಿರ್ವಹಣೆಯಿಂದಾಗಿ ಈಗ ಯುಟಿಲಿಟಿ ಬಿಲ್ಡಿಂಗ್ ಗೆ ಭೇಟಿ ನೀಡುವ ಗ್ರಾಹಕರೇ ಅಪರೂಪ.
ಈ ಕಟ್ಟಡದ ನೆಲ ಮತ್ತು ಮೊದಲನೇ ಮಹಡಿಯಲ್ಲಿ ಕೆಲವು ಮಳಿಗೆಗಳೀವೆ. ಕಟ್ಟಡವನ್ನು ಪ್ರವೇಶಿಸುತ್ತಿರುವಂತೆ ಸಂಪೂರ್ಣ ನಿಶ್ಯಬ್ಧತೆ ಕಂಡು ಬರುತ್ತದೆ. ಎಂಜಿ ರಸ್ತೆಯಂತಹ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಇದೊಂದು ಆಶ್ಚರ್ಯವೇ ಸರಿ. ನೀವು ಮೆಟ್ಟಿಲುಗಳನ್ನು ಸಮೀಪಿಸುತ್ತಿರುವಂತೆ ಗ್ರಾಹಕರು ಈ ಕಟ್ಟಡಕ್ಕೆ ಬರಲು ಏಕೆ ಹಿಂಜರಿಯುತ್ತಿದ್ದಾರೆ ಎನ್ನುವುದು ಕಂಡು ಬರುತ್ತದೆ. ಮಂದ ಬೆಳಕು ಹಾಗೂ ಸಂಪೂರ್ಣವಾಗಿ ಕಲೆಗಳಾಗಿರುವ ಗೋಡೆಗಳು ಇಡೀ ವಾತಾವರಣವನ್ನೇ ನಾಶಗೊಳಿಸಿದೆ.
ಗ್ರಾಹಕರ ಸಂಖ್ಯೆ ಬಹುಪಾಲು ಕಡಿಮೆ ಆಗಿರುವುದರಿಂದಲೇ ಮೊದಲನೇ ಮಹಡಿಯಲ್ಲಿ ಬಹು ಮಳಿಗೆಗಳು ಮುಚ್ಚಿವೆ. “ಬಿಬಿಎಂಪಿ ಸಮರ್ಪಕ ನಿರ್ವಹಣೆ ಮಾಡದೆಯೇ ಬಾಡಿಗೆಯನ್ನು ಮಾತ್ರ ಸಂಗ್ರಹಿಸುತ್ತಿದೆ. ಇಲ್ಲಿ ಶೌಚಾಲಯದ ಪರಿಸ್ಥಿತಿಯೂ ಎಷ್ಟು ಶೋಚನೀಯವಾಗಿದೆ ಎಂದರೆ, ನಾವೇ ಸ್ವತಃ ಹೇಗೋ ಹಣ ಹೊಂದಿಸಿಕೊಂಡು ಅದನ್ನು ನಿರ್ವಹಿಸುತ್ತಿದ್ದೇವೆ,” ಎನ್ನುತ್ತಾರೆ ಸಾರ್ವಜನಿಕ ಯುಟಿಲಿಟಿ ಬಿಲ್ಡಿಂಗ್ ಟ್ರೇರ್ಸ್ ಅಸೋಸಿಯೇಷನ್ನ (ಪಿಯುಬಿಟಿಎ) ಅಧ್ಯಕ್ಷ ಕೆ. ರಾಮಚಂದ್ರ ಅವರು.
ಇಲ್ಲಿನ ಮಳಿಗೆ ಮಾಲೀಕರ ಮತ್ತೊಂದು ಆರೋಪವೆಂದರೆ ವಾಹ ನಿಲ್ದಾಣ ಸ್ಥಳಾವಾಕಾಶದ ಕೊರತೆ. “ಇಲ್ಲಿಗೆ ಗ್ರಾಹಕರು ಬರುವುದೇ ಅಪರೂಪ. ಅದರಲ್ಲೀ ವಾಹನ ನಿಲ್ಲಿಸಲು ಸ್ಥಳವಿರುವುದಿಲ್ಲ. ಇಲ್ಲಿರುವ ಸೀಮಿತ ಪಾರ್ಕಿಂಗ್ ಸ್ಥಳವನ್ನು ಎಂ.ಜಿ. ರಸ್ತೆಯ ಸುತ್ತಮುತ್ತಲಿನ ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ನಿಲ್ಲಿಸಲು ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ, ನಮಗೇ ಇಲ್ಲಿ ವಾಹನ ನಿಲ್ಲಿಸಲು ಸ್ಥಳ ಇರುವುದಿಲ್ಲ,” ಎನ್ನುತ್ತಾರೆ ರಾಮಚಂದ್ರ. ಸಂಘದ ಪ್ರಕಾರ ಬಹಳ ವರ್ಷಗಳಿಂದ ಬೇರೆಲ್ಲೂ ಹೋಗಲು ಬಯಸದೇ ಇಲ್ಲಿಗೆ ಬರುವ ಗ್ರಾಹಕರಿಂದ ಮಾತ್ರವೇ ಇಲ್ಲಿ ವ್ಯಾಪಾರ ಇನ್ನೂ ಉಳಿದುಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಟ್ಟಡದಲ್ಲಿರುವ ಬಹುಪಾಲು ಮಳಿಗೆಗಳು ಮುಚ್ಚಿವೆ.
ನಿಜಕ್ಕೂ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್ ನ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಸೋರುವ ನಲ್ಲಿಗಳು, ಛಾವಣೆ ಸೇರಿದಂತೆ ಎಲ್ಲೆಂದರಲ್ಲಿ ನೀರು ಸೋರಿಕೆಯಾಗುವ ಗೋಡೆಗಳು, ಒಂದು ಮಳಿಗೆಯಲ್ಲಂತೂ ಛಾವಣಿಯ ಒಂದು ಭಾಗವೇ ಮುರಿದು ಬಿದ್ದಿದ್ದು ದೊಡ್ಡ ರಂಧ್ರವೇ ಸೃಷ್ಟಿಯಾಗಿದೆ. ಛಾವಣಿಯಿಂದ ಸೋರುವ ನೀರಿನ ಹನಿಗಳನ್ನು ಸಂಗ್ರಹಿಸಲು ಈ ಕಟ್ಟಡದಲ್ಲಿರುವ ಕೆಲವು ಮಳಿಗೆಗಳ ಮಾಲೀಕರು ಬಕೆಟ್ ಗಳನ್ನು ಬಲಸುತ್ತಿದ್ದಾರೆ. ಮೊದಲನೇ ಮಹಡಿಯಲ್ಲಿರುವ ಶೌಚಾಲಯಗಳ ಸ್ಥಿತಿಯಂತೂ ಹೇಳತೀರದು. ಗಬ್ಬು ನಾತ ಮೇಲಿನ ಮಹಡಿಯವರೆಗೂ ರಾಚುತ್ತದೆ. ಮೇಲಾಗಿ ಶೌಚಾಲಯಗಳ ಬಾಗಿಲುಗಳೂ ಸಹ ಮುರಿದಿವೆ, ಗೋಡೆಗಳ ಬಣ್ಣವೂ ಕಳೆದುಕೊಂಡಿದೆ.
ಸುದ್ದಿ ಮೂಲ: ಬೆಂಗಳೂರು ಮಿರರ್
Key words: Bangalore- popular- public -utility -building – deplorable