ಹೊಸ ಬಜೆಟ್‌ಗೆ ಅತಿವೃಷ್ಟಿ ಅಡ್ಡಿ: ಲೆಕ್ಕಾಚಾರ ತಪ್ಪಿಸಿದ ಮಳೆ ಹಾನಿ, ಪ್ರವಾಹ ಸ್ಥಿತಿ

ಬೆಂಗಳೂರು:ಆ-13: ಸರ್ಕಾರ ರಚನೆಯಾಗುತ್ತಿದ್ದಂತೆ ಹೊಸ ಬಜೆಟ್‌ ಮಂಡಿಸುವ ಉತ್ಸಾಹದಲ್ಲಿದ್ದ ಬಿಜೆಪಿಗೆ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಅತಿವೃಷ್ಟಿ ಅನಿರೀಕ್ಷಿತ ಆಘಾತ ನೀಡಿದೆ. ಹಲವು ಜಿಲ್ಲೆಗಳ ಜನ ಪ್ರವಾಹದಿಂದ ತತ್ತರಿಸಿದ್ದು, ಅವರಿಗೆ ಪುನರ್ವಸತಿ
ಕಲ್ಪಿಸಿ ಮೂಲ ಸೌಕರ್ಯವನ್ನು ಪುನರ್‌ ನಿರ್ಮಿಸಬೇಕಾದ ಅನಿ ವಾರ್ಯತೆಯಿದೆ. ಹಾಗಾಗಿ ಕೇಂದ್ರದಿಂದ ವಿಶೇಷ ಅನುದಾನದ ನಿರೀಕ್ಷೆಯಲ್ಲಿ ಬಿಜೆಪಿ ಸರ್ಕಾರವಿದೆ.

ಮೂರು ತಿಂಗಳ ಅವಧಿಗೆ ಲೇಖಾನುದಾನ ಪಡೆದಿರುವ ಬಿಜೆಪಿಯು ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಬಜೆಟ್‌ ಮಂಡಿಸಲು ಚಿಂತಿಸಿದೆ. ಆದರೆ ಅತಿವೃಷ್ಟಿಯಿಂದ ಉಂಟಾದ ಪ್ರವಾಹದಿಂದಾಗಿ ಭಾರೀ
ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದು, ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಪುನರ್ವಸತಿ, ಪುನರುಜ್ಜೀವ ನಕ್ಕೆ ಕೇಂದ್ರದ ಸಹಾಯ ಹಸ್ತವನ್ನೇ ನೆಚ್ಚಿಕೊಂಡಿದ್ದು, ಯಾವ ರೀತಿಯ ಸ್ಪಂದನೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆರು ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹೊಸ ಬಜೆಟ್‌ ಮಂಡಿಸಿ ಜನಪರ ಯೋಜನೆಗಳನ್ನು ಘೋಷಿಸುವುದು. ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳಡಿ ಹೆಚ್ಚಿನ ಅನುದಾನ ಪಡೆದು ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ವೃದಿಟಛಿಸಿಕೊ ಳ್ಳುವುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು. ಸಂಪುಟ ರಚನೆಯಾಗುತ್ತಿದ್ದಂತೆ ಬಜೆಟ್‌ ತಯಾರಿ ಪ್ರಕ್ರಿಯೆ ಆರಂಭಿಸಲು ಚಿಂತಿಸಿತ್ತು. ಆದರೆ ಅನಿ ರೀಕ್ಷಿತವಾಗಿ 17 ಜಿಲ್ಲೆಗಳಲ್ಲಿ ಬಂದೆರಗಿದ ಅತಿವೃಷ್ಟಿ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿದೆ.

ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ: ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಹಕಾರ ಬ್ಯಾಂಕ್‌ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿನ ಆಯ್ದ ಮೊತ್ತದ ರೈತರ ಸಾಲ ಮನ್ನಾ ಸೇರಿದಂತೆ ಇತರೆ ಕೆಲ ಯೋಜನೆಗಳಿಗೆ ಹಣ
ಹೊಂದಿಸುವ ಪ್ರಯತ್ನದ ಭಾಗವಾಗಿ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಈಗಾಗಲೇ ಅಂದಾಜು ಮಾಡಿರುವ ತೆರಿಗೆ ಆದಾಯದಲ್ಲಿ ಗರಿಷ್ಠ ಸಂಗ್ರಹವಾದರೂ ಹೆಚ್ಚಿನ ಆದಾಯ ಕ್ರೋಡೀಕರಣ
ಸಾಧ್ಯತೆ ಕಡಿಮೆ ಎನ್ನಲಾಗಿದೆ. ರಾಜ್ಯದಲ್ಲಿ 45 ವರ್ಷಗಳಲ್ಲಿ ಕಂಡು ಕೇಳರಿಯದ ಪ್ರವಾಹ ತಲೆದೋರಿದ್ದು, ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ, ಮೂಲ ಸೌಕರ್ಯಕ್ಕೆ ಹಾನಿಯಾಗಿದೆ.

ಇದರ ಪುನರ್ವಸತಿ ಹೊಂದಿಸಬೇಕಾದ ಹಣದ ಮೊತ್ತವನ್ನು
ಕಲ್ಪಿಸಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಅವರೇ ಇತ್ತೀಚೆಗೆ ಹೇಳಿದ್ದಾರೆ. ಸದ್ಯ
ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿಯಿಂದ
ಉಂಟಾಗಿರುವ ನಷ್ಟ ಭರಿಸಲು, ಪುನರ್ವಸತಿ, ಪುನರುಜ್ಜೀವನ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನವೇ ಆಸರೆ ಎನಿಸಿದೆ. ಈಗಾಗಲೇ 7000 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ. ಕೇಂದ್ರ ಸರ್ಕಾರ ಅನುದಾನ ನೀಡಿದರಷ್ಟೇ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸಾಧ್ಯ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದರು.

ಜನವರಿಯಲ್ಲಿ ಬಜೆಟ್‌?
ಇನ್ನೊಂದು ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಜನವರಿಯಲ್ಲೇ ಬಜೆಟ್‌ ಮಂಡಿಸುವ ವ್ಯವಸ್ಥೆ ತರುವ ಬಗ್ಗೆ ಚಿಂತಿಸಿದ್ದು, ಒಂದೊಮ್ಮೆ ಮುಂದಿನ ವರ್ಷದಿಂದಲೇ ಜಾರಿಗೊಳಿಸಲು ಮುಂದಾದರೆ
ಆಗ ರಾಜ್ಯ ಸರ್ಕಾರದ ವತಿಯಿಂದ ಮಧ್ಯಂತರ ಬಜೆಟ್‌ಗಿಂತಲೂ ಜನವರಿ ಹೊತ್ತಿಗೆ ಬಜೆಟ್‌ ಮಂಡಿಸುವ ನಿರ್ಧಾರ ಕೈಗೊಂಡರೂ ಆಶ್ಚರ್ಯವಿಲ್ಲ. ಪರಿಹಾರ ಹಾಗೂ ಪುನರುಜ್ಜೀವನ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ ಸೆಪ್ಟೆಂಬರ್‌ ಎರಡನೇ ವಾರದಿಂದ ಬಜೆಟ್‌ ತಯಾರಿ ಆರಂಭಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
ಕೃಪೆ:ಉದಯವಾಣಿ

ಹೊಸ ಬಜೆಟ್‌ಗೆ ಅತಿವೃಷ್ಟಿ ಅಡ್ಡಿ: ಲೆಕ್ಕಾಚಾರ ತಪ್ಪಿಸಿದ ಮಳೆ ಹಾನಿ, ಪ್ರವಾಹ ಸ್ಥಿತಿ
rain-problem-to-new-budget