ಕಾಶ್ಮೀರದ ಫ್ಯಾಕಲ್ಟಿ ಆಫ್ ಅಗ್ರಿಕಲ್ಚರ್‌ ನಲ್ಲಿ ನಾವೆಲ್ ಬಯೊ-ಫಾರ್ಮುಲೇಷನ್ಸ್ ಕಾರ್ಯಾಗಾರ ಅಂತ್ಯ.

ಕಾಶ್ಮೀರ,ಆಗಸ್ಟ್,18,2022 (www.justkannada.in): ‘ಸುಸ್ಥಿರ ಕೃಷಿ-ಪರಿಸರವ್ಯವಸ್ಥೆಗಳಲ್ಲಿ ಬಳಕೆಗಾಗಿ ನವೀನ ಜೈವಿಕ-ಸೂತ್ರೀಕರಣಗಳ ಅಭಿವೃದ್ಧಿ’ (Development of Novel Bio-formulations for Use in Sustainable Agro-ecosystems) ಎಂಬ ವಿಷಯದ ಕುರಿತು ವಡುರಾ, ಸ್ಕೌಸ್ತ್ – ಕಾಶ್ಮೀರದ ಫ್ಯಾಕಲ್ಟಿ ಆಫ್ ಅಗ್ರಿಕಲ್ಚರ್‌ನಲ್ಲಿ ನಡೆದಂತಹ ೧೦ ದಿನಗಳ ಅವಧಿಯ ಉನ್ನತ ಮಟ್ಟದ ಕಾರ್ಯಾಗಾರ ಇಂದು ಸಂಕ್ಷಿಪ್ತ ಸಮಾರೋಪ ಸಮಾರಂಭದೊಂದಿಗೆ ಅಂತ್ಯಗೊಂಡಿತು.

ಭಾರತ ಸರ್ಕಾರದ ಎಸ್‌ ಇ ಆರ್‌ ಬಿ-ಡಿಎಸ್‌ ಟಿ ವತಿಯಿಂದ Accelerate Vigyan (AV)ಯೋಜನೆಯಡಿ ಪ್ರೋಯೋಜಿಸಲ್ಪಟ್ಟಿದ್ದ ಈ ಕಾರ್ಯಾಗಾರವನ್ನು ಬೇಸಿಕ್ ಸೈನ್ಸ್ ಹಾಗೂ ಹ್ಯೂಮಾನಿಟಿಸ್ ವಿಭಾಗ ಆಯೋಜಿಸಿತ್ತು. ಸುರಕ್ಷಿತ ಕೃಷಿ ಅಭ್ಯಾಸಗಳಲ್ಲಿ ವಿವಿಧ ಪರಿಣಾಮಕಾರಿಯಾದ ಜೈವಿಕ-ಸೂತ್ರಗಳ ಅಭಿವೃದ್ಧಿಯಲ್ಲಿ ಇತ್ತೀಚಿನ ಸಂಶೋಧನೆಗಳ ಕುರಿತು ಭಾಗವಹಿಸುವವರಿಗೆ ತಿಳಿಸಿಕೊಡುವುದು ಈ ಕಾರ್ಯಾಗಾರ ಆಯೋಜನೆಯ ಉದ್ದೇಶವಾಗಿತ್ತು. ಈ ಕಾರ್ಯಾಗಾರವನ್ನು ಆಗಸ್ಟ್ ೦೧ ರಿಂದ ಆಗಸ್ಟ್ ೧೦, ೨೦೨೨ರವರೆಗೆ ನಡೆಸಲಾಯಿತು. ಸ್ಕೌಸ್ತ್-ಕಾಶ್ಮೀರದ ೨೫ಕ್ಕೂ ಹೆಚ್ಚಿನ ಸಂಖ್ಯೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ತಜ್ಞರೊಂದಿಗೆ ವಿಷಯಗಳ ಬಗ್ಗೆ ಸಮಾಲೋಚಿಸಿದರು.

ಮೈಸೂರು ವಿಶ್ವವಿದ್ಯಾಲಯದ ಜೈವಿಕತಂತ್ರಜ್ಞಾನ ವಿಭಾಗದ ನ್ಯಾನೊಬಯೊ ಟೆಕ್ನಾಲಜಿ ಪ್ರಯೋಗಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಎನ್. ಅವರು ಈ ಕಾರ್ಯಾಗಾರದಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಜೊತೆಗೆ ಸಮಾರೋಪ ಸಮಾರಂಭದ ಅತಿಥಿಯೂ ಆಗಿದ್ದರು. ಈ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ನಡೆದಂತಹ ಉಪನ್ಯಾಸಗಳ ಸಂಕಲನವೊಂದನ್ನು ಬಿಡುಗಡೆಗೊಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಕೈಗಾರಿಕೆಗಳ ಮಂಡಳಿಯ ಉಪಾಧ್ಯಕ್ಷೆ ಡಾ. ಹೀನಾ ಷಫಿ ಭಟ್ ಅವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು ಹಾಗೂ ಡಾ. ಗೀತಾ ಅವರ ಜೊತೆಗೆ ವಿದ್ಯಾರ್ಥಿಗಳ ಕಲ್ಯಾಣ ಸ್ಕೌಸ್ತ್-ಕೆನ ಮುಖ್ಯಸ್ಥ ಪ್ರೊ. ಎಂ.ಎ.ಎ. ಸಿದ್ಧಿಕಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಹೀನಾ ಷಫಿ ಭಟ್ ಅವರು,  ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿರುವುದಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿ, ಈ ೧೦ ದಿನಗಳ ಕಾರ್ಯಾಗಾರದಲ್ಲಿ ನಡೆದಂತಹ ಎಲ್ಲಾ ತರಬೇತಿಗಳೂ ಸಹ ಬಹಳ ಮುಖ್ಯವಾಗಿದ್ದು, ಇಲ್ಲಿನ ಯುವಜನರ ಆತ್ಮವಿಶ್ವಾಸವನ್ನು ವೃದ್ಧಿಸಲು ಪ್ರಸ್ತುತ ಬಹಳ ಅಗತ್ಯವಾಗಿತ್ತು ಎಂದರು. ಜೊತೆಗೆ, ನಿರುದ್ಯೋಗಿ ಗ್ರಾಮೀಣ ಯುವಜನರಿಗೆ ಆದಾಯ ಗಳಿಸಲು ಹಾಗೂ ಜೀವನೋಪಾಯವನ್ನು ಕಂಡಕೊಳ್ಳುವಲ್ಲಿ ಈ ತರಬೇತಿಯು ಬಹಳ ಸಹಾಯಕಾರಿಯಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿರುದ್ಯೋಗಿ ಯುವಜನರಿಗೆ ವಿವಿಧ ಯೋಜನೆಗಳು ಹಾಗೂ ನೀತಿಗಳಡಿ ಒದಗಿಸಲಾಗುತ್ತಿರುವ ಸಹಾಯಧನಗಳ ಕುರಿತು ಒತ್ತು ನೀಡಿ ಮಾತನಾಡಿದ ಅವರು, ಈ ಎಲ್ಲಾ ಯೋಜನೆಗಳ ಲಾಭ ಪಡೆಯಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು. ಬೆಳೆಗಳಲ್ಲಿ ಪೌಷ್ಟಿಕತೆ ಕೊರತೆ, ರೋಗಗಳು ಹಾಗೂ ಕೀಟಗಳನ್ನು ಗುರುತಿಸುವ ಸಸ್ಯ ಚಿಕಿತ್ಸಾಲಯಗಳನ್ನು ತೆರೆದು ಸ್ವಾವಲಂಬಿಗಳಾಗುವುದರ ಜೊತೆಗೆ ಕೃಷಿಕ ಸಮುದಾಯದವರಿಗೆ ನಿಖರವಾದ ಜ್ಞಾನ ನೀಡುವಂತೆ ಸಲಹೆ ನೀಡಿದರು.

ಪ್ರೊ. ಎಂ.ಎ.ಎ. ಸಿದ್ದಿಕಿ ಅವರು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಿಂಥೆಟಿಕ್ ರಾಸಾಯನಿಕಗಳ ಬಳಕೆಗೆ ಪರ್ಯಾಯವಾಗಿ ನವೀನ ಸೂತ್ರಗಳ ಅಭಿವೃದ್ಧಿಯ ಕಡೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿಕೊಡುತ್ತಾ, ಪರಿಣಾಮಕಾರಿ ಸಂಪನ್ಮೂಲ ಬಳಕೆಯ ನಿಟ್ಟಿನಲ್ಲಿ ಬೆಳಕು ಚೆಲ್ಲಿದರು.

ಕೃಷಿ ಬೋಧನಾ ವಿಭಾಗದ ಮುಖ್ಯಸ್ಥ ಪ್ರೊ. ರೈಹನ ಹೆಚ್. ಕಾಂತ್ ಅವರು, ಪರಿಸರ ಕಾಳಜಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜೈವಿಕಸೂತ್ರಗಳ ಅಗತ್ಯ ಹಾಗೂ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ಇದಕ್ಕೂ ಮುಂಚೆ ಡಾ. ಸಜದ್ ಅಹ್ಮದ್ ಅವರು ಕಾರ್ಯಾಗಾರದ ಸಂಕ್ಷಿಪ್ತ ಮೇಲ್ನೋಟವನ್ನು ಪ್ರಸ್ತುತಪಡಿಸಿ, ಕಾರ್ಯಾಗಾರದ ಯಶಸ್ವಿ ಆಯೋಜನೆಗಾಗಿ ಕೋರ್ಸ್ ನಿರ್ದೇಶಕ ಡಾ. ಆಸಿಫ್ ಮಲಿಕ್ ಅವರಿಗೆ ವಂದನೆಗಳನ್ನು ಸಲ್ಲಿಸಿದರು.

ಸ್ಕೌಸ್ತ್-ಕೆ ವಡುರಾ ಆವರಣದಲ್ಲಿ ನಡೆದ ೧೦-ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ ತರಬೇತಿ ಅಭ್ಯರ್ಥಿಗಳಿಗೆ ಸಕ್ರಿಯ ಭಾಗವಹಿಸುವಿಕೆಗಾಗಿ ಪ್ರಮಾಣಪತ್ರಗಳು ಹಾಗೂ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. ಇದಾದ ನಂತರ ಕಾರ್ಯಾಗಾರದ ಕುರಿತು ಹಿಮ್ಮಾಹಿತಿಯನ್ನು ಪಡೆಯುವ ಒಂದು ಚಿಕ್ಕ ಚಟುವಟಿಕೆ ನಡೆಯಿತು.

ಅಭ್ಯರ್ಥಿಗಳ ಜೊತೆಗೆ, ಸಮಾರೋಪ ಸಮಾರಂಭದಲ್ಲಿ ಫ್ಯಾಕಲ್ಟಿ ಆಫ್ ಅಗ್ರಿಕಲ್ಚರ್‌ ನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕ ಸಿಬ್ಬಂದಿಗಳು ಭಾಗವಹಿಸಿದ್ಧರು. ಉದ್ಘಾಟನಾ ಸಮಾರಂಭದ ನಡವಳಿಗಳನ್ನು ರಕಿಂ ಫರ್ದೋಸಸ್ ಮಂಡಿಸಿದರು. ಡಾ.ಖಲೀದ್ ಹುಸೇನ್ ಅವರಿಂದ ವಂದನಾರ್ಪಣೆಯೊಂದಿಗೆ ಸಮಾರೋಪ ಸಮಾರಂಭ ಮುಕ್ತಾಯಗೊಂಡಿತು.

Key words: Novel- Bio-Formulations -workshop – Faculty – Agriculture- Kashmir