ಬೆಂಗಳೂರು, ಸೆಪ್ಟೆಂಬರ್ ,6, 2022(www.justkannada.in): ಬೆಂಗಳೂರು ನಗರದಲ್ಲಿ ಆಗುತ್ತಿರುವ ಪ್ರಮಾಣದ ಮಳೆಯಾದರೆ ವಿಶ್ವದ ಯಾವುದೇ ನಗರಾವದರೂ ಸಹ ಇದೇ ರೀತಿಯ ಬಿಕ್ಕಟ್ಟಿನ ಸನ್ನಿವೇಶವನ್ನು ಎದುರಿಸುತ್ತದೆ ಎಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರು ಮಂಗಳವಾರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರದ ಹಲವು ಭಾಗಗಳಲ್ಲಿ ಮೂಲಭೂತಸೌಕರ್ಯ ವೈಫಲ್ಯ ಹಾಗೂ ಬಡಾವಣೆಗಳು ಜಲಾವೃತ್ತಗೊಂಡು, ಅದರಲ್ಲೂ ವಿಶೇಷವಾಗಿ ಐಟಿ ಕೇಂದ್ರ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಕೆ. ಸುಧಾಕರ್ ಅವರು, “ಹೌದು ಬೆಂಗಳೂರು ಮಹಾನಗರ ಭಾರಿ ಮಳೆಯಿಂದ ತತ್ತರಿಸಿದೆ. ಚರಿತ್ರೆಯಲ್ಲೇ ಈ ಪ್ರಮಾಣ ಮಳೆ ಆಗಿರುವುದನ್ನು ಕೇಳಿಲ್ಲ,” ಎಂದಿದ್ದಾರೆ.
ಇನ್ಫೋಸಿಸ್ ನ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಅವರು ಮಳೆಯಿಂದಾಗಿ ನಾಶವಾಗುತ್ತಿರುವ ಮೂಲಸೌಕರ್ಯದ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್ ಅವರು, “ನ್ಯೂ ಯಾರ್ಕ್ ನಗರದಲ್ಲಿ ಈ ಪ್ರಮಾಣದ ಮಳೆಯಾದರೆ ಅಲ್ಲಿ ಸನ್ನಿವೇಶ ಹೇಗಿರುತ್ತೇ?” ಎಂದು ಮರುಪ್ರಶ್ನಿಸಿದ್ದಾರೆ.
“ದೂರುವುದು ಬಹಳ ಸುಲಭವಾದ ಕೆಲಸ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ತ್ರಾಸದಾಯಕ. ನೂರಾರು ಗ್ರಾಮಗಳನ್ನು ಬೃಹತ್ ಬೆಂಗಳೂರು ಮಹಾನಗರದ ವ್ಯಾಪ್ತಿಗೆ ತಂದು, ಯಾವುದೇ ಅಭಿವೃದ್ಧಿಯನ್ನು ಕೈಗೊಳ್ಳದೇ ಇರುವುದು ಯಾರ ತಪ್ಪು?” ಎಂದರು.
“ಈ ಬಿಕ್ಕಟ್ಟಿನ ಸಮಯದಲ್ಲಿ ನಾಗರಿಕರು ಸನ್ನಿವೇಶವನ್ನು ಎದುರಿಸಲು ಸರ್ಕಾರದ ಜೊತೆಗೆ ಕೈಜೋಡಿಸಬೇಕು. ಪರಸ್ಪರ ದೂರುತ್ತಾ ಕೂರುವ ಸಮಯವಲ್ಲ,” ಎಂದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬೆಂಗಳೂರಿನ ಸಚಿವರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಗಲಿರುಳು ಶ್ರಮಪಡುತ್ತಿದ್ದಾರೆ. ನಾಡಪ್ರಭು ಕೆಂಪೇಗೌಡ (ಬೆಂಗಳೂರು ನಿರ್ಮಾತೃ) ಕಟ್ಟಿದ ಬೆಂಗಳೂರು ನಗರ ಇಂದು ಅಭಿವೃದ್ಧಿಯ ವಿಷಯದಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಆ ಕಾಲದಲ್ಲಿ ನಿರ್ಮಿಸಲಾಗಿದ್ದಂತಹ ಅನೇಕ ಕೆರೆಗಳು ಈಗ ಕಣ್ಮರೆಯಾಗಿವೆ. ರಾಜಾಕಾಲುವೆಗಳ ಮೇಲೆ ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳನ್ನು ನಿರ್ಮಾಣ ಮಾಡಲಾಗಿವೆ. ಜನರು ತಗ್ಗು ಪ್ರದೇಶಗಳಲ್ಲಿಯೂ ಸಹ ಮನೆಗಳನ್ನು ಕಟ್ಟಿಕೊಂಡಿದ್ದಾರೆ, ಹಲವು ಬಡಾವಣೆಗಳು ನಿರ್ಮಾಣಗೊಂಡಿವೆ. “ನಮ್ಮ ಸರ್ಕಾರಕ್ಕೆ ಇದು ಹಿಂದಿನ ಹಲವು ಸರ್ಕಾರಗಳಿಂದ ಬಂದಿರುವ ಬಳುವಳಿಯಾಗಿದೆ. ಆದರೂ ನಾವು ಇದನ್ನು ಒಂದು ಸವಾಲಿನಂತೆ ಪರಿಗಣಿಸಿ ಸನ್ನಿವೇಶವನ್ನು ಎದುರಿಸಿ ಸಮರ್ಥವಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ,” ಎಂದು ಸಚಿವ ಸುಧಾಕರ್ ತಿಳಿಸಿದರು.
“ಇದು ಜಾಗತಿಕ ಮಟ್ಟದ ವಾತಾವರಣ ಬದಲಾವಣೆಗಳಿಂದಾಗಿ ನಮಗೆ ದೊರೆತಿರುವ ಉಡುಗೊರೆ… ಇಂತಹ ಸಮಯದಲ್ಲಿ ನಾವೆಲ್ಲರೂ ಸ್ವಚ್ಛ ಹಾಗೂ ಪರಿಸರ-ಸ್ನೇಹಿ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು,” ಎಂದು ತಿಳಿಸಿದ ಸಚಿವ ಸುಧಾಕರ್, ಪ್ರಕೃತಿ ಇದಕ್ಕಿಂತಲೂ ಕ್ರೂರವಾಗಬಹುದು ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮಂಗಳವಾರದಂದು ಮಳೆಯಿಂದ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರೆ ಸ್ಥಳಗಳಲ್ಲಿಯೂ ಉದ್ಘವಿಸಿರುವ ಸಮಸ್ಯೆಯನ್ನು ನಿರ್ವಹಿಸುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ದೂಷಿಸಿ ಬೆಂಗಳುರು ನಗರದ ಸ್ವಾತಂತ್ರ್ಯ ಉದ್ಯಾನವನದನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಿದೆ.
ಎಡೆಬಿಡದ ಮಳೆ ಬೆಂಗಳೂರಿನ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ದೈನಂದಿನ ಜನಜೀವನಕ್ಕೆ ದೊಡ್ಡ ಪ್ರಮಾಣದಲ್ಲಿ ಪೆಟ್ಟು ನೀಡಿದೆ. ಮಳೆ ವಿಕೋಪದಿಂದಾಗಿ ಬಹುತೇಕ ಅರ್ಧದಷ್ಟು ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜಿನ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಿದೆ. ಅನೇಕ ಬಡಾವಣೆಗಳು ಜಲಾವೃತ್ತಗೊಂಡಿದ್ದು, ಜನರನ್ನು ಸ್ಥಳಾಂತರಗೊಳಿಸಲು ಬೋಟುಗಳನ್ನು ಬಳಸಲಾಗುತ್ತಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Bengaluru –Rain –Minister- Sudhakar