ಮೈಸೂರು,ಸೆಪ್ಟಂಬರ್,8,2022(www.justkannada.in): ಬದಲಾದ ವಾತಾವರಣ. ಜೀವನಶೈಲಿ ಹಾಗೂ ಆಹಾರ ಸೇವನೆಯಿಂದ ಇಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿವೆ ಎಂದು ಬೆಂಗಳೂರು ಜಯದೇವ ಹೃದಯ ರೋಗ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ವತಿಯಿಂದ ಟ್ರಾನ್ಸಲೇಷನ್ ರಿಸರ್ಚ್ ಕುರಿತು ದಕ್ಷಿಣ ಭಾರತದ ಮೊದಲ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಈ ಹಿಂದೆ ಎಷ್ಟೋ ಕಾಯಿಲೆಗಳಿಗೆ ಔಷಧ ಇರಲಿಲ್ಲ. ಆದರೆ, ಈಗ ಸಂಶೋಧನೆ ಹಾಗೂ ತಂತ್ರಜ್ಞಾನದ ಪರಿಣಾಮ ವಾಸಿಯಾದ ಕಾಯಿಲೆಗಳಿಗೂ ಗುಣಮುಖ ಆಗುವಂತಹ ನಾನಾ ಔಷಧಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬೇಸಿಕ್ ಸೈನ್ಸ್ ಇಲ್ಲದೆ ಕ್ಲಿನಿಕಲ್ ಸೈನ್ಸ್ ಯಶಸ್ವಿ ಆಗುವುದಿಲ್ಲ. ಇಂದು ಮಿಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ ಮತ್ತು ಸೂಪರ್ ಕಂಪ್ಯೂಟರ್ ನಿಂದ ಸಾಕಷ್ಟು ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ನಾನಾ ಕಾಯಿಲೆಗೆ ಬೇರೆ ಬೇರೆ ವೈರಸ್ ಬರುತ್ತಿವೆ. ಕೋವಿಡ್ ಮನುಷ್ಯ ಮಾಡಿಕೊಂಡ ಸ್ವಯಂಕೃತ ತಪ್ಪು. ಮೊದಲೆಲ್ಲಾ ಒಂದು ಲಸಿಕೆ ಕಂಡು ಹಿಡಿಯಲು ಸಾಕಷ್ಟು ವರ್ಷ ಬೇಕಾಗುತ್ತಿತ್ತು. ಆದರೆ, ಇದೀಗ ಕೋವಿಡ್ ಲಸಿಕೆಯನ್ನು 6 ತಿಂಗಳಲ್ಲಿ ಕಂಡು ಹಿಡಿಯಲಾಯಿತು. ಎಬೋಲಾ ಲಸಿಕೆಗೆ 6 ವರ್ಷ ಬೇಕಾಯಿತು. ಜೆನೆಟಿಕ್ಸ್ ಲಸಿಕೆ ಕಂಡು ಹಿಡಿಯಲು ಪ್ರಮುಖ ಪಾತ್ರ ವಹಿಸಿತು ಎಂದರು.
ಮಕ್ಕಳ ಮೇಲೆ ಒತ್ತಡ:
ಇಂದು ಜಗತ್ತು ಓಡುತ್ತಿದೆ. ನಮ್ಮ ಜೀವನ ಶೈಲಿ ಬದಲಾಗಿದೆ. ತಿನ್ನುವ ಆಹಾರ ಕೂಡ. ಮಗು ತಾಯಿ ಗರ್ಭದಿಂದ ಹೊರ ಬರುವಾಗಲೇ ಕಾಯಿಲೆಗೆ ತುತ್ತಾಗುತ್ತಿದೆ. ತಡವಾಗಿ ಮದುವೆಯಾಗುವುದು ಇದಕ್ಕೆ ಪ್ರಮುಖ ಕಾರಣ. ಅಲ್ಲದೆ ಪೋಷಕರು ಕೂಡ ಮಕ್ಕಳಿಗೆ ಒತ್ತಡ ಹೇರುತ್ತಿದ್ದಾರೆ ಎಂದರು. ಮಕ್ಕಳಿಗೆ. ಕಡಿಮೆ ವಯಸ್ಸಿಗೆ ಯುವ ಸಮೂಹ ಮೃತಪಡುತ್ತಿದ್ದಾರೆ.
ಸಣ್ಣ ವಯಸ್ಸಿಗೆ ಹೃದಯಾಘಾತ:
ಇಂದು ಹೃದಯಸಂಬಂಧಿಗೆ ಕಾಯಿಲೆಗೆ ಭಾರತದಲ್ಲಿ ಶೇ.50 ರಷ್ಟು ಜನ ಮೃತಪಡುತ್ತಿದ್ದಾರೆ. ಉಳಿದಂತೆ
ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್, ಸ್ಟ್ರೋಕ್ ಕೂಡ ಮಾನವನನ್ನು ಕಾಡುತ್ತಿದೆ. ಬೇರೆ ದೇಶಕ್ಕೆ ಹೋಲಿಸಿದರೆ 15 ವರ್ಷ ಮುಂಚಿತವಾಗಿಯೇ ಹೃದಯ ಸಂಬಂಧಿ ಕಾಯಿಲೆ ಭಾರತೀಯರಲ್ಲಿ ಕಾಡುತ್ತಿದೆ.
45 ವರ್ಷ ಕಡಿಮೆ ಇರುವ ಶೇ.8ರಷ್ಟು ಮಹಿಳೆಯರಿಗೆ ಹೃದಯಾಘಾತ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಫ್ಯಾಮಿಲಿ ಹಿಸ್ಟರಿ ಇದ್ದರೆ ಎಚ್ಚರ:
ಸ್ಮೋಕಿಂಗ್, ಅಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಪ್ರಮುಖ ಕಾರಣ. ನಮ್ಮ ಸುತ್ತಮುತ್ತಲಿನ ವಾತಾವರಣ ಹಾಗೂ ಜೀವನಶೈಲಿ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಭಾರತದಲ್ಲಿ ವಾಯು ಮಾಲಿನ್ಯದಿಂದ 20 ಲಕ್ಷ ಜನ ನಾನಾ ಕಾಯಿಲೆಗೆ ತುತ್ತಾಗಿ ಮೃತ ಪಟ್ಟಿದ್ದಾರೆ. 45 ವರ್ಷದಿಂದ 60 ವರ್ಷದವರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ.
ಹೃದಯ ಸಂಬಂಧಿ ಕಾಯಿಲೆ ಫ್ಯಾಮಿಲಿ ಹಿಸ್ಟರಿ ಇದ್ದರೆ ಎಚ್ಚರಿಕೆ ಇರಬೇಕು. ಆಗ್ಗಿದ್ದಾಗೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸರಕಾರ ಅನುದಾನ ನೀಡಲಿ:
ವಿಜ್ಞಾನ ಕ್ಷೇತ್ರದಲ್ಲಿ ನಿಯಮಿತವಾಗಿ ಸಂಶೋಧನೆ ಹಾಗೂ ಪ್ರಯೋಗಗಳು ನಡೆಯಬೇಕು. ಸಂಶೋಧನೆಗೆ ನಿಗದಿಪಡಿಸಿದ ಅನುದಾನ ಸರಕಾರದಿಂದ ಸಿಗುತ್ತಿಲ್ಲ. ಸರಕಾರ ಹೆಚ್ಚಿನ ನೆರವು ನೀಡಿದರೆ ಹಲವು ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು. ಇದಕ್ಕಾಗಿ ಕಾರ್ಪೋರೆಟ್ ಹಾಗೂ ಇಂಡಸ್ಟ್ರಿ ಫಂಡ್ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಗುಣಮಟ್ಟದ ಜೀವನ ಸುಧಾರಿಸಬಹುದು ಎಂದು ಆಶಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಮಾತನಾಡಿದರು. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ನ ಡಾ.ಹರಿ. ಎಸ್. ಶರ್ಮ, ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎಸ್.ಮಾಲಿನಿ ಸೇರಿದಂತೆ ಇತರರು ಇದ್ದರು.
Key words: Cardiovascular- disease- doubles – lifestyle -changes – Dr. C.N. Manjunath