ಬೆಂಗಳೂರು, ಸೆಪ್ಟೆಂಬರ್ 12, 2022(www.justkannada.in): ಎಂದಿನಂತೆ ಮಧ್ಯಾಹ್ನದ ಬಿಸಿಯೂಟ ಈ ಶೈಕ್ಷಣಿಕ ವರ್ಷದಲ್ಲಿಯೂ ಸಹ ಮತ್ತೊಮ್ಮೆ ಮಕ್ಕಳನ್ನು ಶಾಲೆಗಳಿಗೆ ಮರಳಿ ಕರೆತರುತ್ತಿದ್ದು, ಆ ಮೂಲಕ ಪೌಷ್ಠಿಕತೆಯ ಸ್ಥಿರ ಮೂಲವಾಗಿರುವುದನ್ನು ಮುಂದುವರೆಸಿದೆ. ಆದರೆ, ಬಿಸಿಯೂಟ ತಯಾರಿಸಿ ರಾಜ್ಯಾದ್ಯಂತ ತಲುಪಿಸಲು ನೇಮಕಗೊಂಡಿರುವ ಬಾಣಸಿಗರು ಮತ್ತು ಸಹಾಯಕರು ಈ ವರ್ಷದ ಏಪ್ರಿಲ್ ತಿಂಗಳಿಂದಲೂ ವೇತನ ದೊರೆಯದೆ ತೊಂದರೆಯಲ್ಲಿ ಸಿಲುಕಿದ್ದಾರೆ.
ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಬೇಕಾಗಿರುವ ತರಕಾರಿಗಳನ್ನು ಖರೀದಿಸಲು ಅನೇಕ ಶಾಲೆಗಳಿಗೆ ಇನ್ನೂ ಹಣವನ್ನೇ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ವೇತನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ರಾಜ್ಯ ಸರ್ಕಾರ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಗೆ ಹೊರಳುತ್ತಿದೆ. ಹಾಗಾಗಿ, ಈ ಆತುರದ ಹೊರಳುವಿಕೆ, ಸೂಕ್ತ ಕಾರ್ಯವಿಧಾನವಿಲ್ಲದ ಕಾರಣದಿಂದಾಗಿ ಬಿಸಿಯೂಟ ತಯಾರಿಕರು ಹಾಗೂ ಸಹಾಯಕರ ಪರಿಸ್ಥಿತಿ ಅತಂತ್ರವಾದಂತಾಗಿದೆ.
ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ ನೀಡುತ್ತಿರುವ ವೇತನ ರೂ.೨,೦೦೦ ದಿಂದ ರೂ.೩,೫೦೦ರ ನಡುವೆ ಇದೆ. ವೇತನ ಬಿಡುಗಡೆಯಲ್ಲಿ ಆಗಿರುವ ವಿಳಂಬದಿಂದಾಗಿ, ಇಷ್ಟು ಕಡಿಮೆ ವೇತನದಲ್ಲಿ ಕೆಲಸ ನಿರ್ವಹಿಸುತ್ತಿರುವಂತಹ ಈ ಕಾರ್ಮಿಕರ ಕಷ್ಟ ದ್ವಿಗುಣಗೊಂಡಿದೆ. ರಾಜ್ಯ ಸರ್ಕಾರ ಬಿಸಿಯೂಟ ತಯಾರಕರು ಮತ್ತು ಸಹಾಯಕರ ವೇತನವನ್ನು ಈ ವರ್ಷ ರೂ.೧,೦೦೦ದಷ್ಟು ಏರಿಸಿತ್ತು. ಆದರೆ ಮೂಲ ವೇತನವನ್ನೂ ಸಹ ಪಾವತಿಸಿಲ್ಲ ಎನ್ನುತ್ತಾರೆ, ವೇತನ ಪಾವತಿ ವಿಳಂಬದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನಾಯಕಿ ಎಸ್. ವರಲಕ್ಷ್ಮಿ.
“ಶಾಲೆಗಳು ಸಾಮಾನ್ಯವಾಗಿ ಇಂತಹ ಕೆಲಸಗಳಿಗೆ ವಿಧವೆಯರು, ಒಬ್ಬರೇ ಪೋಷಕರಾಗಿರುವ ತಾಯಂದಿರು ಹಾಗೂ ವಿಶೇಷಚೇತನರನ್ನು ಆಯ್ಕೆ ಮಾಡುತ್ತದೆ. ಆ ಮೂಲಕ ಅಂತಹವರಿಗೆ ಒಂದು ಸ್ಥಿರ ಆದಾಯ ಬರುವಂತೆ ಅವಕಾಶ ಮಾಡಿಕೊಡುವುದು ಅವರ ಉದ್ದೇಶ. ಆದರೆ ಇಂತಹ ದುರ್ಬಲ ವರ್ಗದ ಜನರಿಗೆ ವೇತನ ಪಾವತಿ ವಿಳಂಬವಾದರೆ ಅವರ ಜೀವನವೇ ದುಸ್ಥರವಾಗುತ್ತದೆ,” ಎನ್ನುತ್ತಾರೆ ಬಾಗಲಕೋಟೆ ಜಿಲ್ಲೆಯ ಇಲಕಲ್ ನಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಕಿಯಾಗಿರುವ ಪ್ರಸಾದಮ್ಮ. ಇವರಿಗೆ ಮನೆಯ ಬಾಡಿಗೆ ಪಾವತಿಸುವುದು ಹಾಗೂ ಇಬ್ಬರು ಮಕ್ಕಳನ್ನು ಪೋಷಿಸುವುದಕ್ಕೆ ಕಷ್ಟವಾಗಿದೆ.
ರಾಜ್ಯದಲ್ಲಿ ೧.೨ ಲಕ್ಷ ಮಧ್ಯಾಹ್ನದ ಬಿಸಿಯೂಟ ತಯಾರಕರಿದ್ದು, ಎಲ್ಲರದ್ದೂ ಇಂಥದ್ದೇ ಪರಿಸ್ಥಿತಿಯಾಗಿದೆ. ಕಳೆದ ವರ್ಷ ಸತತ ಎರಡು ತಿಂಗಳವರೆಗೆ ಗೌರವಧನ ಪಾವತಿಯಲ್ಲಿ ವಿಳಂಬವಾಗಿತ್ತು. ಆಗ ಇವರ ಓರ್ವ ಸಹೋದ್ಯೋಗಿಯನ್ನು ಅವರ ಮಕ್ಕಳ ಜೊತೆಗೆ ಮನೆಯಿಂದ ಹೊರಗೆ ಹಾಕಲಾಯಿತಂತೆ. “ನಾವು ನೂರಾರು ಶಾಲಾ ಮಕ್ಕಳ ಹೊಟ್ಟೆ ತುಂಬಿಸುತ್ತೇವೆ, ಆದರೆ ನಮ್ಮ ಮತ್ತು ನಮ್ಮ ಮಕ್ಕಳ ಹೊಟ್ಟೆ ತುಂಬಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ,” ಎಂದು ಪ್ರಸಾದಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳ ಮಧ್ಯ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳು ನಡೆದವು. ಆಗ ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಯ ಓರ್ವ ಮಧ್ಯಾಹ್ನದ ಬಿಸಿಯೂಟ ತಯಾರಿಕ ರಾಧಮ್ಮ ಅವರು, ಸರ್ಕಾರಕ್ಕೆ ಈ ಯೋಜನೆಯನ್ನು ಮುಂದುವರೆಸುಲು ಅಷ್ಟು ಕಾಳಜಿಯಿಲ್ಲ ಎನ್ನುತ್ತಾರೆ. “ತರಕಾರಿ ಆಯವ್ಯಯವನ್ನು ಸಾಮಾನ್ಯವಾಗಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಅಡುಗೆ ತಯಾರಕರ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ಕಳೆದ ಮೂರು, ಮೂರುವರೆ ತಿಂಗಳಿಂದ ಅದೂ ಸಹ ಬಂದಿಲ್ಲ. ಇದರಿಂದಾಗಿ ಶಿಕ್ಷಕರು ಹಾಗೂ ಆಡಳಿತ ವರ್ಗದವರು ತಮ್ಮ ಕೈಯಿಂದ ಹಣ ವ್ಯಯಿಸಬೇಕಾದ ಪರಿಸ್ಥಿತಿ ಒದಗಿದೆ,” ಎಂದರು.
ಕೇಂದ್ರ ಸರ್ಕಾರದ ಸೂಚನೆಗಳ ಮೇರೆಗೆ ನೇರ ಲಾಭ ವರ್ಗಾವಣೆ ವ್ಯವಸ್ಥೆಗೆ ಹೊರಳಲು ಸಾರ್ವಜನಿಕ ಹಣಕಾಸು ವ್ಯವಸ್ಥೆಯ ಅಳವಡಿಕೆಯಲ್ಲಿ ಆದಂತಹ ವಿಳಂಬವೇ ವೇತನ ಬಿಡುಗಡೆಯಲ್ಲಿ ಆಗಿರುವ ವಿಳಂಬಕ್ಕೆ ಕಾರಣ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್. “ಈವರೆಗೆ ಇಲಾಖೆಯು ರಾಜ್ಯಾದ್ಯಂತ ಬಿಸಿಯೂಟ ತಯಾರಕರ ಬ್ಯಾಂಕ್ ವಿವರಗಳನ್ನು ಸಂಗ್ರಹಿಸುವುದು, ಅದನ್ನು ಜೋಡಿಸುವುದು, ಖಜಾನೆ ||ಕ್ಕೆ ಜೋಡಿಸುವುದು (ಕರ್ನಾಟಕ ಸರ್ಕಾರದ ಸಮಗ್ರ ಹಣಕಾಸು ನಿರ್ವಹಣಾ ತಂತ್ರಾಂಶ), ಇಂತಹ ಪ್ರಕ್ರಿಯೆಗಳ ಮ್ಯಾಪ್ಪಿಂಗ್ ಕೆಲಸಗಳನ್ನು ಮಾಡಲಾಗಿದೆ,” ಎಂದರು. ಹಿನ್ನೆಲೆ ಕೆಲಸಗಳು ಪೂರ್ಣಗೊಂಡಿದೆ. “ವೇತನವನ್ನು ಪರಿವರ್ತಿತ ವೆಚ್ಚ ಭತ್ಯೆಗಳ ಜೊತೆಗೆ ಇನ್ನು ೧೦ ದಿನಗಳ ಒಳಗೆ ಬಿಡುಗಡೆಗೊಳಿಸಲಾಗುವುದು,” ಎಂದು ತಿಳಿಸಿದರು.
“ಈ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವವರೆಗೂ ಅವರು ಹಳೆಯ ಪದ್ಧತಿಯನ್ನೇ ಅನುಸರಿಸಬಹುದಾಗಿತ್ತು. ಆದರೆ ಕಾರ್ಮಿಕರಿಗೆ ಯಾವ ರೀತಿ ತೊಂದರೆ ಆಗಬಹುದು ಎಂದು ಅವರಿಗೆ ಕಲ್ಪನೆಯೇ ಇಲ್ಲ,” ಎಂದು ರಾಧಮ್ಮ ತಿಳಿಸಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: school-bisiyuta-laborers- struggling – own- families.