ಮೈಸೂರು, ಸೆಪ್ಟೆಂಬರ್ 14, 2022(www.justkannada.in): ಮೈಸೂರಿನಲ್ಲಿ ನೀರಿನ ಬಿಲ್ ಅನ್ನು ಆನ್‌ಲೈನ್ ಮೂಲಕ ಪಾವತಿಸುವ ಸೌಲಭ್ಯವನ್ನು ಕಳೆದ ನಾಲ್ಕು ತಿಂಗಳುಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಆದರೆ ಆ ಸೌಲಭ್ಯ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ.
ಇದರಿಂದಾಗಿ ನಗರದ ಅನೇಕ ನಿವಾಸಿಗಳು ಕಳೆದ ನಾಲ್ಕು ತಿಂಗಳಿಂದ ನೀರಿನ ಬಿಲ್ ಪಾವತಿಸುವುದು ಸಾಧ್ಯವಾಗಿರಲಿಲ್ಲ. ಆದರೆ ವಾಣಿ ವಿಲಾಸ ಜಲ ಮಂಡಳಿ, ಅಧಿಕಾರಿಗಳು ತಿಳಿಸಿರುವ ಪ್ರಕಾರ ಆನ್ ಲೈನ್ ಹಣ ಪಾವತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಎದುರಾಗಿದ್ದ ಎಲ್ಲಾ ತಾಂತ್ರಿಕ ದೋಷಗಳನ್ನು ಬಹುತೇಕ ಸರಿಪಡಿಸಲಾಗಿದೆ.
ಈ ಸಂಬಂಧ ಮಾತನಾಡಿದ ವಾಣಿ ವಿಲಾಸ ಜಲ ಮಂಡಳಿಯ ಅಧಿಕಾರಿಯೊಬ್ಬರು, ನೀರಿನ ಬಿಲ್ ಪಾವತಿಸುವ ಆನ್ ಲೈನ್ ವ್ಯವಸ್ಥೆಯನ್ನು ಮೈಸೂರಿನಲ್ಲಿ ಜೂನ್ ೨೦೧೯ರಲ್ಲಿ ಪ್ರಾರಂಭಿಸಲಾಗಿತ್ತು. ಖಾಸಗಿ ಮಾಹಿತಿ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವ ಕಂಪನಿ ಬಿಸಿಐಟಿಎಸ್ ಜೊತೆಗೆ ಈ ತಂತ್ರಾಂಶ ನಿರ್ವಹಣೆಗೆ ಸಂಬಂಧಪಟ್ಟಂತೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದ ಈ ವರ್ಷ ಮೇ ತಿಂಗಳಲ್ಲಿ ಅಂತ್ಯಗೊಂಡಿತು. ಆಗ ಈ ತಂತ್ರಾಂಶವನ್ನು ಸ್ಥಗಿತಗೊಳಿಸಲಾಯಿತು. ನಂತರ ಪ್ರಾಧಿಕಾರವು ತಂತ್ರಾಂಶದಿಂದ ಬರುವ ಆದಾಯ ನಿರ್ವಹಣೆಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಅನ್ನು ಕೋರಿತು. ಕಿಯೋನಿಕ್ಸ್ ಸಿದ್ಧಪಡಿಸಿದ ತಂತ್ರಾಂಶ ಜುಲೈ ತಿಂಗಳಲ್ಲಿ ಸಿದ್ಧವಾಗಿದೆ. ಈ ತಂತ್ರಾಂಶವನ್ನು ಎಸ್ ಬಿಐ ಜೊತೆಗೆ ಸಂಯೋಜಿಸಬೇಕಿದೆ. ವಿವಿಡಬ್ಲ್ಯುಡಬ್ಲ್ಯು ಮೈಸೂರು ನಗರದಾದ್ಯಂತ ಒಟ್ಟು ೧೬ ನಗದು ಕೌಂಟರ್ ಗಳನ್ನು ಹೊಂದಿದೆ. ನಗರದ ಖಾಸಗಿ ಬ್ಯಾಂಕ್‌ವೊಂದು, ನೀರಿನ ಬಿಲ್ ಪಾವತಿ ನಿರ್ವಹಿಸುವುದಕ್ಕೆ ಸಂಬಂಧಪಟ್ಟಂತೆ ಸೇವೆಗಳನ್ನು ಒದಗಿಸಲು ಮುಂದಾಗಿದ್ದು, ಒಂದು ವೇಳೆ ಈ ಜವಾಬ್ದಾರಿಯನ್ನು ಅವರಿಗೆ ವಹಿಸಿದರೆ ಇದಕ್ಕಾಗಿ ವೇತನಸಹಿತ ಸಿಬ್ಬಂದಿಗಳ ಸೇವೆಗಳನ್ನು ಒದಗಿಸುವುದಾಗಿ ತಿಳಿಸಿದೆಯಂತೆ.
“ಈ ೧೬ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನವನ್ನು ನಮ್ಮ ಸಂಪನ್ಮೂಲಗಳಿಂದ ನೀಡುತ್ತಿದ್ದೆವು. ಆದರೆ ಈಗ ನಾವು ಒಂದು ವೇಳೆ ಆ ಖಾಸಗಿ ಬ್ಯಾಂಕ್ ನೊಂದಿಗೆ ಸಂಯೋಜನೆ ಮಾಡಿಕೊಂಡರೆ ನಮಗೆ ಆ ಹಣ ಉಳಿತಾಯವಾಗುತ್ತದೆ. ಹಾಗಾಗಿ, ಈ ಹೊಸದಾಗಿ ಅಭಿವೃದ್ಧಿಪಡಿಸಲಾದ ತಂತ್ರಾಂಶವನ್ನು ಎಸ್ ಬಿಐ ಬದಲಿಗೆ ಖಾಸಗಿ ಬ್ಯಾಂಕ್‌ನೊಂದಿಗೆ ಸಂಯೋಜಿಸಲು ನಿರ್ಧರಿಸಲಾಗಿದ್ದು, ಈ ಪ್ರಕ್ರಿಯೆ ಈಗ ಬಹುಪಾಲು ಪೂರ್ಣವಾಗಿದೆ,” ಎಂದು ಅಧಿಕಾರಿ ತಿಳಿಸಿದರು.
ಡಿಜಿಟಲ್ ವ್ಯವಸ್ಥೆ ಮೂಲಕ ವಾಣಿ ವಿಲಾಸ ಜಲ ಮಂಡಳಿ ಪ್ರತಿ ತಿಂಗಳು ರೂ.೧ ಕೋಟಿಯಿಂದ ರೂ.೧.೧ ಕೋಟಿ ಹಣ ಪಾವತಿಯಾಗುತ್ತದೆ. ಆದರೆ ಸುಮಾರು ನಾಲ್ಕು ತಿಂಗಳುಗಳಿಂದ ಈ ವ್ಯವಸ್ಥೆ ಸ್ಥಗಿತಗೊಂಡಿರುವ ಕಾರಣದಿಂದಾಗಿ ದೊಡ್ಡ ಹಿನ್ನೆಡೆಯಾಗಿದೆ ಎನ್ನುವುದು ಅಧಿಕಾರಿಯೊಬ್ಬರ ಅಭಿಪ್ರಾಯ.
ಈ ನಡುವೆ ನಾಲ್ಕು ತಿಂಗಳುಗಳಿಂದ ನೀರಿನ ಬಿಲ್ ಪಾವತಿಸದಿರುವಂತಹ ನಾಗರಿಕರು ವಿಳಂಬ ಪಾವತಿಗಾಗಿ ದಂಡವನ್ನು ಪಾವತಿಸಬೇಕಾಗುವುದು ಎಂದು ದೂರಿದ್ದಾರೆ.
ವಾಣಿ ವಿಲಾಸ ಜಲ ಮಂಡಳಿ ಅಧಿಕಾರಿಗಳು ಹೇಳುವಂತೆ ವಿಳಂಬ ಪಾವತಿಗೆ ದಂಡ ವಿಧಿಸುವಿಕೆಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಏಕೆಂದರೆ ಗ್ರಾಹಕರಿಗೆ ನಗರದಾದ್ಯಂತ ಇರುವ 16 ಕೇಂದ್ರಗಳಲ್ಲಿ ಎಲ್ಲಾದರೂ ಹಣ ಪಾವತಿಸುವ ಅನಕೂಲವಿತ್ತು ಎಂದಿದ್ದಾರೆ.
ಸುದ್ದಿ ಮೂಲ: ದಿ ಹಿಂದೂ
Key words: Online –water- bill- payment- facility – soon.