ಬೆಂಗಳೂರು:ಆ-15:(www.justkannada.in) ಅಳಿವಿನಂಚಿನಲ್ಲಿರುವ ಅಪರೂಪದ ಚಿಪ್ಪು ಹಂದಿ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬನ್ನೇರುಘಟ್ಟ ನಿವಾಸಿ ಮುನಿವೆಂಕಟಪ್ಪ (45) ಹಾಗೂ ಗೌತಮ್(31) ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಜೀವಂತ ಚಿಪ್ಪು ಹಂದಿ ಹಾಗೂ ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಚಿಪ್ಪು ಹಂದಿಯನ್ನು ಬನ್ನೇರುಘಟ್ಟ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿಧಿದ್ದಾಧಿರೆ.
ಮಂಗಳವಾರ ಮಹಾಲಕ್ಷ್ಮಿ ಲೇಔಟ್ನ ಕಮಲಮ್ಮನಗುಂಡಿ ಆಟದ ಮೈದಾನದ ಬಳಿ ಕೆಲ ವ್ಯಕ್ತಿಗಳು ಪ್ರಾಣಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಬ್ಬರು ರಿಯಲ್ ಎಸ್ಟೇಟ್ ವ್ಯವಹಾರದ ಜತೆಗೆ, ಕೈಮಗ್ಗದ ಕೆಲಸವನ್ನೂ ಮಾಡುತ್ತಿದ್ದಾರೆ. ಚಿಂತಾಮಣಿ ಮೂಲದ ವ್ಯಕ್ತಿಯೊಬ್ಬ ತಮಗೆ ಈ ಚಿಪ್ಪು ಹಂದಿಯನ್ನು ತಂದು ಕೊಟ್ಟಿದ್ದಾನೆ ಎಂದು ಬಂಧಿತರು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಳಿವಿನ ಅಂಚಿನಲ್ಲಿರುವ ಈ ಚಿಪ್ಪು ಹಂದಿಯನ್ನು ಎಲ್ಲಿಂದ ಕಳ್ಳಸಾಗಣೆ ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಪ್ಪು ಹಂದಿಯ ಚಿಪ್ಪು ಅತ್ಯಂತ ಬಲಿಷ್ಠವಾಗಿರುತ್ತವೆ. ಹೀಗಾಗಿ, ಅವುಗಳನ್ನು ಬುಲೆಟ್ ಪ್ರೂಫ್ ಜಾಕೆಟ್, ಬೂಟು ತಯಾರಿಸಲು, ಜಾಕೆಟ್ಗಳ ಮೇಲೆ ಅಲಂಕಾರ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಸಲಾಗುತ್ತದೆ.