ಸಿಬಿಎಸ್​ಇ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ

ನವದೆಹಲಿ:ಆ-16: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) 2020ರ 10 ಹಾಗೂ 12ನೇ ತರಗತಿ ಪ್ರಶ್ನೆಪತ್ರಿಕೆಗಳಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಪ್ರಶ್ನೆಗಳ ಸಂಖ್ಯೆಯನ್ನು ತಗ್ಗಿಸುವ ಮತ್ತು 1 ಹಾಗೂ 2 ಅಂಕದ ಪ್ರಶ್ನೆಗಳನ್ನು ಹೆಚ್ಚಿಸಲು ಸಿಬಿಎಸ್​ಇ ಚಿಂತಿಸಿದೆ. ಉದಾಹರಣೆಗೆ 3 ಗಂಟೆಗಳ ಅವಧಿಯ ಗಣಿತ ಪರೀಕ್ಷೆಯಲ್ಲಿ 12ನೇ ತರಗತಿ ವಿದ್ಯಾರ್ಥಿಗಳು ಇನ್ನು ಮುಂದೆ 19 ವಿವರಣಾತ್ಮಕ ಪ್ರಶ್ನೆಗಳ ಬದಲಿಗೆ 12 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗುತ್ತದೆ.

ಜತೆಗೆ ಶೇ. 33ರಷ್ಟು ಆಯ್ಕೆ ಪ್ರಶ್ನೆಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು 13 ರಿಂದ 14 ಪ್ರಶ್ನೆಗಳಲ್ಲಿ ಕನಿಷ್ಠ 10ಕ್ಕೆ ಉತ್ತರಿಸಬೇಕಾಗುತ್ತದೆ. ವಸ್ತುನಿಷ್ಠ ಪ್ರಶ್ನೆಗಳನ್ನು (ಒಂದು ಅಂಕದ) ಸಹ ಶೇ. 10 ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಸದ್ಯ ಕೆಲ ವಿಷಯಗಳಲ್ಲಿ ವಸ್ತುನಿಷ್ಠ ಪ್ರಶ್ನೆಗಳ ಪ್ರಮಾಣ ಶೇ.16.25 ರಿಂದ ಗರಿಷ್ಠ 95ರವರೆಗೂ ಇದೆ. 10ನೇ ತರಗತಿಯ ಇಂಗ್ಲಿಷ್ ಹಾಗೂ 12ನೇ ತರಗತಿಯ ಹಿಂದಿ, ಇತಿಹಾಸ ಮತ್ತು ಜೀವಶಾಸ್ತ್ರ ವಿಷಯಗಳ ವಿವರಣಾತ್ಮಕ ಪ್ರಶ್ನೆಗಳನ್ನು ಹೆಚ್ಚಳ ಮಾಡಲಾಗಿದೆ ಎಂದು ಸಿಬಿಎಸ್​ಇ ಮೂಲಗಳು ತಿಳಿಸಿವೆ.

12ನೇ ತರಗತಿಯ ಸಂಸ್ಕೃತ ವಿಷಯದ ವಿವರಣಾತ್ಮಕ ಪ್ರಶ್ನೆಗಳ ಸಂಖ್ಯೆಯನ್ನು 53 ರಿಂದ 37ಕ್ಕೆ ಇಳಿಸಲಾಗಿದ್ದು, ರಾಜ್ಯಶಾಸ್ತ್ರದಲ್ಲಿನ ಪ್ರಶ್ನೆಗಳನ್ನು 25 ರಿಂದ 14ಕ್ಕೆ ತಗ್ಗಿಸಲಾಗಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಗಳನ್ನೂ 2020ರ ಪರೀಕ್ಷೆಗೆ 17ಕ್ಕೆ ಇಳಿಸಲಾಗಿದೆ. ‘ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ವೈಜ್ಞಾನಿಕವಾಗಿ ಪ್ರಶ್ನೆಪತ್ರಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಒಂದು ಅಂಕದ ಪ್ರಶ್ನೆಗಳು ಹೆಚ್ಚಾಗುವುದರಿಂದ ಮಕ್ಕಳು ಹೆಚ್ಚು ಆಳವಾಗಿ ಅಧ್ಯಯನ ಮಾಡುತ್ತಾರೆ’ ಎಂದು ಸಿಬಿಎಸ್​ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಹೇಳಿದ್ದಾರೆ.
ಕೃಪೆ: ವಿಜಯವಾಣಿ

ಸಿಬಿಎಸ್​ಇ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ
changes-in-the-cbs-e-questionnaire