ಬೆಂಗಳೂರು, ಅಕ್ಟೋಬರ್ ,7, 2022 (www.justkannada.in): ಆರ್‌ಎಸ್‌ಎಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ದೇಶದಲ್ಲಿ ಹೆಚ್ಚುತ್ತಿರುವ ಬಡತನ ಹಾಗೂ ನಿರುದ್ಯೋಗದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯ ‘ಅಚ್ಚೇ ದಿನ್’ (ಉತ್ತಮ ದಿನಗಳು) ನ ಆಶ್ವಾಸನೆಯನ್ನು ಲೇವಡಿ ಮಾಡಿದ್ದಾರೆ.
“ದೇಶದಲ್ಲಿ ಬಿಜೆಪಿಯ ಕಳೆದ 7 ವರ್ಷಗಳ ಆಡಳಿತಾವಧಿಯಲ್ಲಿ ಯಾರು ಪ್ರಗತಿ ಸಾಧಿಸಿದ್ದಾರೆ ಎಂದು ತಿಳಿಯಲು ಯಾವುದೇ ತಜ್ಞರ ಸಹಾಯ ಬೇಕಾಗಿಲ್ಲ ಅನಿಸುತ್ತದೆ. ಹೊಸಬಾಳೆ ಅವರು ಸ್ವತಃ ತಿಳಿಸಿರುವಂತೆ ದೇಶದಲ್ಲಿ 20 ಕೋಟಿ ಜನರು ಬಡತನ ರೇಖೆಗಿಂತ ಕೆಳಮಟ್ಟದಲ್ಲಿದ್ದಾರೆ ಹಾಗೂ ೪ ಕೋಟಿ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಹೀಗಿರುವಾಗ ಕಳೆದ ೭ ವರ್ಷಗಳಲ್ಲಿ ಶ್ರೀಮಂತರಾದವರು ಯಾರು?” ಎಂದು ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ದೇಶದಲ್ಲಿ ೨೩ ಕೋಟಿ ಜನರು ಒಂದು ದಿನಕ್ಕೆ ರೂ.೩೭೫ ಕ್ಕಿಂತ ಕಡಿಮೆ ಸಂಪಾದಿಸುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಕೈಗಾರಿಕೋದ್ಯಮಿಯೊಬ್ಬರು ಒಂದು ಗಂಟೆಗೆ ರೂ.೪೨ ಕೋಟಿ, ಮತ್ತು ಒಂದು ವಾರದಲ್ಲಿ ರೂ.೬,೦೦೦ ಕೋಟಿ ಸಂಪಾದಿಸುತ್ತಿದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ.
ಜೊತೆಗೆ ಜೆಡಿಎಸ್ ನಾಯಕ ಭಾರತದ ಒಟ್ಟು ಸಂಪತ್ತಿನ ಪೈಕಿ ಶೇ.೨೦ರಷ್ಟು ಸಂಪತ್ತು ಕೇವಲ ಒಬ್ಬ ವ್ಯಕ್ತಿಯ ಬಳಿ ಇರುವುದನ್ನು ಉಲ್ಲೇಖಿಸಿ ತೀವ್ರ ಕಾಳಜಿ ವ್ಯಕ್ತಪಡಿಸಿದ್ದಾರೆ. “ಒಂದು ಕಡೆ ಒಂದು ಹೊತ್ತಿನ ಕೂಳಿಗೂ ಪರದಾಡುತ್ತಿರುವಂತಹ ಪರಿಸ್ಥಿತಿಯಲ್ಲಿ ಇದು ರಾಷ್ಟ್ರೀಯ ಮಟ್ಟದಲ್ಲಿ ನಾಚಿಕೆ ಪಡಬೇಕಾಗಿರುವಂತಹ ಸಂಗತಿಯಲ್ಲವೇ?” ಎಂದು ಪ್ರಶ್ನಿಸಿದ್ದು, ಒಂದು ಕಡೆ ಅಪೌಷ್ಠಿಕತೆ ರಾರಾಜಿಸುತ್ತಿದ್ದರೆ, ಮತ್ತೊಂದು ಕಡೆ ಲಕ್ಷಾಂತರ ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ ಎಂದಿದ್ದಾರೆ.
ಬಿಜೆಪಿಯವರಿಗೆ ಎಚ್ಚೆತ್ತುಕೊಳ್ಳುವಂತೆ ಸೂಚಿಸುತ್ತಾ, ಕುಮಾರಸ್ವಾಮಿ ಅವರು ಏರುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ದೇಶದಲ್ಲಿ ಕೋಪ, ದ್ವೇಷದ ಮನೋಭಾವ ಹೆಚ್ಚಾಗುತ್ತದೆ, ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಸಿಲುಕುತ್ತಿರುವ ಇಂದಿನ ದೇಶದ ಪರಿಸ್ಥಿತಿ ಉತ್ತಮ ಭವಿಷ್ಯದ ಸೂಚನೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಎಂಎಲ್ ಸಿಗಳಿಗೂ ರೂ.50 ಕೊಟಿ ನೀಡಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಜೆಡಿಎಸ್ ಎಂಎಲ್ ಸಿಗಳಿಗೂ ಸಹ ತಲಾ ರೂ.50 ಕೋಟಿ ಅನುದಾನವನ್ನು ನೀಡುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿಗೆ ಒಂದು ನಿಯೋಗವನ್ನು ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂಎಲ್‌ಸಿಯಾಗಿರುವಂತಹ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಥಳೀಯ ಪ್ರದೇಶ ಅಭಿವೃದ್ಧಿ (ಎಲ್‌ಎಡಿ) ಯೋಜನೆಯಡಿ ರೂ.೫೦ ಕೋಟಿ ಅನುದಾನ ನೀಡಿರುವುದನ್ನು ಉಲ್ಲೇಖಿಸಿರುವ ಮಾಜಿ ಮುಖ್ಯಮಂತ್ರಿಗಳು, ತಮ್ಮ ಈ ಬೇಡಿಕೆ ಈ ಅಂಶವನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ. “ಸರ್ಕಾರ ಚನ್ನಪಟ್ಟಣದ ಎಂಎಲ್ ಸಿಗೆ ಅವರ ಕೋರಿಕೆಯ ಮೇರೆಗೆ ಸ್ಥಳೀಯ ಪ್ರದೇಶ ಅಭಿವೃದ್ಧಿಗಾಗಿ ರೂ.೫೦ ಕೋಟಿಯನ್ನು ಬಿಡುಗಡೆಗೊಳಿಸಿದೆ. ಅದೇ ರೀತಿ ಈ ಯೋಜನೆಯನ್ನು ನಮ್ಮ ಪಕ್ಷದ ಎಂಎಲ್ ಸಿಗಳಿಗೂ ಸಹ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: rich – last 7 years- HD Kumaraswamy- question