ಬೆಂಗಳೂರು, ನವೆಂಬರ್ ,1, 2022 (www.justkannada.in): ನಮ್ಮ ಮೆಟ್ರೊ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯೋತ್ಸವದ ಉಡುಗೊರೆ ನೀಡಿದೆ. ನವೆಂಬರ್ 1ರಿಂದ, ಅಂದರೆ ಇಂದಿನಿಂದ ನಮ್ಮ ಮೆಟ್ರೊ ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ನಮ್ಮ ಮೆಟ್ರೊ ಆ್ಯಪ್ ಅಥವಾ ವಾಟ್ಸ್ ಆ್ಯಪ್ ಮೂಲಕ ಒಂದು ಕಡೆಯ ಪ್ರಯಾಣದ ಟಿಕೆಟ್ ಗಳನ್ನು ನೇರವಾಗಿ ಖರೀದಿಸಬಹುದು. ಇನ್ನು ಮುಂದೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಗಳಿಗಾಗಿ ಕಾಯಬೇಕಾಗಿಲ್ಲ.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಒಂದು ಹೇಳಿಕೆಯಲ್ಲಿ, ನಮ್ಮ ಮೆಟ್ರೊ ಇಡೀ ವಿಶ್ವದಲ್ಲೇ ವಾಟ್ಸ್ ಆ್ಯಪ್ ಮೂಲಕ ಎಂಡ್-ಟು-ಎಂಡ್ ಕ್ಯೂ ಆರ್ ಟಿಕೆಟ್ ನೀಡುವ ವ್ಯವಸ್ಥೆಯನ್ನು ಹೊಂದಿರುವ ಮೊಟ್ಟ ಮೊದಲ ಸಂಸ್ಥೆಯಾಗಿರುವುದಾಗಿ ತಿಳಿಸಿದೆ.
ಎ) ನಮ್ಮ ಮೆಟ್ರೊ ಆ್ಯಪ್: ಪ್ರಯಾಣಿಕರು ಗೂಗಲ್ ಪ್ಲೇ ಇಂದ ಈ ಆ್ಯಪ್ ಅನ್ನು ಡೌನ್ಲೋಡಿ ಮಾಡಿಕೊಂಡು, ಟಿಕೆಟ್ ಗಳನ್ನು ಖರೀದಿಸಲು ಸ್ವತಃ ನೋಂದಾಯಿಸಿಕೊಳ್ಳಬೇಕು.
ಬಿ) ವಾಟ್ಸ್ಆ್ಯಪ್: ಬಿಎಂಆರ್ ಸಿಎಲ್ ನ ಅಧಿಕೃತ ವಾಟ್ಸ್ ಆ್ಯಪ್ ಚಾಟ್ ಬಾಟ್ ಸಂಖ್ಯೆ ೮೧೦ ೫೫೫ ೬೬ ೭೭ ಅನ್ನು ಸೇವ್ ಮಾಡಿಕೊಂಡು, ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸಲು ಅಥವಾ ಮೆಟ್ರೊ ಪ್ರಯಾಣದ ಪಾಸ್ ಗಳನ್ನು ರೀಚಾರ್ಜ್ ಮಾಡಿಕೊಳ್ಳಲು ಈ ಸಂಖ್ಯೆಗೆ ‘Hi’ ಎಂದು ಸಂದೇಶ ಕಳುಹಿಸಿದರೆ ಸಾಕು. ಈ ಪ್ರಯಾಣದ ವಿವರಗಳನ್ನು ಆಯ್ಕೆ ಮಾಡಿದ ನಂತರ, ಯುಪಿಐ ಪಿನ್ ಜೊತೆಗೆ, ವಹಿವಾಟನ್ನು ಪ್ರಮಾಣೀಕರಿಸಿ, ವಾಟ್ಸ್ ಆ್ಯಪ್ ಪಾವತಿ ಆಯ್ಕೆಯ ಮೂಲಕ ಹಣ ಪಾವತಿಸಬಹುದು. ಚಾಟ್ ಬಾಟ್ ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಲಭ್ಯವಿದೆ.
ಕ್ಯೂ ಆರ್ ಟಿಕೆಟ್ ಗಳ ಪ್ರಯಾಣಿಕರು ನಮ್ಮ ಮೆಟ್ರೊ ಆ್ಯಪ್ ಅಥವಾ ವಾಟ್ಸ್ ಆ್ಯಪ್ ಮೂಲಕ ಪ್ರವೇಶ ಹಾಗೂ ತಲುಪಬೇಕಾದ ಸ್ಥಳದ ವಿವರಗಳನ್ನು ಪ್ರಯಾಣದ ದಿನದಂದು ತುಂಬಿ ಕ್ಯೂ ಆರ್ ಟಿಕೆಟ್ ಅನ್ನು ಪಡೆಯಬಹುದು. ಕ್ಯೂಆರ್ ಟಿಕೆಟ್ ಗಳನ್ನು ಪ್ರವೇಶ/ ಹೊರಗೆ ಬರುವ ನಿಲ್ದಾಣಗಳಲ್ಲಿ ಸ್ವಯಂಚಾಲಿತ ದ್ವಾರಗಳ ಬಳಿ ಇಟ್ಟಿರುವ ಕ್ಯೂ ಆರ್ ರೀಡರ್ ಗಳನ್ನು ಬಳಸಿ ಸ್ಕ್ಯಾನ್ ಮಾಡಬೇಕು.
ಈ ಕ್ಯೂಆರ್ ಟಿಕೆಟ್ ಆ ದಿನದ ಸೇವೆಗಳು ಅಂತ್ಯಗೊಳ್ಳುವವರೆಗೂ ವಾಯಿದೆ ಹೊಂದಿರುತ್ತವೆ. ಟಿಕೆಟ್ ಅನ್ನು ರದ್ದುಪಡಿಸಬೇಕಾದರೆ ಪ್ರಯಾಣಿಕರು ಅದೇ ದಿನದಂದು ರದ್ದುಪಡಿಸಬೇಕು, ನಂತರ ರೀಫಂಡ್ ದೊರೆಯುತ್ತದೆ.
ಬಿಎಂಆರ್ ಸಿಎಲ್ ಕ್ಯೂಆರ್ ಟಿಕೆಟ್ ಗಳ ಟೋಕನ್ ದರದ ಮೇಲೆ ಶೇ.೫ ರಿಯಾಯಿತಿಯನ್ನೂ ಒದಗಿಸುತ್ತಿದೆ. ಒಂದು ಕಡೆಯ ಪ್ರಯಾಣದ ಕ್ಯೂ ಆರ್ ಟಿಕೆಟ್ ಗಳನ್ನು ಖರೀದಿಸುವ ಹಾಗೂ ಮೆಟ್ರೊ ಪ್ರಯಾಣದ ಪಾಸ್ ಗಳ ರೀಚಾರ್ಜ್ ಆಯ್ಕೆಯ ಜೊತೆಗೆ, ಬಿಎಂಆರ್ ಸಿಎಲ್ ನ ಈ ವಾಟ್ಸ್ ಆ್ಯಪ್ ಚಾಟ್ಬಾಟ್ ಜರ್ನಿ ಪ್ಲಾನ್ನರ್, ಗ್ರಾಹಕರ ಹಿಮ್ಮಾಹಿತಿ ಹಾಗೂ ವಾಟ್ಸ್ ಆ್ಯಪ್ ಪಾವತಿ ಆಯ್ಕೆಗಳನ್ನೂ ಒದಗಿಸುತ್ತದೆ. ಈ ಜರ್ನಿ ಪ್ಲಾನ್ನರ್ ಆಯ್ಕೆಯಡಿ ಪ್ರಯಾಣಿಕರು ತಮ್ಮ ಹತ್ತಿರದ ಮೆಟ್ರೊ ನಿಲ್ದಾಣವನ್ನು ಗುರುತಿಸಬಹುದು (ತಾವಿರುವ ಹಾಲಿ ಸ್ಥಳವನ್ನು ಆಧರಿಸಿ), ಜೊತೆಗೆ ವಿವಿಧ ನಿಲ್ದಾಣಗಳಿಂದ ರೈಲು ಹೊರಡುವ ಸಮಯದ ವಿವರಗಳು ಹಾಗೂ ಎರಡು ನಿಲ್ದಾಣಗಳ ನಡುವಿನ ಟಿಕೆಟ್ ದರ ವಿವರಗಳನ್ನೂ ಸಹ ಪಡೆದುಕೊಳ್ಳಬಹುದು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: QR Tickets – Namma Metro –today-Recharge-travel