ಬೆಂಗಳೂರು,ನವೆಂಬರ್,16,2022(www.justkannada.in): ಈಗ ಹೆಚ್ಚಿನ ದೇಶಗಳು ಜಾಗತೀಕರಣದ ಹಾದಿಯನ್ನು ಬಿಟ್ಟು ಹೆಚ್ಚುಹೆಚ್ಚು ಸ್ಥಳೀಯವಾಗುತ್ತಿವೆ. ಹೀಗಾಗಿ ಭಾರತವು ಕೃಷಿ ಮತ್ತು ವಿದ್ಯುತ್ ಉತ್ಪಾದನೆಯನ್ನು ಕನಿಷ್ಠಪಕ್ಷ ಎರಡು ಪಟ್ಟು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲದಿದ್ದರೆ, ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಲಾಭ ಕೈತಪ್ಪಿ ಹೋಗಲಿದೆ ಎಂದು ಖ್ಯಾತ ಉದ್ಯಮಿ ಡಾ.ಗೋಪಿಚಂದ್ ಕಾಟ್ರಗಡ್ಡ ಹೇಳಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಸಮಾವೇಶದ ಮೊದಲ ದಿನವಾದ ಬುಧವಾರ ಅವರು ‘ಮುಂಚೂಣಿಗೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಜೀವಶಾಸ್ತ್ರ ಮತ್ತು ಕೃತಕ ಬುದ್ಧಿಮತ್ತೆ ಎರಡೂ ಇಂದು ಜಗತ್ತನ್ನು ಆಳುತ್ತಿವೆ. ಹೀಗಾಗಿ, ದೊಡ್ಡದೊಡ್ಡ ಕಂಪನಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕಾಗಿದೆ. ಭಾರತವು ಸದ್ಯಕ್ಕೆ 400 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಇದನ್ನು 800 ಗಿಗಾವ್ಯಾಟ್ ಮಟ್ಟಕ್ಕೆ ಹೆಚ್ಚಿಸಬೇಕಾಗಿದೆ. ನಮ್ಮ ದೇಶದಲ್ಲಿ ಸೌರವಿದ್ಯುತ್ ಉತ್ಪಾದನೆಗೆ ಒಳ್ಳೆಯ ಅವಕಾಶವಿದ್ದು, ಶುದ್ಧ ಇಂಧನಗಳ ಪೂರೈಕೆಗೆ ಆದ್ಯತೆ ಕೊಡಬೇಕು. ಇಂಧನ ಕ್ಷೇತ್ರದಲ್ಲಿ 800 ಶತಕೋಟಿ ಡಾಲರ್ ಮೌಲ್ಯದ ಮಾರುಕಟ್ಟೆ ಅಭಿವೃದ್ಧಿಗೆ ನಿಚ್ಚಳ ಅವಕಾಶವಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ವಿನಿಯೋಗಿಸುತ್ತಿರುವ ಹಣ ಒಟ್ಟು ಜಿಡಿಪಿಯ ಶೇಕಡ 3.6ರಷ್ಟು ಮಾತ್ರವಿದೆ. ಅಮೆರಿಕದಲ್ಲಿ ಇದ್ದು ಶೇಕಡ 15ರಷ್ಟಿದೆ. ಆದ್ದರಿಂದ ನಮ್ಮಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ವಿನಿಯೋಗಿಸುತ್ತಿರುವ ಹಣವು ಶೇಕಡ 7ರಷ್ಟಾದರೂ ಆಗಬೇಕು ಎಂದು ಅವರು ಪ್ರತಿಪಾದಿಸಿದರು.
ಕಂಪನಿಗಳು ಉಳಿದ ಕಂಪನಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಕಾಣುತ್ತಿದೆ. ಆದರೆ, ಇದಕ್ಕಿಂತ ಮುಖ್ಯವಾಗಿ ತಂತ್ರಜ್ಞಾನದ ಅಭಿವೃದ್ಧಿಗೆ ಅವು ಗಮನ ಕೊಡಬೇಕು. ಇದಕ್ಕಾಗಿ ಸ್ಥಳೀಯವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಕಂಪನಿಗಳ ಜತೆ ಸಹಭಾಗಿತ್ವವನ್ನು ಹೊಂದಲು ಮುಕ್ತ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆದರೆ ಹೀಗಾಗುತ್ತಿಲ್ಲದೆ ಇರುವುದು ಒಳ್ಳೆಯ ಲಕ್ಷಣವಲ್ಲ ಎಂದು ಅವರು ಎಚ್ಚರಿಸಿದರು.
ಮಾರುಕಟ್ಟೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಡೀಪ್ ಲರ್ನಿಂಗ್ನ ಅರಿವು ಮುಖ್ಯವಾಗಿದೆ. ತಂತ್ರಜ್ಞರು ಯಾವ ಹಿನ್ನೆಲೆಯಿಂದ ಬಂದಿದ್ದರೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೀಪ್ ಟೆಕ್, ಜೀನ್ ಎಡಿಟಿಂಗ್ ಇತ್ಯಾದಿಗಳನ್ನು ಅರಿತುಕೊಳ್ಳಬೇಕು. ಕೃಷಿಯಲ್ಲಿ ಮುಂಬರುವ ದಿನಗಳಲ್ಲಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಲಿದ್ದು, ನಮ್ಮ ವ್ಯವಸಾಯ ಸಂಸ್ಕೃತಿಯ ಚಹರೆಗಳೇ ಆಮೂಲಾಗ್ರವಾಗಿ ಬದಲಾಗಲಿವೆ ಎಂದು ಕಾಟ್ರಗಡ್ಡ ನುಡಿದರು.
ಬಿಲ್ಡರ್.ಎಐ ಕಂಪನಿಯ ಸಿಎಫ್ಒ ಆಂಡ್ರೆಸ್ ಎಲಿಜಾಂಡೋ, ಡೆನ್ಮಾರ್ಕ್ನ ತಂತ್ರಜ್ಞಾನ ರಾಯಭಾರಿ ಆನ್ ಮೇರಿ ಲಾರ್ಸೆನ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವಾಲಯದ ಸೈಬರ್ ರಾಯಭಾರಿ ಡಾ.ಟೋಬಿಯಾಸ್ ಫೀಕಿನ್, ಶೆಲ್ ಕಂಪನಿಯ ಉಪಾಧ್ಯಕ್ಷ ಡ್ಯಾನ್ ಜೀವೊನ್ಸ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇಂಡಿಯಾ ಇಂಟರ್ನೆಟ್ ಫಂಡ್ ನ ಸ್ಥಾಪಕ ಪಾಲುದಾರ ಅನಿರುದ್ಧ್ ಸೂರಿ ಚರ್ಚೆಯನ್ನು ನಡೆಸಿಕೊಟ್ಟರು.
Key words: ‘Increase -agriculture –power- generation – inevitable-Businessman-Dr. Gopichand Katragadda