ರಾಮನಗರ ಜೂ.1,2019(www.justkannada.in): ರೈತರಿಗೆ ಕೃಷಿ ಇಲಾಖೆ ಸೌಲಭ್ಯ ಹಾಗೂ ಅಗತ್ಯ ಸಲಹೆಗಳ ಸಮಗ್ರ ಮಾಹಿತಿ ನೀಡಲು ಜೂನ್ 10ರಿಂದ 30ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಕೃಷಿ ಅಭಿಯಾನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್ ತಿಳಿಸಿದರು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿನೂತನ ಜನಪರ ಮಾಹಿತಿ – ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಮನೆಬಾಗಿಲಿಗೆ ಬೆಳೆ ವೈವಿಧ್ಯೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ, ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.
ಕೃಷಿ ವಸ್ತು ಪ್ರದರ್ಶನ, ಸ್ಥಬ್ದ ಚಿತ್ರ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಸಲಾಗುವುದು. ವಿಜ್ಞಾನಿಗಳು, ಮಾದರಿ ರೈತರು ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸಲಾಗುವುದು ಎಂದು ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್ ತಿಳಿಸಿದರು.
ಜಿಲ್ಲೆಯಲ್ಲಿ 2,71,448 ರೈತರಿದ್ದು, ಅದರಲ್ಲಿ ಅತಿ ಸಣ್ಣ ರೈತರು 2,09,458, ಸಣ್ಣ ರೈತರು 41,191, ಮಧ್ಯಮ ರೈತರು20,524, ದೊಡ್ಡ ರೈತರು 275, ಪರಿಶಿಷ್ಟ ಜಾತಿಯ 25866 ರೈತರು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 2038 ರೈತರಿದ್ದು 18 ರೈತ ಸಂಪರ್ಕ ಕೇಂದ್ರಗಳು, 165 ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು, ನೂರಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಒಂದು ಮಣ್ಣು ಪರೀಕ್ಷಾ ಪ್ರಯೋಗಾಲಯ ಮತ್ತು ಒಂದು ಕೃಷಿ ವಿಜ್ಞಾನ ಕೇಂದ್ರವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರೈತರಿಗಾಗಿ ವಿಶೇಷ ಕೃಷಿ ಚೇತನ ಅಭಿಯಾನದಡಿ ಗ್ರಾಮಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ರೈತರು ಮತ್ತು ಅಧಿಕಾರಿಗಳನ್ನೊಳಗೊಂಡ ನೂರಕ್ಕೂ ಅಧಿಕ ವಾಟ್ಸ್ ಆ್ಯಪ್ ಗ್ರೂಪ್ಗಳಿದ್ದು 6500ರೈತರು ಗ್ರೂಪ್ನಲ್ಲಿದ್ದಾರೆ. ಈ ಎಲ್ಲಾ ರೈತರಿಗೆ ಗ್ರೂಪ್ನ ಮೂಲಕ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರೈತರಿಗೆ ದೂರವಾಣಿ ಹೆಲ್ಪ್ ಲೈನ್…
ರೈತರು ಯಾವುದೇ ಮಾಹಿತಿ, ಸಮಸ್ಯೆ ಅಥವಾ ಅಹವಾಲು ಸಲ್ಲಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪಕರ್ಿಸಿ ಹಾಗೂ ದೂರವಾಣಿ ಸಂಖ್ಯೆ 18004257919 ಗೆ ಸಂಪರ್ಕಿಸಬಹುದು. ಇನ್ನು 2018-19ನೇ ಸಾಲಿನಲ್ಲಿ ಜಿಲ್ಲೆಗೆ 26.39ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಶೇ.98ರಷ್ಟು ಗುರಿ ಸಾಧನೆಯಾಗಿದೆ, 197766 ರೈತರಿಗೆ 3290 ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್ ಪಂಪ್ ಸೆಟ್, ತುಂತುರು ನೀರಾವರಿ, ನೆರಳು ಪರದೆ, ಪಾಲಿಹೌಸ್ ಮುಂತಾದ ಸೌಲಭ್ಯಗಳಿಗೆ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ರಾಜ್ಯದ ಗ್ರಾಮೀಣ ಪ್ರದೇಶದ ಹೋಬಳಿಗಳಲ್ಲಿ ವಿವಿಧ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತಾಲ್ಲೂಕಿಗೆ ಒಂದರಂತೆ ಕೈಲಾಂಚ, ಕುದೂರು, ವಿರೂಪಾಕ್ಷಿಪುರ ಹಾಗೂ ದೊಡ್ಡಮರಳವಾಡಿ ಹೋಬಳಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಕಾರ್ಯ ನಡೆಯುತ್ತಿದೆ ಎಂದರು.
ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ ಯೋಜನೆಯಡಿ 29112 ಮಾದರಿಗಳನ್ನು ಸಂಗ್ರಹಿಸಿದ್ದು 239053 ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಗಿದೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೆಚ್ಚಿಸಲು ಸರಿಯಾದ ರಸಗೊಬ್ಬರದ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕರ್ನಾಟಕದ ಜಿಲ್ಲೆಗಳು 2-3 ವರ್ಷಕ್ಕೊಮ್ಮೆ ಬರ ಪೀಡಿತ ಪ್ರದೇಶಗಳಾಗುವುದರಿಂದ ಸಕರ್ಾರವು ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ರೂಪಿಸಿದ್ದು ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ನಿಗಧಿತ ಅರ್ಜಿಯೊಂದಿಗೆ ಭೂಮಿ ದಾಖಲೆಗಳಾದ ಪಹಣಿ, ಖಾತೆ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಅನ್ನು ಹತ್ತಿರದ ಬ್ಯಾಂಕ್ ಗಳಲ್ಲಿ ನೊಂದಾಯಿಸಿಕೊಳ್ಳಬಹುದು ಎಂದರು.
ಈ ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ಎಳ್ಳು ಬೆಳೆಗೆ ಜುಲೈ 16, ಭತ್ತ, ನೆಲಗಡಲೆ, ಅಲಸಂದೆ, ತೊಗರಿ ಬೆಳೆಗೆ ಜುಲೈ 31 ಮತ್ತು ಮುಸುಕಿನ ಜೋಳ, ರಾಗಿ, ಹುರುಳಿ, ಕೆಂಪುಮೆಣಸಿನಕಾಯಿಗೆ ಆಗಸ್ಟ್ನ 14ನ್ನು ಕೊನೆಯ ದಿನವಾಗಿರುತ್ತದೆ ವಿಮೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೂಫೇಶ್ 9611993161 (ಮಾಗಡಿ, ಚನ್ನಪಟ್ಟಣ ತಾಲ್ಲೂಕು) ಮತ್ತು ಧರಣೀಂದ್ರ 8105522077(ರಾಮನಗರ, ಕನಕಪುರ ತಾಲ್ಲೂಕು) ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಕೃಷಿಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹಾವು ಕಡಿತ ಮತ್ತಿತರ ಕಾರಣಗಳಿಂದ ರೈತರಿಗೆ ಪ್ರಾಣ ಹಾನಿಯುಂಟಾದರೆ ಅಂತಹ ರೈತರ ಕುಟುಂಬಕ್ಕೆ 2 ಲಕ್ಷ ಪರಿಹಾರವನ್ನು ನೀಡಲಾಗುವುದು, ಬಣವೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅಂತಹ ರೈತರಿಗೆ 25000 ಧನಸಹಾಯವನ್ನು ಕೃಷಿ ಇಲಾಖೆಯಿಂದ ನೀಡಲಾಗುತ್ತದೆ ಎಂದರು.
ನೀರಿನ ಸಮರ್ಪಕ ಬಳಕೆಯ ಉದ್ದೇಶದಿಂದ ಪ್ರಧಾನ ಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.90ರ ಸಹಾಯಧನದಡಿಯಲ್ಲಿ ವಿತರಿಸಲಾಗುತ್ತಿದೆ ಎಂದು ಜಿ.ಎಚ್.ಯೋಗೇಶ್ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ಅವರು ಸ್ವಾಗತಿಸಿ, ವಂದಿಸಿದರು.
Key words: A comprehensive agricultural campaign from June 10 to 30. Ramanagar District Agriculture Deputy Director GH Yogesh,
#agricultural #campaign #ramanagar #DeputyDirector #GHYogesh,