ಒಂದೇ ಅಧಿವೇಶನ; ಇಬ್ಬರು ಸಿಎಂ, ಇಬ್ಬರು ಸ್ಪೀಕರ್‌

ಬೆಂಗಳೂರು:ಆ-1: ಪಕ್ಷದ ಆಂತರಿಕ ಬಂಡಾಯ ಲೆಕ್ಕಿಸದೇ ಬಜೆಟ್‌ ಅನುಮೋದನೆಗೆ ಕರೆದ ಅಧಿವೇಶನ ಸರ್ಕಾರದ ಅದಲು ಬದಲಿಗೆ ಸಾಕ್ಷಿಯಾಗಿದ್ದು, ವಿಶ್ವಾಸ ಮತ ಯಾಚನೆಗೆ ಮುಂದಾಗಿ ಕುಮಾರಸ್ವಾಮಿ ಪ್ರತಿಪಕ್ಷದಲ್ಲಿ ಕೂಡುವಂತಾಯಿತು. ಒಂದು ತಿಂಗಳಲ್ಲಿ ರಾಜ್ಯ ರಾಜಕೀಯ ಚಿತ್ರಣವೇ ಬದಲಾಗಿ ಹೋಯಿತು.

ಕಳೆದ ಆರು ತಿಂಗಳಿಂದಲೂ ಮೈತ್ರಿ ಸರ್ಕಾರದ ವಿರುದ್ಧ ನಿರಂತರ ಬಂಡಾಯದ ಮಾತುಗಳು ಕೇಳಿ ಬರುತ್ತಿದ್ದರಿಂದ ಅಧಿವೇಶನಕ್ಕೂ ಮುಂಚೆ ಕೇಳಿ ಬಂದಿದ್ದ ಬಂಡಾಯವನ್ನೂ ಮೈತ್ರಿ ಪಕ್ಷಗಳ ನಾಯಕರು ನಿರ್ಲಕ್ಷ್ಯ ಮಾಡಿದ್ದು, ಮುಖ್ಯಮಂತ್ರಿ ಪ್ರತಿಪಕ್ಷದವರನ್ನು ಕೇಳದೇ ಸದನದ ವಿಶ್ವಾಸ ಪಡೆಯಲು ಹೋಗಿ ಅಧಿಕಾರ ತ್ಯಾಗ ಮಾಡಿ ಹೋಗುವಂತಾಯಿತು.

ಮುನ್ಸೂಚನೆ: ಜು. 12 ರಿಂದ 26ರ ವರೆಗೆ ಬಜೆಟ್‌ನ ಮುಂದುವರಿದ ಅಧಿವೇಶನ ಕರೆದು ಇಲಾಖಾವಾರು ಚರ್ಚೆಗೆ ಅವಕಾಶ ನೀಡಲು ತೀರ್ಮಾನಿಸಿದ್ದ ಮೈತ್ರಿ ಪಕ್ಷಗಳ ನಾಯಕರಿಗೆ ಅಧಿವೇಶನ ಆರಂಭಕ್ಕೂ ಮುನ್ನವೇ ಆನಂದ್‌ಸಿಂಗ್‌ ರಾಜೀನಾಮೆ ಮೂಲಕ ಸರ್ಕಾರದ ಅವನತಿ ಆರಂಭದ ಮುನ್ಸೂಚನೆ ನೀಡಿದರು.

ಕಲಾಪದ ಲೆಕ್ಕಾಚಾರ: ಆನಂದ್‌ ಸಿಂಗ್‌ ರಾಜೀನಾಮೆ ನೀಡಿದ ದಿನವೇ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅಧಿವೇಶನ ನಡೆಯುವುದೂ ಅನುಮಾನ ಎಂದು ಪ್ರತಿಕಾಗೋಷ್ಠಿ ಕರೆದು ಹೇಳಿದಾಗಲೂ ಮೈತ್ರಿ ಪಕ್ಷಗಳ ನಾಯಕರು ಅದನ್ನು ಗಂಭೀರವಾಗಿ ಪರಿಗಣಿಸದೇ ಏನೂ ಆಗುವುದಿಲ್ಲ ಎನ್ನುವಂತೆ ಸುಗಮ ಕಲಾಪ ನಡೆಸುವ ಲೆಕ್ಕಾಚಾರದಲ್ಲಿ ಮುಳುಗಿದರು.

ರಮೇಶ್‌ ಜಾರಕಿಹೊಳಿ ಜೊತೆಗೆ ನಾಲ್ಕೈದು ಜನ ಶಾಸಕರು ಹೋಗುವುದರಿಂದ ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ ಎನ್ನುವ ಆತ್ಮವಿಶ್ವಾಸದಲ್ಲಿ ಅಧಿವೇಶನ ನಡೆಸಲು ಮುಂದಾದರು. ಆದರೆ, ಜುಲೈ 6 ರಂದು ಏಕಾ ಏಕಿ 12 ಜನ ಶಾಸಕರು ರಾಜೀನಾಮೆ ನೀಡಿದಾಗಲೇ ಮೈತ್ರಿ ಸರ್ಕಾರ ಅಂತಿಮ ದಿನಗಳನ್ನು ಎಣಿಕೆ ಶುರುವಾಯಿತು. ಆ ನಂತರ ಡಾ.ಸುಧಾಕರ್‌ ಹಾಗೂ ಸಚಿವರಾಗಿದ್ದ ಎಂ.ಟಿ.ಬಿ. ನಾಗರಾಜ್‌ ರಾಜೀನಾಮೆ ನೀಡಿದಾಗ ಕಾಂಗ್ರೆಸ್‌ ನಾಯಕರು ಸರ್ಕಾರ ಉಳಿಯುವ ವಿಶ್ವಾಸ ಕಳೆದುಕೊಂಡಿದ್ದರು.

ದೀರ್ಘ‌ ಕಲಾಪ: ವಿಶ್ವಾಸ ಮತ ಯಾಚನೆಯ ಮೇಲಿನ ಚರ್ಚೆ ಆರಂಭವಾದ ಮೇಲೆ ರಾಜ್ಯಪಾಲರು ಒಂದೇ ದಿನದಲ್ಲಿ ಬಹುಮತ ಸಾಬೀತು ಪಡೆಸುವಂತೆ ಸೂಚಿಸಿದರೂ, ಕ್ರಿಯಾಲೋಪದ ಹೆಸರಿನಲ್ಲಿ ವಿಳಂಬ ಧೋರಣೆ ಅನುಸರಿಸಿದರು. ಬಿಜೆಪಿ ಶಾಸಕರನ್ನು ಕೆಣಕಿ ಗಲಾಟೆ ಮಾಡಿಸಿ, ಸದನದಿಂದ ಅಮಾನತು ಮಾಡಿಸುವ ತಂತ್ರವನ್ನೂ ಹೆಣೆದುಕೊಂಡಿದ್ದರು. ಆದರೆ, ಸರ್ಕಾರವನ್ನು ಶತಾಯಗತಾಯ ಬದಲಾಯಿಸಲೇಬೇಕೆಂದಿದ್ದ ಬಿಜೆಪಿ ನಾಯಕರು, ಶಾಸಕರಿಗೆ ಮೌನವೊಂದೆ ಮಂತ್ರ ಎನ್ನುವ ಪಾಠ ಕಲಿಸಿ, ಯಾವುದಕ್ಕೂ ಪ್ರತಿಕ್ರಿಯೆ ನೀಡದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಕಡೆಗೂ ಪತನಗೊಂಡ ಸರ್ಕಾರ: ರಾಜೀನಾಮೆ ಸಲ್ಲಿಸಿ ಹೇಗಾದರೂ ಮಾಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಅತೃಪ್ತ ಶಾಸಕರನ್ನು ಕೊನೆ ಘಳಿಗೆಯಲ್ಲಿ ವಾಪಸ್‌ ಕರೆಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಮಾಡಿದ ಶತಪ್ರಯತ್ನ ಫ‌ಲನೀಡಲಿಲ್ಲ. ಮುಳುಗುತ್ತಿರುವ ಹಡಗಿನಲ್ಲಿ ಪ್ರಯಾಣಿಸಿ ಎಲ್ಲ ಶಾಸಕರು ಮುಳುಗಿ ಬಂಡಾಯದ ನಿರ್ಲಕ್ಷ್ಯಕ್ಕೆ ಸರ್ಕಾರವನ್ನೇ ಕಳೆದುಕೊಳ್ಳುವಂತಾಯಿತು.

ಮೈತ್ರಿ ಸರ್ಕಾರ ಪತನವಾದ ನಾಲ್ಕೇ ದಿನದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮೂರೇ ದಿನದಲ್ಲಿ ಅದೇ ಸದನದಲ್ಲಿ ಬಹುಮತ ಸಾಬೀತು ಪಡೆಸುವುದಕ್ಕೂ ಸದನ ಸಾಕ್ಷಿಯಾಯಿತು. ಸರ್ಕಾರ ಬದಲಾದ ತಕ್ಷಣ ವಿಧಾನಸಭೆ ಅಧ್ಯಕ್ಷರೂ ರಾಜೀನಾಮೆ ನೀಡಿದ್ದರಿಂದ ಹೊಸ ಅಧ್ಯಕ್ಷರ ನೇಮಕವೂ ಇದೇ ಅಧಿವೇಶನದಲ್ಲಿ ಆಗುವಂತಾಯಿತು.
ಕೃಪೆ:ವಿಜಯವಾಣಿ

ಒಂದೇ ಅಧಿವೇಶನ; ಇಬ್ಬರು ಸಿಎಂ, ಇಬ್ಬರು ಸ್ಪೀಕರ್‌

a-single-session-two-cms-two-speakers