ಅರಬರ ನಾಡಿನಲ್ಲಿ ವಿಶ್ವಗುರು ಬಸವಣ್ಣನ ಪ್ರತಿಮೆ ಸ್ಥಾಪನೆ

ಬೆಂಗಳೂರು, ಜುಲೈ 05, 2020 (www.justkannada.in): ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣ ಪ್ರತಿಮೆ ಸ್ಥಾಪನೆಯಾಗಿದ್ದು ಇತಿಹಾಸ. ಈಗ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗುವ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ ಚಿಂತನೆಗಳು ಹರಡುವಂತಾಗಿದೆ.

ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದುಬೈ ಬಸವ ಸಮಿತಿ ವತಿಯಿಂದ ಬಸವಣ್ಣನವರ ಪಂಚಲೋಹದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಸಹಾಯ ಮತ್ತು ಸಹಕಾರದಿಂದ ದುಬೈ ಬಸವ ಸಮಿತಿಯವರು ಬಸವಣ್ಣನ ಮೂರ್ತಿಯನ್ನು ಬೆಂಗಳೂರಿನ ಗಾಯತ್ರಿ ಶಿಲ್ಪಿ ಅವರಿಂದ ಕೆತ್ತನೆ ಮಾಡಿಸಿ ದುಬೈಗೆ ತೆಗೆದುಕೊಂಡು ಹೋಗಿದ್ದಾರೆ.

ಈ ಮೂರ್ತಿಯನ್ನು ಬಸವ ಜಯಂತಿ ಸಂದರ್ಭದಲ್ಲಿ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಕೊರೊನಾ ಲಾಕ್ ಡೌನ್ ಪರಿಣಾಮ ಬಸವ ಜಯಂತಿ ಕಾರ್ಯಕ್ರಮ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶನಿವಾರ ಸರಳವಾಗಿ ಬಸವಣ್ಣನ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ವಿಪುಲ್ ಶಾ ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ಸರಳ ರೀತಿಯಲ್ಲಿ ಮಾಡಲಾಗಿದೆ, ಮುಂಬರುವ ದಿನಗಳಲ್ಲಿ ಕನ್ನಡಿಗರೆಲ್ಲರನ್ನೂ ಸೇರಿಸಿ ಅಧಿಕೃತವಾಗಿ ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ನೆರವೇರಿಸಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯನ್ನು ಅನಾವರಣ ಗೊಳಿಸೋಣ ಎಂದು ಹೇಳಿದರು.

ಕರ್ನಾಟಕದ ಮಹಾನ್ ಸಮಾಜ ಸುಧಾರಕರಾದ ಬಸವಣ್ಣನವರ ವಚನಗಳಿಂದ ನಾವೆಲ್ಲರೂ ಪ್ರೇರೇಪಿತರಾಗಬೇಕೆಂದು ಹೇಳಿ ಬಸವ ಸಮಿತಿ ದುಬೈಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಯುಎಇ ಬಸವ ಸಮಿತಿ ದುಬೈ ಅಧ್ಯಕ್ಷರಾದ ಸತೀಶ್ ಹಿಂಡೇರ, ಸಲಹಾ ಹಾಗೂ ಸ್ಥಾಪಕ ಸಮಿತಿಯ ಸದಸ್ಯರಾದ ಚಂದ್ರಶೇಖರ ಲಿಂಗದಳ್ಳಿ, ಬಸವ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಮುಳ್ಳೂರ್, ಡಾ. ಮಮತಾ ರೆಡ್ಡೇರ ಹಾಜರಿದ್ದರು.