ಬೆಂಗಳೂರು,ಆ,30,2019(www.justkannanda.in): ಕೇಂದ್ರ ಸರ್ಕಾರದಿಂದ ರಾಜಕೀಯ ಕಾರಣಗಳಿಗಾಗಿ ತನಿಖಾ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆಪರೇಷನ್ ಕಮಲದ ಮೇಲೆ ನೂರಾರು ಕೋಟಿ ಆರೋಪವಿದೆ. ಈ ಬಗ್ಗೆಯೂ ಈಗ ಕ್ರಮ ತೆಗೆದುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಡಿ ಸಮನ್ಸ್ ಕುರಿತು ಕೆಪಿಸಿಸಿಯಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ, ಐಟಿ ಇಲಾಖೆ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಸಂಸದರಾದ ಉಗ್ರಪ್ಪ,ಚಂದ್ರಪ್ಪ ಉಪಸ್ಥಿತರಿದ್ದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಳೆದ ಐದು ವರ್ಷಗಳಿಂದಲೂ ತನಿಖಾ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಪ್ರತಿಪಕ್ಷಗಳನ್ನ ಹಣಿಯುವ ಕೆಲಸ ಮಾಡುತ್ತಿದೆ. ಮಾಧ್ಯಮ, ಸಂಸ್ಥೆಗಳು, ಉದ್ಯಮಿಗಳನ್ನ ಹಣಿಯುತ್ತಿದೆ. ಅವರ ಸಿದ್ಧಾಂತಕ್ಕೆ ವಿರುದ್ಧವಾದರೆ ಟಾರ್ಗೆಟ್ ಮಾಡುತ್ತಿದೆ ಎಂದು ಗುಡುಗಿದರು.
ಸಿದ್ದರಾಮಯ್ಯ ಅವಧಿಯಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. ಅಂದು ರಮೇಶ್ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ ಕೆ.ಗೋವಿಂದರಾಜ್, ಜಾರ್ಜ್ ಎಲ್ಲರ ಮೇಲೆ ದಾಳಿ ನಡೆಸಿದ್ದರು. ತನಿಖಾ ಸಂಸ್ಥೆಗಳನ್ನ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಚುನಾವಣೆ ವೇಳೆಯೂ ಐಟಿ ದಾಳಿಯನ್ನ ಮಾಡಲಾಯ್ತು. ಇವತ್ತು ಒಂದು ಏಜೆನ್ಸಿ ಪಕ್ಷದ ಪರವಾಗಿ ಕೆಲಸ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಗುಜರಾತ್ ಶಾಸಕರನ್ನ ಕರೆತಂದು ರಕ್ಷಿಸಿದ್ದಕ್ಕೆ ಡಿಕೆಶಿ ಟಾರ್ಗೆಟ್
ಕಳೆದ ಎರಡು ವರ್ಷಗಳಿಂದ ಡಿಕೆ ಶಿವಕುಮಾರ್ ಟಾರ್ಗೆಟ್ ಆಗಿದ್ದಾರೆ. ಗುಜರಾತ್ ಶಾಸಕರನ್ನ ಕರೆತಂದು ರಕ್ಷಿಸಿದ್ದಕ್ಕೆ ಕೇಂದ್ರ ಸರ್ಕಾರ ಡಿಕೆಶಿ ಅವರನ್ನ ಟಾರ್ಗೆಟ್ ಮಾಡುತ್ತಿದೆ. ಅಂದಿನಿಂದ ಇಂದಿನವರೆಗೂ ಅವರು ಟಾರ್ಗೆಟ್ ಆಗ್ತಿದ್ದಾರೆ. ಡಿಕೆಶಿ ಪಕ್ಷ ನಿಷ್ಠೆಯುಳ್ಳ ಕಾರ್ಯಕರ್ತರು. ಶಾಸಕರಿದ್ದ ಸಂದರ್ಭದಲ್ಲೇ ಅವರ ರೇಡ್ ಮಾಡಿದ್ರು ಎಂದು ಕಿಡಿಕಾರಿದರು.
ಯಡಿಯೂರಪ್ಪ ಮೇಲೆ ಯಾಕೆ ಐಟಿ ರೇಡ್ ಮಾಡಲಿಲ್ಲ.
ಯಡಿಯೂರಪ್ಪ ಟೇಪ್ ರೆಕಾರ್ಡ್ ಹೊರಬಂದಿದೆ. ಅವರ ಮೇಲೆ ಯಾಕೆ ಐಟಿ ರೇಡ್ ಮಾಡಲಿಲ್ಲ. ಶ್ರೀನಿವಾಸ್ ಗೌಡ ಸದನದಲ್ಲಿಯೇ ಆರೋಪಿಸಿದ್ದಾರೆ. ಈಗಿನ ಡಿಸಿಎಂ, ಸಿಎಂ ರಾಜಕೀಯ ಕಾರ್ಯದರ್ಶಿ ಮೇಲೆ ಆರೋಪವಿದೆ. 5 ಕೋಟಿ ಲಂಚ ಕೊಟ್ಟಿದ್ದಾರೆ ಅಂತ ಹೇಳಿದ್ದರು. ಅವರ ಮೇಲೆ ಯಾಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಇಷ್ಟು ಸಿಕ್ಕಿದೆ, ಅಷ್ಟು ಸಿಕ್ಕಿದೆ ಅಂತ ಸುಮ್ಮನೆ ತೋರಿಸುವುದು. ಸುಖಾಸುಮ್ಮನೆ ಟಾರ್ಗೆಟ್ ಮಾಡುವುದು. ಇದು ಅಧಿಕಾರ ದುರುಪಯೋಗವಲ್ಲವೇ. ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು? ಎಂದು ನೇರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ದಿನೇಶ್ ವಾಗ್ದಾಳಿ
ನಮಗೆ ಐಟಿ,ಇಡಿ ಮೇಲೆ ನಂಬಿಕೆ ಹೋಗಿದೆ…
ನಮಗೆ ಐಟಿ,ಇಡಿ ಮೇಲೆ ನಂಬಿಕೆ ಹೋಗಿದೆ. ಸರ್ಕಾರದ ಕೈಗೊಂಬೆಯಾಗಿ ಅಧಿಕಾರಿಗಳು ನಡೆದರೆ ಹೇಗೆ..? ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಿ.ಬಿಜೆಪಿಗೆ ಹೋದರೆ ತಪ್ಪು ಮಾಡಿದ್ದರೂ ಕ್ಷಮಾಧಾನ ಸಿಗಲಿದೆ. ಬಿಜೆಪಿಗೆ ಹೋಗದೆ ಉಳಿದರೆ ಪದೇ ಪದೇ ಟಾರ್ಗೆಟ್ ಮಾಡುವುದು. ರಮೇಶ್ ಜಾರಕಿಹೊಳಿ ಮೇಲೆ ಐಟಿ ದಾಳಿಯಾಗಿತ್ತು. ಈಗ ಅವರ ಮೇಲಿನ ಕೇಸ್ ಎಲ್ಲಿ ಹೋಯ್ತು. ಬಿಜೆಪಿಗೆ ಹೋಗುತ್ತಿದ್ದಂತೆ ಅಲ್ಲಿಗೇ ಕೈ ಬಿಟ್ರಾ? ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದರು.
ಮುಖುಲ್ ರಾಯ್,ಹೇಮಂತ್ ಬಿಸ್ವಾಸ್ ಕೇಸ್ ಏನಾಯ್ತು. ಶಾರದಾ ಸ್ಕ್ಯಾಂನಲ್ಲಿದ್ದ ಪ್ರಮುಖರ ಹೆಸರು ಕೇಳಿ ಬಂದಿತ್ತು. ಇವರು ಬಿಜೆಪಿಗೆ ಸೇರುತ್ತಿದ್ದಂತೆ ಅವರ ಕೇಸ್ ಮಾಫ್. ಆಪರೇಷನ್ ಕಮಲದ ಮೇಲೆ ನೂರಾರು ಕೋಟಿ ಆರೋಪವಿದೆ. ಅದರ ಬಗ್ಗೆ ಯಾಕೆ ಐಟಿ ಕೇಸ್ ದಾಖಲಿಸಿಲ್ಲ. ಡಿಕೆಶಿ ಮೇಲೆ ರೇಡ್ ಮಾಡಿದ್ದಾಗ ಯಾರಾದ್ರು ಕಂಪ್ಲೇಂಟ್ ಕೊಟ್ರಾ? ಗೋವಿಂದರಾಜ್ ಮೇಲೆ ರೇಡ್ ಗೆ ದೂರು ಕೊಟ್ಟಿದ್ರಾ?. ಸ್ವಯಂಪ್ರೇರಿತವಾಗಿ ರೇಡ್ ಮಾಡಲಾಗಿತ್ತು. ಈಗ ಆಪರೇಷನ್ ಕಮಲದ ಬಗ್ಗೆಯೂ ಹಾಗೇ ಕ್ರಮತೆಗೆದುಕೊಳ್ಳಿ ಎಂದು ಐಟಿ ಇಲಾಖೆಯ ವಿರುದ್ಧವೂ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಡಿಕೆಶಿ ಕಳಂಕ ರಹಿತರಾಗಿ ಹೊರಬರುತ್ತಾರೆ
ರಾಜಕೀಯವಾಗಿ ಎದುರಿಸಬೇಕು. ಅದನ್ನ ಬಿಟ್ಟು ಅಡ್ಡದಾರಿಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ.ಡಿಕೆಶಿ ಕಳಂಕ ರಹಿತರಾಗಿ ಹೊರಬರುತ್ತಾರೆ. ಬಿಜೆಪಿಯ ಎಲ್ಲಾ ಕುತಂತ್ರವನ್ನ ಬೇಧಿಸಿ ಹೊರಬರುತ್ತಾರೆ. ಅವರು ಮತ್ತಷ್ಟು ಶಕ್ತಿಶಾಲಿಯಾಗುತ್ತಾರೆ. ಇದನ್ನ ಧೈರ್ಯವಾಗಿ ಅವರು ಎದುರಿಸುತ್ತಾರೆ. ಸತ್ಯವನ್ನ ಜನರ ಮುಂದಿಡುತ್ತಾರೆ. ಮಾಧ್ಯಮಗಳು ಇದರ ಬಗ್ಗೆ ಸತ್ಯ ತಿಳಿಸುತ್ತಿಲ್ಲ. ಮಾಧ್ಯಮಗಳಿಗೂ ಇವತ್ತು ಆತಂಕವಿದೆ ಎಂದು ಹೇಳಿದರು.
ಡಿಕೆಶಿ ಬೆಂಬಲಕ್ಕೆ ಪಕ್ಷ ಪೂರ್ಣವಾಗಿ ನಿಲ್ಲಲಿದೆ
ಡಿಕೆ ಶಿವಕುಮಾರ್ ಬೆಂಬಲಕ್ಕೆ ಪಕ್ಷ ಪೂರ್ಣವಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಹೋರಾಡಲಿದೆ. ಮುಂದೆ ಹೋರಾಟದ ರೂಪುರೇಷೆ ರೂಪಿಸ್ತೇವೆ. ಚಿದಂಬರಂ ಯಾವ ರೀತಿ ಅಟ್ಯಾಕ್ ಮಾಡಿದ್ರು. ಪ್ರತಿಪಕ್ಷಗಳನ್ನ ತೆಗೆಯೋಕೆ ಅವರು ಮುಂದಾಗಿದ್ದಾರೆ. ಪ್ರಜಾಪ್ರಭುತ್ವ ತೆಗೆದು ಸರ್ವಾಧಿಕಾರ ಧೋರಣೆ ತಾಳ್ತಿದ್ದಾರೆ. ಅವರು ಮಾಡಿದ್ದೇ ಸರಿ ಅಂತ ಸಮರ್ಥಿಸಿಕೊಳ್ತಿದ್ದಾರೆ. ನಾವು ಎಲ್ಲ ಹೋರಾಟಕ್ಕೂ ಸಜ್ಜಾಗಿದ್ದೇವೆ ಎಂದು ಹೇಳಿದರು.
Key words: abuse – power-Operation Kamala – Dinesh Gundurao – direct – against – Central govrnament