ನವದೆಹಲಿ,ಜುಲೈ,11,2022(www.justkannada.in): ಬೆಂಗಳೂರು ಡಿಸಿ ಕಚೇರಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ವಿರುದ್ಧ ಹಾಗೂ ತಮ್ಮ ವಿರುದ್ಧ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ.ಎಚ್.ಪಿ. ಸಂದೇಶ್ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಹೌದು ನ್ಯಾಯಮೂರ್ತಿ ಸಂದೇಶ್ ವ್ಯಕ್ತಪಡಿಸಿದ ಅಭಿಪ್ರಾಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮೇಲ್ಮನವಿ ಸಲ್ಲಿಸಿದ್ದಾರೆ. ಆ ಅರ್ಜಿ ಸಿಜೆಐ ಎನ್.ಎ. ರಮಣ ಅವರಿದ್ದ ನ್ಯಾಯಪೀಠದ ಎದುರು ಇಂದು ತುರ್ತು ವಿಚಾರಣೆಗೆ ಮನವಿ ಮಾಡಲಾಯಿತು.
ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ ಹಾಕುವ ಪ್ರಕರಣ, ಏನಿದು ಎಂದು ಪ್ರಶ್ನಿಸಿದರು. ‘ಇದೆಲ್ಲವೂ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಇದು ಸರಿಯಲ್ಲ. ನ್ಯಾ ಎಚ್.ಪಿ.ಸಂದೇಶ್ ಅವರು ವ್ಯಕ್ತಪಡಿಸಿದ ಅಭಿಪ್ರಾಯದಿಂದ ನನ್ನ ಕಕ್ಷಿದಾರರ ಘನತೆಗೆ ಧಕ್ಕೆಯಾಗಿದೆ’ ಎಂದು ಸೀಮಂತ್ ಕುಮಾರ್ ಸಿಂಗ್ ಪರ ವಕೀಲರು ಸುಪ್ರೀಂಕೋರ್ಟ್ ಗೆ ಹೇಳಿದರು. ನಂತರ ನಾಳೆ ಸೂಕ್ತ ಪೀಠದಲ್ಲಿ ಈ ಅರ್ಜಿ ವಿಚಾರಣೆ ನಡೆಸುವಂತೆ ಸಿಜೆಐ ಎನ್.ವಿ.ರಮಣ ತಿಳಿಸಿದರು.
ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಅವರಿಂದ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ನ್ಯಾ. ಹೆಚ್.ಪಿ. ಸಂದೇಶ್ ಅವರು ಮತ್ತಷ್ಟು ಖಾರವಾಗಿ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ವಿಚಾರಣೆ ವೇಳೆಯೇ ಟೀಕಿಸಿ ಅಸಮಾಧಾನ ಹೊರಹಾಕಿದ್ದರು.
ನೀವು ಕೊಟ್ಟ ವರದಿ ಸಂಪೂರ್ಣ ಸತ್ಯವಾದ ವರದಿಯಲ್ಲ. ನೀವು ಈ ವರ್ಷ ಸಲ್ಲಿಸಿದ ಬಿ ರಿಪೋರ್ಟ್ ಗಳ ಮಾಹಿತಿ ನೀಡಿಲ್ಲ. ಆದರೆ ಮಾರ್ಚ್, ಜೂನ್ ತಿಂಗಳ ಬಿ ರಿಪೋರ್ಟ್ ಸಲ್ಲಿಸಿದ್ದೀರಿ. 819 ಸರ್ಚ್ ವಾರೆಂಟ್ಗಳನ್ನು ಪಡೆಯಲಾಗಿತ್ತು. 28 ಸರ್ಚ್ ವಾರೆಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಕೋರ್ಟ್ ಹೇಳಿದ ಮೇಲೆ ಜಿಲ್ಲಾಧಿಕಾರಿಯನ್ನು ಆರೋಪಿ ಮಾಡಿದ್ದೀರಿ. ಈಗ ದಾಳಿ ಮಾಡಿದ್ದೀರಿ, ಮೊದಲೇ ಏಕೆ ಮಾಡಲಿಲ್ಲ? ಕ್ರಮ ಕೈಗೊಳ್ಳುವುದು ಎಸಿಬಿ ಎಡಿಜಿಪಿ ಕರ್ತವ್ಯವಲ್ಲವೇ? ನೌಕರನಲ್ಲದ ವ್ಯಕ್ತಿ ಡಿಸಿಗೆ ಸಹಾಯಕನಾಗಲು ಹೇಗೆ ಸಾಧ್ಯ? ಎಂದು ಚಾಟಿ ಬೀಸಿದ್ದರು.
ಅಲ್ಲದೆ ಡಿಸಿ ಸ್ವತಃ 1ನೇ ಆರೋಪಿ ಜೊತೆ ಮಾತನಾಡಲು ಹೇಳಿದ್ದಾರೆ. 1 ನೇ ಆರೋಪಿ ಆದೇಶ ಸಿದ್ದವಿದ್ದರೂ ಡಿಸಿ ಏಕೆ ಸಹಿ ಮಾಡಿರಲಿಲ್ಲ? ಎಂದು ಒಂದೇ ಸಮನೆ ಎಸಿಬಿ ಪರ ವಕೀಲರಿಗೆ ನ್ಯಾ. ಹೆಚ್.ಪಿ. ಸಂದೇಶ್ ಪ್ರಶ್ನೆಗಳನ್ನ ಹಾಕಿದ್ದರು.
Key words: ACB –ADGP- Seemanth Kumar Singh – Supreme Court -against –Justice- HP Sandesh.