ಕಲಬುರಗಿ,ನವೆಂಬರ್,25,2021(www.justkannada.in): ಎಸಿಬಿ ದಾಳಿಗೆ ಹೆದರಿ ಪೈಪ್ ನಲ್ಲಿ ಹಣ ಬಚ್ಚಿಟ್ಟಿದ್ಧ ಲೋಕೋಪಯೋಗಿ ಇಲಾಖೆ ಜೆಇ ಶಾಂತನಗೌಡರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನಿನ್ನೆ ಎಸಿಬಿ ಅಧಿಕಾರಿಗಳು 15 ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಒಟ್ಟು 68 ಕಡೆಗಳಲ್ಲಿ ದಾಳಿ ನಡೆಸಿದ್ದರು. ಕಲ್ಬುರ್ಗಿಯಲ್ಲಿ ಪಿಡಬ್ಲ್ಯುಡಿ ಜೆಇ ಶಾಂತನಗೌಡ ನಿವಾಸದ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು ಶಾಂತನಗೌಡ ಬಚ್ಚಿಟ್ಟಿದ್ದ ಸಂಪತ್ತನ್ನು ಬಯಲು ಮಾಡಿದ್ದಾರೆ.
ಶಾಂತನಗೌಡ ಎಸಿಬಿ ದಾಳಿಗೆ ಹೆದರಿ ಮನೆಯ ನೀರಿನ ಪೈಪ್ ಒಳಗೆ ಹಣ ಸುರಿದಿದ್ದರು. ಇದನ್ನ ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಕಳೆದ ರಾತ್ರಿ ಎಸಿಬಿ ತಂಡ ಶಾಂತಗೌಡರನ್ನ ಬಂಧಿಸಿ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿತ್ತು. ನಂತರ ನ್ಯಾಯಾಧೀಶರು ಶಾಂತಗೌಡರನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಸದ್ಯ ಶಾಂತಗೌಡ ಬಿರಾದರ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ನಿನ್ನೆ ಎಸಿಬಿ ಅಧಿಕಾರಿಗಳು ಮನೆಗೆ ಬಂದಾಗ ಬಾಗಿಲು ತೆಗೆಯದೇ ಶಾಂತಗೌಡ ಸತಾಯಿಸಿದ್ದರು. ಮತ್ತೊಂದಡೆ ದಾಳಿ ವೇಳೆ ಸಿಬ್ಬಂದಿಗೆ ಸಹಕರಿಸಿರಲಿಲ್ಲ. ಸಿಬ್ಬಂದಿಗೆ ಯಾಮಾರಿಸಿ ಹಣ ಬಚ್ಚಿಡೋ ತಂತ್ರ ಮಾಡಿದ್ದರು. ಇದೇ ಕಾರಣಕ್ಕೆ ಎಸಿಬಿ ಹಿರಿಯ ಅಧಿಕಾರಿಗಳು ಶಾಂತಗೌಡ ಬಿರಾದರ್ ಬಂಧನಕ್ಕೆ ಸೂಚನೆ ನೀಡಿದ್ದರು. ಅದರಂತೆಯೇ ಕಳೆದ ರಾತ್ರಿ ಬಂಧಿಸಿ ಜೈಲಿಗಟ್ಟಿದ್ದಾರೆ.
Key words: ACB –attack-PWD JE -Shantanagouda – judicial custody.