ಬೆಂಗಳೂರು,ನವೆಂಬರ್,14,2020(www.justkannada.in): ಇತ್ತೀಚೆಗೆ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ನಿವಾಸದ ಮೇಲಿನ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ನಡೆದ ದಾಳಿ ಖಾಲಿ ಪ್ರಚಾರಕ್ಕೆ ಬಳಕೆ ಆಗದಿರಲಿ ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಫ್.ಕೆ.ಸಿ.ಸಿ.ಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ., ಡಾ. ಬಿ ಸುಧಾರವರು 2005 ನೇ ಬ್ಯಾಚಿನ ಕೆ.ಎ.ಎಸ್ ಅಧಿಕಾರಿಯಾಗಿ ನೇಮಕಗೊಂಡು ಅನೇಕ ಕಡೆ ತಾಲ್ಲೂಕು ದಂಡಾಧಿಕಾರಿಗಳಾಗಿ ಕೆಲಸ ನಿರ್ವಸಿದ್ದಾರೆ. ಇವರ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ದಾಳಿ ಮಾಡಿ ಸುಮಾರು ನೂರಾರು ಕೋಟಿ ರೂಪಾಯಿ ಮೌಲ್ಯದ 200 ಕ್ಕೂ ಹೆಚ್ಚು ಸ್ಥಿರಾಸ್ತಿ ದಾಖಲೆಗಳು ಸಿಕ್ಕಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಪ್ರಸ್ತುತದಲ್ಲಿ ಇವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ) ದಲ್ಲಿ ಹೆಚ್ಚುವರಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2015 ನವೆಂಬರ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿಜಯಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯ ಜಮೀನಿನ ಭೂಪರಿವರ್ತನೆಯಲ್ಲಿನ ಆಕ್ರಮಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇವರ ಮನೆಯ ಮೇಲೆ ಲೋಕಾಯುಕ್ತ ಪೋಲೀಸರು ದಾಳಿ ಮಾಡಿ ಶೋಧ ನಡೆಸಿದ್ದರು.
ಈ ರೀತಿ ನಡೆಯುವ ಲಂಚಗುಳಿತನ, ಭ್ರಷ್ಟಾಚಾರ ಮೇಲಾಧಿಕಾರಿಗಳಿಗೆ ಗೊತ್ತಿರುತ್ತದೆ. ಮೇಲಾಧಿಕಾರಿಗಳು ನಿಷ್ಠಾಂತರಾಗಿದ್ದಾಗ ಅವರ ಕೆಳಗಿನ ಅಧಿಕಾರಿಗಳು ನಿಷ್ಠಾಂತರಾಗಿರುತ್ತಾರೆ. ಕರ್ನಾಟಕ ಈಗಾಗಲೆ ಭ್ರಷ್ಟಾಚಾರದಲ್ಲಿ 2ನೆ ಸ್ಥಾನದಲ್ಲಿದೆ. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ), ಕೇಂದ್ರ ಅಪರಾಧ ವಿಭಾಗ ( ಸಿ.ಸಿ.ಬಿ) ಮತ್ತು ಕೇಂದ್ರೀಯ ತನಿಖಾ ದಳ (ಸಿ.ಬಿ.ಐ). ರವರು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
ಎಲ್ಲಾ ದಾಳಿಗಳು ಪ್ರಚಾರ ಆದ ಮೇಲೆ ಸ್ವಲ್ಪ ದಿನಕ್ಕೆ ಮರೆತು ಹೋಗುತ್ತಾರೆ. ಉದಾಹರಣೆ ಪತ್ರಿಕೆಯಲ್ಲಿ ಓದಿದದವರು ಎರಡು ದಿನದಲ್ಲಿ ದೂರದರ್ಶನದಲ್ಲಿ ನೋಡಿದವರು ಒಂದೇ ದಿನದಲ್ಲಿ ಮರೆತುಬಿಡುತ್ತಾರೆ. ಆದ್ದರಿಂದ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳುವುದು ಕೇವಲ ಪ್ರಚಾರಕ್ಕಾಗದೆ ಇನ್ನೊಬ್ಬರಿಗೆ ಅದು ಎಚ್ಚರಿಕೆ ಗಂಟೆಯಾಗಲಿ ಈ ತರಹದ ಭ್ರಷ್ಟಾಚಾರದಲ್ಲಿ ತೊಡಗಿರುವವರು ಅಂದರೆ ಇತ್ತೀಚಿಗಷ್ಟೆ ಡ್ರಗ್ಸ್ ದಂಧೆಯ ಹೆಸರಿನಲ್ಲಿ ಸಿಲುಕಿರುವರಿಬ್ಬರು ನಟಿಯರು ಜೈಲಿನಲ್ಲಿದ್ದಾರೆ. ಅದೇ ರೀತಿ ಇಂತಹ ಭಷ್ಟಾಚಾರದಲ್ಲಿ ಸಿಲುಕಿರುವವರನ್ನು ಜೈಲಿಗೆ ಕಳುಹಿಸಿದರೆ ಈ ತರಹದ ಲಂಚಾವತಾರಗಳು ಕಡಿಮೆಯಾಗುತ್ತವೆ.
ನಾವು ಈಗಾಗಲೆ ನೋಡಿರುವ ಹಾಗೆ ಮೈಸೂರಿನ ಜಂಟಿ ಆಯೋಗ ತೆರಿಗೆ ಇಲಾಖೆಯ (ಜಾಯಿಂಟ್ ಕಮಿಷನ್ ಟ್ಯಾಕ್ಸ್ ಆಫಿಸ್) ಅಧಿಕಾರಿ, ಪಿರಿಯಾಪಟ್ಟಣದಲ್ಲಿರುವ ಇದರ ಉಪ ಕಛೇರಿಯಲ್ಲಿರುವ ಸಹಾಯಕ ಇಂಜಿನಿಯರ್(ಅಭಿಯಂತರ), ಹಾಸನದ ಸ್ಪಷಲ್ ಸಬ್ಡಿವಿಷನ್ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವುದು ಪತ್ರಕೆಗಳಲ್ಲಿ ಪ್ರಚಾರ ಚೆನ್ನಾಗಿ ಆಗಿದೆ ಆದರೆ ಅವರನ್ನು ಜೈಲಿಗೆ ಕಳುಹಿಸಿದ ವಿಷಯ ಪ್ರಚಾರವಾಗಿಲ್ಲ.
ಭ್ರಷ್ಟಾಚಾರ, ಲಂಚಾವತಾರದಲ್ಲಿ ತೊಡಗಿರುವ ಅಧಿಕಾರಿಗಳು ಜೈಲಿಗೆ ಹೋಗಿರುವುದನ್ನು ಪ್ರಚಾರ ಕೊಟ್ಟರೆ ರಾಜ್ಯಕ್ಕೆ ಒಂದು ಎಚ್ಚರಿಕೆ ಘಂಟೆಯಾಗುತ್ತದೆ. ದಾಳಿ ಮಾಡುವುದು ದಾಖಲೆಗಳನ್ನು ವಶಪಡಿಸಿಕೊಳ್ಳುವುದು ಕೇವಲ ಪ್ರಚಾರಕ್ಕಾಗದಿರಲಿ ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಹೆಬ್ಬಾಳ ಕೈಗಾರಿಕಾ ಪ್ರದೇಶವನ್ನು ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡುವಂತೆ ಮನವಿ…
ಹಾಗೆಯೇ ಮೈಸೂರು ಜಿಲ್ಲೆಯ ಹೆಬ್ಬಾಳ ಕೈಗಾರಿಕಾ ಪ್ರದೇಶವನ್ನು ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡುವಂತೆ ಮನವಿ ಮಾಡಲಾಗಿದೆ. ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ಶಿಪ್ ಆಗಬೇಕು ಎನ್ನುವಂಥದ್ದು 2008 ರಿಂದಲೂ ಅಂದರೆ ಕಳೆದ ಹನ್ನೆರಡು ವರ್ಷದಿಂದ ಮೈಸೂರು ಜಿಲ್ಲೆಯ ಕೈಗಾರಿಕಾ ಉದ್ಯಮಿಗಳ ಒತ್ತಾಯ.
ಆದರೆ ರಾಜ್ಯ ಸರ್ಕಾರ ಹಲವು ಬಾರಿ ಹೆಬ್ಬಾಳ್ ಇಂಡಸ್ಟ್ರಿಯಲ್ ಟೌನ್ ಶಿಪ್ ಬಗ್ಗೆ ಆಶ್ವಾಸನೆ ನೀಡಿದೆ. ಆದ್ದರಿಂದ ಈ ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ ಶಿಪ್ ಬಗ್ಗೆ ತಮ್ಮ ಕಛೇರಿಯಲ್ಲಿ ಇದುವರೆಗೆ ಸರ್ಕಾರದ ಮಟ್ಟದಲ್ಲಿ ನಡೆದಿರುವ ಪತ್ರ ವ್ಯವಹಾರವೂ ಈಗಿನ ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ ಶಿಪ್ ಸ್ಥಿತಿಯನ್ನು ದಯವಿಟ್ಟು ಸಂಪೂರ್ಣ ದಾಖಲೆಗಳೊಂದಿಗೆ ನಮಗೆ ನೀಡಿದರೆ ಸರ್ಕಾರದೊಂದಿಗೆ ಎಫ್.ಕೆ.ಸಿ.ಸಿ.ಐ ವಿವರವನ್ನು ಈ ಟೌನ್ ಶಿಪ್ ಸಂಪೂರ್ಣಗೊಳಿಸುವಲ್ಲಿ ಸ್ವಲ್ಪ ತ್ವರಿತವಾಗಿ ಆಗುವಂತೆ ಮಾಡಬಹುದು. ಎಲ್ಲಾ ದಾಖಲೆಗಳನ್ನು ಕೊಡುವಿರಾಗಿ ನಂಬಿರುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.
Key words: ACB-attacks –ACB-used -, former president of FKCCI -Sudhakar S Shetty.