ಹೊಸ ವರ್ಷದ ದಿನದಂದೇ ಭೀಕರ ಅಪಘಾತ: ಇಬ್ಬರು ಸಾವು

ರಾಮನಗರ, ಜನವರಿ,1,2025 (www.justkannada.in): ಹೊಸ ವರ್ಷದ ದಿನದಂದೇ ಭೀಕರ ಅಪಘಾತ ಸಂಭವಿಸಿದ್ದು ಟೀ ಕುಡಿಯಲು ಹೊರಟಿದ್ದ ಯುವಕರ ಇನ್ನೋವಾ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಸಮೀಪದ ತಾವರಕೆರೆ ರಸ್ತೆ ಬಳಿ ನಡೆದಿದೆ.

ಮಂಜು(31), ಕಿರಣ್ (30) ಮೃತಪಟ್ಟ ಯುವಕರು. ಘಟನೆಯಲ್ಲಿ ಉಳಿದ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಲಿಸಲಾಗಿದೆ. ಯುವಕರು ಹೊಸ ವರ್ಷದ ಸಂಭ್ರಮಾಚರಣೆಯ ಮೋಜು ಮಸ್ತಿ ಗುಂಗಿನಲ್ಲಿದ್ದರು ಎನ್ನಲಾಗಿದೆ.

ಬೆಳಗಿನ‌ ಜಾವ 3 ಗಂಟೆಗೆ ಈ  ಘಟನೆ ನಡೆದಿದ್ದು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.  ತಾಜ್ ಹೊಟೇಲ್ ಪಕ್ಕದಲ್ಲಿರುವ ಟೀ ಅಂಗಡಿಯಲ್ಲಿ ಟೀ ಕುಡಿಯಲು ಅತಿ ವೇಗವಾಗಿ ಕಾರು ಚಲಾಯಿಸಿದ್ದು ಈ ವೇಳೆ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಒಟ್ಟು ಆರು ಜನರಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಮಾಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹಗಳನ್ನ ಮಾಗಡಿ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two dead, accident, New Year Day