ಅಕ್ರಮವಾಗಿ ನೆಲೆಸಿದ್ದ ಪಾಕ್ ಪ್ರಜೆ ಸೇರಿ ನಾಲ್ವರ ವಿದೇಶಿಗರ ವಿರುದ್ದ ಕಠಿಣ ಕ್ರಮ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು, ಸೆಪ್ಟಂಬರ್,30.2024 (www.justkannada.in):  ಬೆಂಗಳೂರಿನಲ್ಲಿಅಕ್ರಮವಾಗಿ  ನೆಲೆಸಿದ್ದ ಪಾಕಿಸ್ತಾನದ ಪ್ರಜೆ ಸೇರಿ  ನಾಲ್ವರನ್ನ ಬಂಧಿಸಲಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸದ್ಯ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಯಾವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು ಎಂಬುದು ಹೊರಬರಲಿದೆ. ಹತ್ತು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದರು ಎಂಬುದು ಸತ್ಯವಾಗಿದ್ದರೆ, ಕೇಂದ್ರ ಗುಪ್ತದಳದ ಗಮನಕ್ಕೆ ಬರಲಿಲ್ಲ. ಬಂಧಿತರು ಪಾಸ್‌‍ಪೋರ್ಟ್‌ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದರು. ಬಂಧಿತರು ಹೆಸರು ಬದಲಾಯಿಸಿಕೊಡು ಅಕ್ರಮವಾಗಿ ನೆಲೆಸಿದ್ದರು. ಈ ಬಗ್ಗೆ ತನಿಖೆಯಲ್ಲಿ ಏನೆಲ್ಲ ಮಾಹಿತಿಗಳು ಹೊರಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದರು.

ಬಹಳ ಜನ ಬಾಂಗ್ಲಾ ದೇಶದವರು ಬಂದಿದ್ದಾರೆ. ಪ್ರತಿನಿತ್ಯ ಅವರನ್ನು ವಶಕ್ಕೆ ಪಡೆದು ವರದಿ ನೀಡುತ್ತಿದ್ದೇವೆ. ಬಾಂಗ್ಲಾ ಗಡಿಯಲ್ಲಿ ನುಸುಳದಂತೆ ಬಂದೋಬಸ್ತ್‌ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾ ದೇಶದ ಹೈಕಮೀಷನ್‌ಗೂ ಮಾಹಿತಿ ನೀಡುತ್ತೇವೆ ಎಂದರು.

ನಗರದ ಹೊರವಲಯದ ಆನೇಕಲ್ ಜಿಗಣಿಯ ಬಳಿಯ ಅಪಾರ್ಟ್‌ಮೆಂಟ್‌ ನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಸೇರಿ ನಾಲ್ವರು ವಿದೇಶಿ ಪ್ರಜೆಗಳನ್ನ ಪೊಲೀಸರು ಬಂಧಿಸಿದ್ದಾರೆ

ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ವೇಳೆ ಬಂಧಿತ ಆರೋಪಿಯು ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು. ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿ ಬಳಿಕ ಬಂಧಿತ ಪಾಕಿಸ್ತಾನ ಪ್ರಜೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2014 ರಲ್ಲಿ ಅಕ್ರಮವಾಗಿ ದೆಹಲಿಗೆ ಬಂದು ನೆಲೆಸಿದ್ದ.

ಅಲ್ಲಿ, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾನೆ. ಬಳಿಕ, 2018ರಲ್ಲಿ ಕುಟುಂಬ ಸಮೇತ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Key words: action, against,illegal Pak citizens, Home Minister, Parameshwar