ಬೆಂಗಳೂರು,ಡಿ,7,2019(www.justkannada.in): ಹೈದರಾಬಾದ್ ನಲ್ಲಿ ಪಶುವೈದ್ಯೆ ದಿಶಾ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣ ದೇಶದಾದ್ಯಂತೆ ಸಾಕಷ್ಟು ಸುದ್ದಿಯಾಗಿತ್ತು. ಹೀಗಾಗಿ ಮಹಿಳೆಯರ ಸುರಕ್ಷತೆಗೆ ಕ್ರಮ ವಹಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹಿಳೆಯರ ಸುರಕ್ಷತೆಗಾಗಿ ಮತ್ತು ರಾತ್ರಿ ವೇಳೆ ಅಪರಾಧ ತಡೆಗೆ ಕ್ರಮ ವಹಿಸುವ ಕುರಿತು ಕಾನೂನು ಮತ್ತು ಗೃಹ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಈ ವೇಳೆ ಸುರಕ್ಷತಾ ಆ್ಯಪ್ ಮತ್ತು ನೈಟ್ ಬೀಟ್ ವಾಹನಗಳ ಅಪ್ ಗ್ರೇಡ್ ಮಾಡಲು ನಿರ್ಧರಿಸಲಾಗಿದೆ. ಮಹಿಳೆಯರು ಸುರಕ್ಷತಾ ಆ್ಯಪ್ ಬಳಸಬೇಕು. ಸುರಕ್ಷತಾ ಆ್ಯಪ್ ನ ಚುರುಕುಗೊಳಿಸಲಾಗಿದ್ದು 9 ನಿಮಿಷದಿಂದ 7 ನಿಮಿಷಕ್ಕೆ ರೆಸ್ಪಾನ್ಸ್ ಅವಧಿಯನ್ನ ಇಳಿಸಲಾಗಿದೆ. 7 ನಿಮಿಷದಲ್ಲಿ ಪೊಲೀಸರು ನಿಮ್ಮ ಸಹಾಯಕ್ಕೆ ಬರ್ತಾರೆ. ಹಾಗೆಯೇ ನೈಟ್ ಬೀಟ್ ನಲ್ಲಿ ಪೊಲೀಸರಿಗೆ ಸಹಾಯ ಮಾಡಲು 30 ಲಕ್ಷ ಸ್ವಯಂ ಸೇವಕರು ಮುಂದೆ ಬಂದಿದ್ದಾರೆ. ಸ್ವಯಂ ಸೇವಕರ ನೋಂದಣಿಯಾಗಲಿದ್ದು ಪೊಲೀಸರಿಗೆ ಸಹಾಯ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಗೃಹ ಇಲಾಖೆಗೆ 183 ರೆಸ್ಪಾನ್ಸ್ ವಾಹನಗಳನ್ನ ನೀಡಲಾಗಿದೆ. ಇದನ್ನ 500ಕ್ಕೇರಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ಪೊಲೀಸರ ರಾತ್ರಿ ಗಸ್ತು ಹೆಚ್ಚಿಸಲು ಸೂಚಿಸಿದ್ದೇನೆ. ರಾಜ್ಯದಲ್ಲಿ 31 ತ್ವರಿತಗತಿ ಕೋರ್ಟ್ ಸ್ಥಾಪಿಸಲಾಗುತ್ತದೆ. ಪ್ರತಿಜಿಲ್ಲೆಯಲ್ಲಿ ಪೋಕ್ಸೊ ವಿಶೇಷ ಕೋರ್ಟ್ ಸ್ಥಾಪಿಸಲಾಗಿದೆ. ಆದರೆ ನ್ಯಾಯಾಧೀಶರ ಕೊರತೆ ಇದ್ದು ಶೀಘ್ರವೇ ನ್ಯಾಯಾಧೀಶರ ನೇಮಕಕ್ಕೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
Key words: Action – safety – women-upgrade -Safety App – Night Beat-Home Minister- Basavaraja Bommai.