ಈ ಬಾರಿ ಹುಟ್ಟುಹಬ್ಬ ಆಚರಣೆ ಇಲ್ಲ: ವಿಡಿಯೋ ಮೂಲಕ ನಟ ದರ್ಶನ್ ಸಂದೇಶ

ಬೆಂಗಳೂರು,ಫೆಬ್ರವರಿ,8,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಮೊದಲ ಬಾರಿಗೆ ವಿಡಿಯೋ ಮೂಲಕ ಮಾತನಾಡಿದ್ದು, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತನ್ನ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ಫೆಬ್ರವರಿ 16 ನಟ ದರ್ಶನ್ ಹುಟ್ಟುಹಬ್ಬ. ಪ್ರತಿವರ್ಷದಂತೆ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಟ ದರ್ಶನ್ ತಿಳಿಸಿದ್ದಾರೆ.

ನಾನು ಈ ವಿಡಿಯೋ ಮಾಡಲು ಕಾರಣ ಜನ್ಮದಿನ. ಪ್ರತಿಸಲವೂ ನಾನು ನಿಂತುಕೊಂಡು ನಿಮಗೆ ಶೇಕ್‌ಹ್ಯಾಂಡ್‌ ಕೊಡುತ್ತಿದ್ದೆ. ಆದರೆ ಈ ಸಲ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಅನಾರೋಗ್ಯದ ಕಾರಣದಿಂದ ಹೆಚ್ಚು ಸಮಯ ನಿಂತುಕೊಳ್ಳಲು ಸಾಧ್ಯವಿಲ್ಲ. ದೂರದ ಊರಿನಿಂದ ಬರುವ ನಿಮಗೆ ಬಿಲ್ಡಿಂಗ್‌ ಮೇಲಿನಿಂದ ಕೈ ಬೀಸಲು ಮನಸ್ಸಿಲ್ಲ. ನನ್ನ ಅನಾರೋಗ್ಯ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಷ್ಟೆ, ಯಾರೂ ಬೇಸರ ಮಾಡಿಕೊಳ್ಳಬಾರದು, ಹೀಗಾಗಿ ಇದೊಂದು ಸಲ ನನ್ನನ್ನು ಕ್ಷಮಿಸಿ. ಮುಂದೊಂದು ದಿನ ಖಂಡಿತವಾಗಿಯೂ ಸಿಗುತ್ತೇನೆ ಎಂದು ಹೇಳಿದ್ದಾರೆ.

ನನ್ನಂಥವನ ಮೇಲೆ ನೀವು ಕೊಟ್ಟ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ. ನನ್ನ ನಂಬಿಕೊಂಡ ಎಲ್ಲರಿಗೂ ಧನ್ಯವಾದಗಳು. ಪ್ರೀತಿಗಿಂತ ಹೆಚ್ಚಾಗಿ ನಿಮ್ಮ ಬೆಂಬಲಕ್ಕೆ ಚಿರಋಣಿ. ಎಲ್ಲ ಸಮಯದಲ್ಲೂ ಜೊತೆಗಿದ್ದ ನಟ ಧನ್ವೀರ್‌, ಪ್ರಾಣಸ್ನೇಹಿತೆ ರಕ್ಷಿತಾ ಪ್ರೇಮ್‌, ಬುಲ್‌ಬುಲ್ ರಚಿತಾ ರಾಮ್ ಗೆ ಧನ್ಯವಾದಗಳು ಎಂದು ದರ್ಶನ್‌ ವಿಡಿಯೋದಲ್ಲಿ ತಿಳಿಸಿದ್ದಾರೆ.

ಹಾಗೆಯೇ ಅಭಿಮಾನಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ನೀವು ಕೇಳಿದಂತೆ ಸೂರಪ್ಪ ಬಾಬು ಅವರ ಹಣವನ್ನು ನಾನು ಮರಳಿ ನೀಡಿದ್ದೇನೆ. ಸೂರಪ್ಪ ಬಾಬು ಅವರಿಗೆ ಆರ್ಥಿಕ ಸಮಸ್ಯೆ ಇದ್ದಾಗಲೇ ನನ್ನ ಜೊತೆ ಸಿನಿಮಾ ಮಾಡಬೇಕೆಂದು ಮುಂದೆ ಬಂದರು. ಈ ಸಿನಿಮಾ ಮಾಡಿದರೆ ಅವರ ಸಮಸ್ಯೆ ಬಗೆಹರಿಯತ್ತದೆಂದು ಅಂದುಕೊಂಡಿದ್ದರು. ನಾನು ಆಗ ಸಿನಿಮಾ ಮಾಡಲು ಒಪ್ಪಿಕೊಂಡೆ. ಆದರೆ ಈಗ ಇಷ್ಟು ಸಮಯ ವ್ಯರ್ಥವಾಗಿದೆ. ಇನ್ನು ಕೂಡ ನಾನು ಸೂರಪ್ಪ ಬಾಬು ಹಣ ಇಟ್ಟುಕೊಂಡರೇ ಸರಿ ಇರುವುದಿಲ್ಲ ಎಂದು ಮರಳಿ ನೀಡಿದ್ದೇನೆ. ಮುಂದೊಂದು ದಿನ ಅವಕಾಶ ಸಿಕ್ಕರೆ, ಸ್ಕ್ರಿಪ್ಟ್‌ ಸಿಕ್ಕರೆ ನಾನು ಸೂರಪ್ಪ ಬಾಬು ಜೊತೆ ಸಿನಿಮಾ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.

Key words: No birthday ,celebration, Actor, Darshan