ಬೆಂಗಳೂರು, ಜನವರಿ,9, 2025 (www.justkannada.in): ದಕ್ಷಿಣ ಭಾರತ ಹಾಗೂ ಕನ್ನಡದ ಹೆಸರಾಂತ ಚಲನಚಿತ್ರ ನಟ ಕಿಶೋರ್ ಕುಮಾರ್. ಜಿ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಈ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, 2024-2025ನೇ ಸಾಲಿನಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2025ರ ಮಾರ್ಚ್ 1 ರಿಂದ 8ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದು, ಚಿತ್ರೋತ್ಸವದ ಕುರಿತು ಹೆಚ್ಚಿನ ಪ್ರಚಾರ ಸಲುವಾಗಿ ಹಿಂದಿ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಜನ ಮನ್ನಣೆ ಪಡೆದಿರುವ ಕನ್ನಡದ ಖ್ಯಾತ ನಟ ಕಿಶೋರ್ ಕುಮಾರ್. ಜಿ ಇವರನ್ನು ಚಿತ್ರೋತ್ಸವದ 16ನೇ ಆವೃತ್ತಿಗೆ ರಾಯಭಾರಿಯಾಗಿ ನೇಮಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಲ್ಸಿಯಂ ನ FIAPF ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು, ಸುಮಾರು 8 ದಿನಗಳ ಕಾಲ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ದೇಶ-ವಿದೇಶಗಳ ಅತ್ಯುನ್ನತ ಚಿತ್ರಗಳ ಪ್ರದರ್ಶನ ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳು, ವಿಚಾರ ಸಂಕಿರಣ ಇನ್ನಿತರ ಚಿತ್ರರಂಗಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೆ ಸಭೆ ನಡೆಸಿ, ಚಿತ್ರೋತ್ಸವದ ದಿನಾಂಕ ಘೋಷಿಸಿದ್ದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ “ಸರ್ವ ಜನಾಂಗದ ಶಾಂತಿಯ ತೋಟ” ಶೀರ್ಷಿಕೆಯಡಿ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿದ್ದು, ಚಿತ್ರೋತ್ಸವಕ್ಕೆ ದೇಶ-ವಿದೇಶಗಳಿಂದ ಅತ್ಯುನ್ನತ ಚಿತ್ರಗಳನ್ನು ತರುವ ಕುರಿತು ಹಾಗೂ ದೇಶ-ವಿದೇಶಗಳ ಸಿನಿಮಾ ರಂಗದ ಗಣ್ಯಾತೀಗಣ್ಯರು ಚಿತ್ರೋತ್ಸವದಲ್ಲಿ ಭಾಗವಹಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು.
Key words: 16th Bangalore International Film Festival, Actor, Kishore, ambassador