ಮೈಸೂರು,ಜನವರಿ,15,2025 (www.justkannada.in): ಈ ದೇಶಕ್ಕೆ ಗಿಡಮರ, ಅರಣ್ಯ ಎಷ್ಟು ಮುಖ್ಯವೋ ರಂಗಭೂಮಿಯೂ ಅಷ್ಟೇ ಮುಖ್ಯ ಎಂದು ನಟ ಪ್ರಕಾಶ್ ರಾಜ್ ನುಡಿದರು.
ಸಾಂಸ್ಕೃತಿಕ ನಗರಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಎರಡನೇ ದಿನಕ್ಕೆ ಕಾಲಿಟ್ಟದೆ. ಬಹುರೂಪಿ ನಾಟಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಪ್ರಕಾಶ್ ರಾಜ್, ಮೈಸೂರು ಅದ್ಭುತವಾದ ಸಾಂಸ್ಕೃತಿಕ ಕೇಂದ್ರ, ಚರ್ಚೆಯ ತಾಣ. ಇಲ್ಲಿ ನಡೆಯ್ತುತಿರುವ ಎಲ್ಲಾ ರಂಗೋತ್ಸವ ಯಶಸ್ವಿಯಾಗಲು ರಂಗಾಸಕ್ತರೇ ಪ್ರಮುಖ ಕಾರಣ. ರಂಗಾಯಣವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಂಗಾಯಣಕ್ಕೆ ಏನೇ ಅನುದಾನ ಮಂಜೂರಾಗಿ, ಕಟ್ಟಡ ಕಟ್ಟಬೇಕಾದರೆ ಅದಕ್ಕೆ ಕಲಾಮಂದಿರಕ್ಕೆ ಹೋಗಬೇಕು. ಜಿಲ್ಲಾಧಿಕಾರಿ ಬಳಿ ಹೋಗಬೇಕು. ರಂಗಾಯಣದ ಹೆಸರಲ್ಲಿ ಏನು ಮಾಡಲು ಆಗುತ್ತಿಲ್ಲ. ಹೀಗಾಗಿ ಬಹುರೂಪಿ ಮುಗಿದ ನಂತರ ಸಿಎಂ ಜೊತೆ ಸಭೆ ಸೇರಿ ರಂಗಾಯಣದ ಉಳಿವಿಗೆ ಚರ್ಚೆ ಮಾಡಬೇಕಿದೆ. ಇದು ಪ್ರೇಕ್ಷಕರಾದಿಯಾಗಿ ಎಲ್ಲರ ಜವಾಬ್ದಾರಿ ಎಂದರು.
ರಂಗಾಯಣ ಉಳಿಯಬೇಕು. ನಮ್ಮ ಮುಂದಿನ ತಲೆಮಾರಿಗೆ ಇತಿಹಾಸವನ್ನೇ ತಿರುಚುವ ಕೆಲಸ ಮಾಡಲಾಗುತ್ತಿದೆ. ಭವಿಷ್ಯದ ಇತಿಹಾಸ ಬರೆದಾಗ ತಪ್ಪು ಮಾಡಿದವರನ್ನು ಮರೆಯಬಹುದು. ಮೌನವಾಗಿರುವವರನ್ನು ಕ್ಷಮಿಸಲು ಆಗುವುದಿಲ್ಲ. ನಾವೆಲ್ಲರೂ ಮಾತನಾಡಬೇಕು. ಪ್ರಶ್ನೆ ಮಾಡಬೇಕು ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಮನುಷ್ಯನಿಗೆ ಎಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಹೇಳುವುದೇ ರಂಗಭೂಮಿ ಕೆಲಸ – ನಟ ಅತುಲ್ ಕುಲಕರ್ಣಿ
ಬಹುರೂಪಿ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಅತುಲ್ ಕುಲಕರ್ಣಿ, ಎಲ್ಲಿಯವರೆಗೂ ನಾವು ಸಾಮಾಜಿಕ ನ್ಯಾಯವನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿವರೆಗೂ ಕೂಡ ಅದು ನಮ್ಮಿಂದ ದೂರವಾಗುತ್ತದೆ. ಸಾಮಾಜಿಕ ನ್ಯಾಯ ತಮಾಷೆಯ ವಿಷಯವಾಗಿದೆ. ನ್ಯಾಯವನ್ನು ನಮ್ಮಿಂದ ಕಿತ್ತುಕೊಂಡಾಗಲಷ್ಟೇ ಅದರ ಬೆಲೆ ಗೊತ್ತಾಗುತ್ತದೆ. ಲಿಬರೇಶನ್ ಎಂಬುದು ಸಕಾರಾತ್ಮಕವಾದ ಶಬ್ಧ. ಆದರೆ ಅದೂ ಕೆಟ್ಟ ಪದದಂತೆ ಕೇಳಿಸುತ್ತಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತದಲ್ಲಿ ಈ ಪದವನ್ನು ನಕರಾತ್ಮಕವಾಗಿ ಬದಲಾಯಿಸಲಾಗುತ್ತಿದೆ. ದೇಶ ಹಾಗೂ ಸಂಸ್ಕೃತಿಗೆ ಇದು ದುರದೃಷ್ಟಕರ ಸಂದರ್ಭ. ಸಮಾಜದಲ್ಲಿ ಏನಾಗುತ್ತಿದೆಯೆಂಬುದು ಜನರಿಗೆ ಅರ್ಥವಾಗುವುದಿಲ್ಲ. ಕೆಟ್ಟದ್ದು ನಡೆಯುತ್ತಿದ್ದರೂ ಅದನ್ನು ಸ್ವೀಕರಿಸುತ್ತಿದ್ದಾರೆ. ಆದ್ದರಿಂದ ಶೋಷಣೆ ವಿರುದ್ಧ ಮಾತನಾಡುವ, ಸತ್ಯ ಕಥೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ರಂಗಕರ್ಮಿಗಳು ಧೈರ್ಯದಿಂದ ಮಾಡಬೇಕಾಗಿದೆ. ಮನುಷ್ಯನಿಗೆ ಎಲ್ಲಿ ನ್ಯಾಯ ಸಿಗುತ್ತಿಲ್ಲ, ಎಲ್ಲಿ ಅನ್ಯಾಯವಾಗುತ್ತಿದೆ ಎಂದು ಹೇಳುವುದೇ ರಂಗಭೂಮಿ ಕೆಲಸ ಎಂದರು.
ಸಂವಿಧಾನದಲ್ಲಿ ನಮಗೆ ಸಿಗದಿರುವ ವಿಮೋಚನೆ, ಸಾಮಾಜಿಕ ನ್ಯಾಯವನ್ನು ಹೇಳುವುದೇ ನಾಟಕದ ಕಾಯಕ. ಜನರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ, ರಂಗಭೂಮಿ ಅದನ್ನು ಅರ್ಥೈಸುವ ಕೆಲಸ ಮಾಡುತ್ತಿದೆ. ಸಿನಿಮಾದಲ್ಲಿ ಶೇ.80ರಷ್ಟು ವ್ಯಾಪಾರಿ ಧೋರಣೆ, ಶೇ. 20 ರಷ್ಟು ಕಲೆ ಅಡಗಿರುತ್ತದೆ. ಆದರೆ, ನಾಟಕ ಆಗಲ್ಲ. ಅದು ಜನರಿಗೆ ಬೇಕಾದ ಅವಶ್ಯಕ. ಬಿಡುಗಡೆ ಎಂಬುದು ಮನುಷ್ಯನ ಜೀವನಕ್ಕೆ ಪೂರಕವಾಗಿ ಬೇಕಾದ ವಿಚಾರ. ಆದರೆ ಪ್ರಸ್ತುತ ಜನಪರ, ಸಾಮಾಜಿಕ ನ್ಯಾಯ, ಎಡಪಂಥೀಯ ಎಂದರೆ ಜನ ನಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಡುಗಡೆ ಎಂಬ ಪದ ಎಷ್ಟು ಅರ್ಥಪೂರ್ಣವಾಗಿದೆ. ನೀನಾಸಂಗೆ ಪೋರ್ಡ್ ಫೌಂಡೇಶನ್ ಮೊದಲ ವರ್ಷ ಹಣ ನೀಡುತ್ತದೆ. ಆದರೆ, ಎರಡನೇ ವರ್ಷ ಕೆ.ವಿ. ಸುಬ್ಬಣ್ಣ ಅವರು ಅದನ್ನು ತಿರಸ್ಕರಿಸುತ್ತಾರೆ. ಖಾಸಗಿ ಕಂಪನಿಯ ದೇಣಿಗೆ ಸ್ವೀಕಾರ ಮಾಡಿದರೇ ನಮಗೆ ಸ್ವಾತಂತ್ರ್ಯ ಸಿಗುವುದಿಲ್ಲ. ಹೀಗಾಗಿ ಸುಬ್ಬಣ್ಣ ಹಣ ಸ್ವೀಕರಿಸದೆ ನಿರಾಕರಿಸುತ್ತಾರೆ. ಬಿಡುಗಡೆ ಮಹತ್ವವನ್ನು ಇದು ಸಾರುತ್ತದೆ. ಕರ್ನಾಟಕವು ರಾಷ್ಟ್ರಕ್ಕೆ, ರಂಗಭೂಮಿಗೆ ಅಪೂರ್ವವಾದ ಕೊಡುಗೆಯನ್ನು ಕೊಟ್ಟಿದೆ. ಅದಕ್ಕೆ ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣ ಅಂಥವರು ಕಾರಣ. ಭಾರತೀಯ ರಂಗಭೂಮಿಗೆ ರಾಜ್ಯವು ನೀಡಿರುವ ಕೊಡುಗೆಯನ್ನು ಎನ್‌ಎಸ್ ಡಿಯಲ್ಲಿ ಕಲಿತವರೂ ಸೇರಿದಂತೆ ದೇಶದ ಎಲ್ಲ ರಂಗಕರ್ಮಿಗಳು ಮಕ್ಕಳಂತೆ ಸಂಭ್ರಮಿಸುತ್ತೇವ ಎಂದು ನಟ ಅತುಲ್ ಕುಲಕರ್ಣಿ ತಿಳಿಸಿದರು.
Key words: Mysore, Actor, Prakash Raj, Bahurupi National Theatre Festival