ಬೆಂಗಳೂರು,ಏಪ್ರಿಲ್,6,2021(www.justkannada.in): ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತವಾಗಿ ಫೋರ್ಟಿಸ್ ಆಸ್ಪತ್ರೆಯು ಕನ್ನಿಂಗ್ ಹ್ಯಾಮ್ ಶಾಖೆಯಲ್ಲಿ ಎರಡನೇ “ಕ್ಯಾನ್ಸರ್ ಘಟಕ”ವನ್ನು ಪ್ರಾರಂಭಿಸಿದ್ದು, ನಟ ರಮೇಶ್ ಅರವಿಂದ್ ಅವರು ಈ ಘಟಕವನ್ನು ಮಂಗಳವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ನಟ ರಮೇಶ್ ಅರವಿಂದ್, ರೋಗದ ವಿರುದ್ಧ ಹೊರಾಡಲು ಸ್ಥೈರ್ಯ ಮುಖ್ಯ. ಅದು ಕ್ಯಾನ್ಸರ್ ಆದರೂ ಸರಿಯೇ, ಛಲವಿದ್ದರೆ ಎಂಥ ರೋಗವಾದರೂ ಗುಣಪಡಿಸಿಕೊಳ್ಳಬಹುದು. ಹೀಗಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರು ಅಂಜದೆ, ಹೋರಾಡಿ, ಉತ್ತಮ ಬದುಕಿನೊಂದಿಗೆ ಹಿಂತಿರುಗುತ್ತೀರಿ ಎಂದು ಆತ್ಮಸ್ಥೈರ್ಯ ತುಂಬಿದರು.
ಹಿಂದೆಲ್ಲಾ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಾಗಿ ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಹೆಚ್ಚು ಶುಲ್ಕ ನೀಡಿ ಚಿಕಿತ್ಸೆ ಪಡೆಯಬೇಕಿತ್ತು. ಆದರೆ , ಇಂದು ಎಲ್ಲೆಡೆ ಕ್ಯಾನ್ಸರ್ ಚಿಕಿತ್ಸೆ ದೊರೆಯುತ್ತಿದೆ. ಅದರಲ್ಲೂ ಫೋರ್ಟಿಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತರಿಗಾಗಿ ಉತ್ತಮ ಹಾಗೂ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡುತ್ತಿರುವುದು ಸಂತಸದ ವಿಷಯ ಎಂದು ರಮೇಶ್ ಅರವಿಂದ್ ನುಡಿದರು.
ಕನ್ನಿಂಗ್ಹ್ಯಾಮ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕ ತೆರೆದಿರುವುದು ಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ಕೇಂದ್ರವು ಗುಣಮಟ್ಟದ ಕ್ಯಾನ್ಸರ್ ಆರೈಕೆ ನೀಡುವ ಭರವಸೆ ಇದೆ. ಈ ಸೌಲಭ್ಯಗಳ ಲಾಭವನ್ನು ರೋಗಿಗಳು ಪಡೆದುಕೊಳ್ಳಲಿ ಎಂದರು.
ಫೋರ್ಟಿಸ್ ಆಸ್ಪತ್ರೆ ವಲಯ ನಿರ್ದೇಶಕರಾದ ಮನಿಷ್ ಮಟ್ಟು ಮಾತನಾಡಿ, ಬನ್ನೇರುಘಟ್ಟದ ಶಾಖೆಯಲ್ಲಿ ಫೋರ್ಟಿಸ್ ಕ್ಯಾನ್ಸರ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೂ ಸುಮಾರು 4 ಸಾವಿರ ಕ್ಯಾನ್ಸರ್ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದೇವೆ. ಫೋರ್ಟಿಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ಸಿಟಿ ಸೆಂಟರ್ ಕ್ಯಾನ್ಸರ್ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ ಮತ್ತು ಹೆಮಟೊ-ಆಂಕೊಲಾಜಿಗೆ ಹೆಚ್ಚಿನ ಗಮನವನ್ನು ನೀಡಿ ಕ್ಯಾನ್ಸರ್ ರೋಗಿಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತಿದ್ದೇವೆ. ಇದೀಗ ಕನ್ನಿಂಗ್ಹ್ಯಾಮ್ ರಸ್ತೆಯಲ್ಲೂ ಕ್ಯಾನ್ಸರ್ ಘಟಕ ತೆರೆಯಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ ಪ್ರೋಗ್ರಾಂನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ 1 ಲಕ್ಷ ಜನರಲ್ಲಿ 146 ಮಂದಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಎರಡನೇ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಅನ್ನು ಪ್ರಾರಂಭಿಸುವುದು ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ, ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ಶ್ರಮಿಸಲಿದ್ದೇವೆ ಎಂದರು. ಈ ವೇಳೆ ಹೆಮೆಟೋ ಆಂಕೋಲಜಿ ನಿರ್ದೇಶಕಿ ಡಾ.ನಿತಿ ರೈಜದ್ ಉಪಸ್ಥಿತರಿದ್ದರು.
Key words: Actor -Ramesh Aravind -inaugurated -new cancer unit -Fortis Hospital.