ಮೈಸೂರು, ಮೇ, 5,2021(www.justkannada.in): ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್ ಪರೀಕ್ಷೆ ವರದಿ ಬರಲು ತಡವಾಗುವುದನ್ನು ತಪ್ಪಿಸಲು ಹೆಚ್ಚುವರಿಯಾಗಿ ಲ್ಯಾಬ್ ಗಳನ್ನು ತೆರೆಯಲು ತೀರ್ಮಾನಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಕೋವಿಡ್ 19ಗೆ ಸಂಬಂಧಪಟ್ಟಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮದ ಸ್ಥಿತಿಗತಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೊವಿಡ್ ವರದಿಯನ್ನು ತಿಳಿದುಕೊಳ್ಳಲು 3 ರಿಂದ 5 ದಿನಗಳು ಬೇಕಾಗುತ್ತದೆ. ಈಗಾಗಲೇ 77 ಲ್ಯಾಬ್ ಗಳಿದ್ದು, ಹೆಚ್ಚುವರಿಯಾಗಿ ಲ್ಯಾಬ್ ಗಳನ್ನು ತೆರೆದು ಆದಷ್ಟು ಬೇಗ ಕೊವಿಡ್ ವರದಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಮೊದಲು 150 ರಿಂದ 200 ಕೋವಿಡ್ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ಈಗ 2 ರಿಂದ 3 ಸಾವಿರ ಕೊವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಕೊವಿಡ್ ಬಂದವರೆಲ್ಲರೂ ಆಕ್ಸಿಜನೈಟೆಡ್ ಬೆಡ್ ಬೇಕೆಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಎಲ್ಲವನ್ನು ಸರ್ಕಾರಿ ಆಸ್ಪತ್ರೆಗಳು ನಿಯಂತ್ರಿಸುವ ವ್ಯವಸ್ಥೆ ಆಗುತ್ತಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಕೇಳುವ ಎಲ್ಲಾ ಆಸ್ಪತ್ರೆಗಳಿಗೂ ಸಹ ಕಳುಹಿಸಿಕೊಡಲಾಗುತ್ತಿದೆ ಎಂದರು. ಲಸಿಕೆಯನ್ನು ಕ್ರಮಬದ್ದವಾಗಿ ಬಳಸಲು ಹಾಗೂ ಅದನ್ನು ಕಾಳಸಂತೆಯಲ್ಲಿ ಮಾರಾಟವಾಗದಂತೆ ತಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆನ್ ಲೈನ್ ಮೂಲಕ ಹೆಸರನ್ನು ನೋಂದಣಿ ಮಾಡುವವರಿಗೆ ಲಸಿಕೆ ನೀಡುವ ಕ್ರಮವನ್ನು ಕೈಗೋಳ್ಳಲಾಗುತ್ತಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಪ್ರತಿನಿತ್ಯ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ನಿರಂತರವಾಗಿ ಬದಲಾವಣೆಗಳು ನಡೆಯುತ್ತಿದೆ ಎಂದರು.
ಕೊವಿಡ್ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಾಡಿರುವ ಕ್ರಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂದಿಗೂ ಸಹ ಮಾರ್ಕೆಟ್ ಗಳಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸದೆ ಜನರು ಗುಂಪಾಗಿ ಸೇರುತ್ತಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಪಾಲಿಕೆಯ ಮಹಾಪೌರರಾದ ರುಕ್ಮಿಣಿ ಮಾದೇಗೌಡ, ಉಪ ಮಹಾಪೌರರಾದ ಅನ್ವರ್ ಬೆಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪಾಲಿಕೆ ಆಯುಕ್ತರಾದ ಶಿಲ್ಪ ನಾಗ್, ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ನಂಜರಾಜ ಸೇರಿದಂತೆ ಇತರರು ಹಾಜರಿದ್ದರು.
Key words: Additionally- lab -open – ready – report – soon –possible-Minister -ST Somashekhar.