ಮೈಸೂರು ಫೆಬ್ರವರಿ ,19,2025 (www.justkannada.in): ಸಾರ್ವಜನಿಕರೊಂದಿಗಿನ ಪೊಲೀಸರ ವರ್ತನೆ ಶಿಸ್ತು ಬದ್ಧವಾಗಿರಬೇಕು ಎಂದು ರಾಜ್ಯ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆಶಿಸಿದರು.
ಮೈಸೂರಿನ ಜ್ಯೋತಿನಗರದಲ್ಲಿರುವ ಮಹಿಳಾ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ 9ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸೇವೆಗಾಗಿಯೇ ಪೊಲೀಸ್ ಇಲಾಖೆ ಇದೆ. ಆದಕಾರಣ, ಅವರೊಂದಿಗೆ ನಮ್ಮ ವರ್ತನೆ ಶಿಸ್ತುಬದ್ಧವಾಗಿರಬೇಕು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬರಬೇಕು. ಹೆಣ್ಣು ಮಕ್ಕಳಿಗೆ ಹೆಣ್ಣುಮಕ್ಕಳ ಬಗ್ಗೆ ಸ್ಪಂದನೆ ಇರಬೇಕು. ಸೇವಾ ಮನೋಭಾವ ಹೊಂದಬೇಕು. ಸ್ವಯಂ ಶಿಸ್ತು ಇರಬೇಕು ಎಂದು ಸೂಚ್ಯವಾಗಿ ತಿಳಿಸಿದರು.
ನಿಮ್ಮ ಕನಸು ಬೇರೆಯದೇ ಇದ್ದರೂ ಖಾಕಿ ಬಟ್ಟೆ ಹಾಕಿದ್ದೀರಿ, ಇದು ನಿಮ್ಮ ಸುಧೈವ. ನೀವುಗಳು ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ ಆಗಬೇಕು. ಹೆಣ್ಣು ಮಕ್ಕಳು ಎನ್ನುವ ವಿಷಯವನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ ಎಂದ ಅವರು ನಮ್ಮ ಗುರಿ ನಿಮ್ಮನ್ನು ಸದೃಢಗೊಳಿಸುವುದಾಗಿದೆ ಎಂದರು.
ಖಾಕಿ ಬಟ್ಟೆ ಹಾಕಿದ ನಂತರ ನಮ್ಮ ವೃತ್ತಿಗೆ ಆದ್ಯತೆ ಕೊಡಬೇಕು. ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ, ಆ ವೇಳೆ ತಾನು ಹೆಣ್ಣು ಎಂಬ ಮನೋಭಾವ ಬದಲಿಸಿಕೊಳ್ಳಿ. ನಮ್ಮ ಹೆಣ್ಣುಮಕ್ಕಳಿಗೆ ಇರುವ ತಾಕತ್ತು ಪ್ರದರ್ಶನ ಆಗಬೇಕು ಎಂದು ಹೇಳಿದರು.
ನೆರೆಯ ತೆಲಂಗಾಣ ಹಾಗೂ ಆಂದ್ರ ಪ್ರದೇಶ ರಾಜ್ಯದಲ್ಲಿ ಮಾಸಿಕ ಕೇವಲ 5 ಸಾವಿರ ತರಬೇತಿ ಭತ್ಯೆ ನೀಡಲಾಗುತ್ತಿದೆ. ನಮ್ಮ ಕರ್ನಾಟಕ ಸರ್ಕಾರ ನಿಮಗೆ 45000 ರೂಪಾಯಿ ನೀಡುತ್ತಿದೆ. ಅದಕ್ಕಾಗಿ ನೀವು ಈ ನೆಲಕ್ಕೆ ಬದ್ದರಾಗಿರಬೇಕು. ಬಂದ ಹಣವನ್ನು ದುರುಪಯೋಗ ಮಾಡದೆ, ಉಳಿತಾಯದೊಟ್ಟಿಗೆ ಚೆನ್ನಾಗಿ ಆಹಾರ ಸೇವನೆ ಮಾಡಿ ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಸಲಹೆ ಮಾಡಿದರು.
ಪ್ರಶಿಕ್ಷಣಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಚಿಕನ್ ನೀಡಿ ಎಂದು ಶಾಲೆಯ ಪ್ರಾಂಶುಪಾಲೆ ಗೀತಾ ಅವರಿಗೆ ಸಲಹೆ ಮಾಡಿದ ಅಲೋಕ್ ಕುಮಾರ್, ಕ್ರೀಡಾಳುಗಳು ತಮ್ಮ ಚಟುವಟಿಕೆ ಮುಂದುವರೆಸಿ, ಭವಿಷ್ಯದ ದಿನಗಳಲ್ಲಿ ಅದರಿಂದ ಹೆಚ್ಚಿನ ನೆರವಾಗಲಿದೆ ಎಂದರು.
ಸೈಬರ್ ಕ್ರೈಮ್ ಪ್ರಮಾಣ ರಾಜ್ಯದಲ್ಲಿ ಶೇ.10 ಇದ್ದರೆ, ಬೆಂಗಳೂರಿನಲ್ಲಿ ಶೇ.30 ರಷ್ಟು ಪ್ರಮಾಣದಲ್ಲಿ ಸೈಬರ್ ಕ್ರೈಮ್ ಆಗುತ್ತಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ತರಬೇತಿ ಪಡೆಯಲು ಗಮನ ಕೊಡಿ. ಸರಗಳ್ಳತನ, ದರೋಡೆ ಇತ್ತೀಚಿಗೆ ಕಡಿಮೆ ಆಗುತ್ತಿದ್ದು, ಸೈಬರ್ ಅಪರಾಧದ ಹೆಚ್ಚಾಗುತ್ತಿರುವುದರಿಂದ ಅದರ ಬಗ್ಗೆ ತಿಳಿದುಕೊಳ್ಳಬೇಕು. ಅದರೊಂದಿಗೆ ವಿಧಿವಿಜ್ಞಾನ ವಿಷಯವೂ ಕೂಡ ಇಂದು ಆದ್ಯತೆಯ ವಿಷಯವಾಗಿದ್ದು, ಆ ಬಗ್ಗೆ ಕೂಡ ಅರಿವು ಅಗತ್ಯ. ಪುಸ್ತಕದ ವಿಷಯ ಮಾತ್ರವಲ್ಲದೆ, ಇಂಟರ್ಯಾಕ್ಟೀವ್ ತರಬೇತಿ ಇರಲಿ. ಬೋಧನಾ ಪ್ರಕ್ರಿಯೆ ಬದಲಾಗಬೇಕು, ಪೊಲೀಸ್ ಲೀಡರ್ ಶಿಪ್ ಬಗ್ಗೆ ಗಮನ ನೀಡಿ ಎಂದು ಸಲಹೆ ನೀಡಿದರು.
ಹೊರಾಂಗಣ ಮತ್ತು ಒಳಾಂಗಣದ ಬಗ್ಗೆ ಸಮನ್ವಯತೆ ಇರಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಗುಂಪು ನಿಯಂತ್ರಣದ ಬಗ್ಗೆ ಅರಿವಿರಬೇಕು. ಪೊಲೀಸರಿಗೆ ಧೈರ್ಯ ಕೂಡ ಮುಖ್ಯ. ಆ ಸಲುವಾಗಿಯೇ ಮೊಟಾರ್ ಸೈಕಲ್ ಓಡಿಸುವ ತರಬೇತಿ ಕೊಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಪಿಸ್ತೂಲ್ ಫೈರಿಂಗ್ ಮೂಲಕ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ನಿಮ್ಮ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳಿ ಎಂದರು.
ವೇದಿಕೆಯಲ್ಲಿ ಮಹಿಳಾ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಗೀತಾ, ಸೆಸ್ಕ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಹೂಗಾರ್, ಡಿವೈಎಸ್ಪಿ ಶಂಕರೇಗೌಡ, ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಗ್ರಾಮೀಣರೇ ಹೆಚ್ಚು :
9 ನೇ ಬುನಾದಿ ತರಬೇತಿಯಲ್ಲಿ 259 ಪ್ರಶಿಕ್ಷಣಾರ್ಥಿಗಳಿದ್ದು, ಗ್ರಾಮೀಣ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 200 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದರೆ, 59 ಮಂದಿ ನಗರ ವ್ಯಾಪ್ತಿಯವರಾಗಿದ್ದಾರೆ. ಆ ಪೈಕಿ ಅತಿ ಚಿಕ್ಕ ವಯಸ್ಸಿನ 21 ವರ್ಷದ ಒಬ್ಬರು ಹಾಗೂ ಗರಿಷ್ಠ 32 ವಯಸ್ಸಿನವರೆಗೆ ಆಯ್ಕೆಯಾಗಿದ್ದಾರೆ. ಒಟ್ಟು 259 ಪೈಕಿ 41 ಮಂದಿ ವಿವಾಹಿತರಾಗಿದ್ದರೆ, 218 ಮಂದಿ ಅವಿವಾಹಿತರು.
ಬಹುತೇಕ ಪದವೀಧರರು:
ಬಿಇ ಪದವಿಯ 20, ಬಿಟೆಕ್ ಪದವಿಯ 1, ಬಿಕಾಂ 55, ಬಿಎ 50, ಬಿಎಸ್ಸಿ 68, ಬಿಎಬಿಇಡಿ 6, ಬಿಬಿಎಂ 2, ಬಿಸಿಎ 5, ಬಿಎಸ್ಸಿ ಬಿಇಡಿ 6, ಬಿಎಸ್ ಡಬ್ಯೂ 2, ಡಿಪ್ಲೊಮಾ 1, ಎಂಕಾಂ 11, ಎಂಕಾಂ ಬಿಇಡಿ 1, ಎಂಎ 6, ಎಂಎ ಬಿಇಡಿ 3, ಎಂಬಿಎ 3, ಎಂಎಸ್ಸಿ 8 ಹಾಗೂ 11 ಮಂದಿ ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದಾರೆ.
Key words: attitude, police , public, disciplined, ADGP, Alok Kumar