ಬೆಂಗಳೂರು,ಜುಲೈ,4,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಅವರನ್ನ ಬಂಧಿಸಿದ ಸಿಐಡಿ ತನಿಖಾ ತಂಡಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಪಿಎಸ್ ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು, ಇಂದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲೇ ಐತಿಹಾಸಿಕ. ಸಿಐಡಿ ತನಿಖಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಸಿಐಡಿ ನೇತೃತ್ವ ವಹಿಸಿರುವ ದಕ್ಷ ಅಧಿಕಾರಿ, ಪಿ.ಎಸ್.ಸಂಧು ಅವರು, ಎಷ್ಟೇ ರಾಜಕೀಯ ಮತ್ತು ಅಧಿಕಾರಿಶಾಹಿ ಮಟ್ಟದಲ್ಲಿ ಒತ್ತಡ ಎದುರಾದರೂ ಮಣಿಯದೆ ತನಿಖಾ ತಂಡವನ್ನು ಮುನ್ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳು.
ಇನ್ನು, ಪಿಎಸ್ ಐ ಕರ್ಮಕಾಂಡದ ತನಿಖೆಯಲ್ಲಿ ಸಿಐಡಿ ಸಾಗಬೇಕಿರುವ ದೂರ ಬಹಳಷ್ಟಿದೆ. ಕೆಳ, ಹಿರಿಯ ಹಂತದ ಅಧಿಕಾರಿಗಳ ಜತೆಗೆ ಸರಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವೀ ಸ್ಥಾನಗಳಲ್ಲಿರುವ ಕಿಂಗ್ ಪಿನ್ ಗಳನ್ನು ಸಿಐಡಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈ ಪ್ರಭಾವಿಗಳು ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ನಾನು ಮೊದಲೇ ಹೇಳಿದ್ದೆ. ಪಿಎಸ್ ಐ ಹಗರಣದಲ್ಲಿ ಒಬ್ಬರು ಮಹಾನ್ ಕಿಂಗ್ ಪಿನ್ ಇದ್ದಾರೆ. ಅವರ ಹೆಸರು ಹೇಳಿದರೆ ಸರಕಾರವೇ ಬಿದ್ದು ಹೋಗುತ್ತದೆ. ಹೀಗೆ ಹೇಳಿದಾಗ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡ್ತಾರೆ ಎಂದಿದ್ದರು. ದಾಖಲೆ ಕೊಡಿ ಎಂದಿದ್ದರು. ಈಗ ಅವರು ಏನು ಹೇಳುತ್ತಾರೆ? ಎಂದು ಬಿಜೆಪಿ ನಾಯಕರಿಗೆ ಹೆಚ್.ಡಿಕೆ ಟಾಂಗ್ ನೀಡಿದರು.
Key words: ADGP -Amrit Paul -arrested -PSI scam-HDK – CID.